ಈ ಕೊರೊನಾ ಕಾಲದಲ್ಲಿ ಎಲ್ಲಾ ಕಡೆ ಲಾಕ್ ಡೌನ್ ಆಗಿರುವ ಪರಿಣಾಮ ಮನೆಯಿಂದ ಹೊರಗೆ ಹೋಗೋದೂ ಕಷ್ಟ. ಹೋದ್ರೂ ಎಲ್ಲಿಯೂ ಏನೂ ಸಿಗಲ್ಲ. ಎಲ್ಲಿಯೂ ಕುಳಿತುಕೊಳ್ಳೋಕೂ ಆಗಲ್ಲ. ಕ್ಲಬ್, ಪಬ್, ಬಾರ್​​ ಗೆ ಹೋಗೋರಿಗಂತೂ ತುಂಬಾ ಬೋರ್ ಆಗಿಬಿಟ್ಟಿದೆ. ಇಷ್ಟರ ನಡುವೆ ಮದ್ಯಪ್ರಿಯರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ ದೆಹಲಿ ಸರ್ಕಾರ.

ಕೊರೊನಾ ಕಳೆದ ಒಂದೂವರೆ ವರ್ಷದಿಂದ ಕಾಡಿದ್ದು ಅಷ್ಟಿಷ್ಟಲ್ಲ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈನಂತಹ ಮಹಾನಗರಗಳೇ ಸ್ತಬ್ಧವಾಗಿ ಹೋಗಿವೆ. ಈ ಕೊರೊನಾ ಅನ್ನೋದು ಎಲ್ಲರನ್ನೂ ಕಟ್ಟಿ ಹಾಕಿದೆ. ಮನೆಯಲ್ಲೇ ದಿಗ್ಬಂಧನ ಹಾಕಿ ಕೂರಿಸಿಬಿಟ್ಟಿದೆ. ಯಾರೂ ಎಲ್ಲಿಯೂ ಹೋಗೋ ಹಾಗಿಲ್ಲ. ಎಲ್ಲಿಂದಲೂ ಬರೋ ಹಾಗಿಲ್ಲ. ಎಲ್ಲೂ ಓಡಾಡೋ ಹಾಗಿಲ್ಲ. ಎಲ್ಲಾ ಕಡೆ ನಿಶ್ಯಬ್ಧ. ಲಾಕ್​ಡೌನ್ ವಿಸ್ತರಣೆ ಆಗ್ತಾನೇ ಇದೆ. ಮುಂದೆ ಈ ಕೊರೊನಾ ಮತ್ತೆಷ್ಟು ಕಾಟ ಕೊಡುತ್ತೊ ಈಗಲೇ ಹೇಳೋದಕ್ಕೆ ಆಗ್ತಿಲ್ಲ. ಹೀಗಾಗಿ ಯಾವಾಗ ಯಾವ ನಗರ ಬಂದ್ ಆಗುತ್ತೋ, ಯಾವ ನಗರ ಓಪನ್ ಆಗುತ್ತೋ ಹೇಳೋಕೇ ಸಾಧ್ಯಾನೇ ಇಲ್ಲ.

ಮುಂಬೈ ಇರಬಹುದು. ಬೆಂಗಳೂರು ಇರಬಹುದು. ರಾಷ್ಟ್ರ ರಾಜಧಾನಿ ದೆಹಲಿ ಇರಬಹುದು. ಕೊರೊನಾ ಇಲ್ಲದ ಕಾಲದಲ್ಲಿ ಹೇಗಿತ್ತು ಊಹಿಸಿಕೊಳ್ಳಿ. ಅದರಲ್ಲೂ ನೈಟ್ ಲೈಫ್ ಅನ್ನು ಒಮ್ಮೆ ನೆನಪಿಸಿಕೊಳ್ಳಿ. ಪಬ್,ಕ್ಲಬ್, ಬಾರ್ ಗಳೆಲ್ಲ ಜನರಿಂದ ತುಂಬಿ ತುಳಕ್ತಾ ಇದ್ವು. ದಿನವೆಲ್ಲ ಸಿಟಿಯಲ್ಲಿ ತಮ್ಮ ತಮ್ಮ ಕೆಲಸಕ್ಕಾಗಿ ಓಡಾಡ್ತಿದ್ದ ಜನ ಸಂಜೆ ಆಗ್ತಾ ಇದ್ದಂತೆ ತಮ್ಮ ಹವ್ಯಾಸಕ್ಕೆ ತಕ್ಕಂತೆ, ತಮ್ಮ ಅಭಿರುಚಿಗೆ ತಕ್ಕಂತೆ ಕ್ಲಬ್ಬೋ, ಪಬ್ಬೋ ಅಂತ ಸೇರಿಕೊಂಡು ಬಿಡ್ತಾ ಇದ್ರು. ಒಂದಿಷ್ಟು ಜನ ಸೇರಿ ಹರಟೆ ಹೊಡೀತಾ ಇದ್ರು. ಇದರಿಂದ ಜನರಿಗೂ ರಿಲ್ಯಾಕ್ಸ್. ಮತ್ತೊಂದು ಕಡೆ ಭರ್ಜರಿ ವ್ಯಾಪಾರ. ಆದ್ರೆ ಈಗ ಹಾಗೆ ಇಲ್ವಲ್ವಾ. ಎಲ್ಲಾ ಕಡೆ ಬಂದ್ ಬಂದ್ ಬಂದ್. ಹೀಗಾಗಿ ಕ್ಲಬ್, ಪಬ್, ಬಾರ್ ಗಳಲೆಲ್ಲ ಮೌನ ಆವರಿಸಿ ಅದೆಷ್ಟು ದಿನಗಳು ಕಳೆದು ಹೋದವು ನೋಡಿ.

ರಾಷ್ಟ್ರ ರಾಜಧಾನಿ ದೆಹಲಿಯಂತೂ ಹಗಲು ರಾತ್ರಿ ಆ್ಯಕ್ಟೀವ್ ಆಗಿ ಇರ್ತಾ ಇದ್ದ ನಗರ. ಒಂದು ಕಡೆ ಹೊರಗಡೆಯಿಂದ ಬರೋ ಜನ, ವಿಮಾನಗಳಲ್ಲಿ ಬಂದಿಳಿಯೋ ಜನ, ಟ್ರೇನ್​ಗಳಲ್ಲಿ ಬಂದಿಳಿಯೋ ಜನ, ದೆಹಲಿಯಲ್ಲೇ ಇರುವ ಲಕ್ಷಾಂತರ ಜನ ಇವರೆಲ್ಲ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡ್ತಾ ಇದ್ರು. ಜನದಟ್ಟಣೆ, ವಾಹನದಟ್ಟಣೆ ಎಲ್ಲಾ ಕಡೆ ಕಾಣ್ತಾ ಇತ್ತು. ಆದ್ರೆ ಈಗ ಕೆಂಪುಕೋಟೆಯ ಬದಿಯಿಂದ ಹಿಡಿದು ಗಾಜಿಯಾಬಾದ್ ತುದಿಯ ತನಕ ಎಲ್ಲಾ ಕಡೆ ನೀರವ ಮೌನ.

ಲಿಕ್ಕರ್ ಹೋಮ್ ಡೆಲಿವರಿಗೆ ದೆಹಲಿ ಸರ್ಕಾರ ಅಸ್ತು
ರಾಷ್ಟ್ರ ರಾಜಧಾನಿ ದೆಹಲಿಯ ಮದ್ಯಪ್ರಿಯರಿಗೆ ಇಲ್ಲಿನ ಸರ್ಕಾರ ಒಂದು ಗುಡ್ ನ್ಯೂಸ ಕೊಟ್ಟಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಇಂತದ್ದೊಂದು ತೀರ್ಮಾನ ಮಾಡಿದೆ. ಅದೇನು ಅಂದ್ರೆ ಮದ್ಯಪ್ರಿಯರು ಇನ್ನು ಹಗಲಾಗಲಿ ,ರಾತ್ರಿಯಾಗಲಿ ತಮಗೆ ಇಷ್ಟವಾದ ಡ್ರಿಂಕ್ಸ್ ಹುಡುಕಿಕೊಂಡು ಎಲ್ಲಿಯೂ ಹೋಗಬೇಕಾಗಿಲ್ಲ. ತಾವಿದ್ದಲ್ಲೇ ಅದನ್ನು ತರಿಸಿಕೊಳ್ಳಬಹುದು. ಅಂದ್ರೆ ಲಿಕ್ಕರ್ ಹೋಮ್ ಡೆಲಿವರಿ ಸಿಸ್ಟಮ್​ಗೆ ದೆಹಲಿ ಸರ್ಕಾರ ಓಕೆ ಅಂದಿದೆ. ಇಷ್ಟು ದಿನ ಹೇಗೆ ಎಲ್ಲಾ ಮಹಾನಗರಗಳಲ್ಲಿ ಫುಡ್ ಡೆಲಿವರಿ ಸಾಮಾನ್ಯವಾಗಿತ್ತೋ ಹಾಗೆ ಇನ್ಮುಂದೆ ಲಿಕ್ಕರ್ ಮನೆ ಬಾಗಿಲಿಗೇ ಬರಲಿದೆ.

ಲಿಕ್ಕರ್ ಹೋಮ್ ಡೆಲಿವರಿ ಸಿಸ್ಟಮ್ಗೆ ದೆಹಲಿ ಸರ್ಕಾರ ಸಮ್ಮತಿ
ಕೊರೊನಾ ವೈರಸ್ ನಿಂದ ಈಗಾಗ್ಲೇ ಸರ್ಕಾರದ ಬೊಕ್ಕಸಗಳು ಖಾಲಿಯಾಗ್ತಾ ಇವೆ. ಬಸವಳಿದ ಆರ್ಥಿಕತೆಯನ್ನು ಮೇಲೆತ್ತಲು ದೆಹಲಿ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಆರ್ಥಿಕತೆಯನ್ನು ತುಸು ಮಟ್ಟಿಗಾದ್ರೂ ಸರಿದೂಗಿಸಬೇಕೆಂಬ ಉದ್ದೇಶದಿಂದ ಲಾಕ್​ಡೌನ್ ವೇಳೆ ಎಲ್ಲಾ ಅಂಗಡಿಗಳು, ಮಳಿಗೆಗಳು ಬಂದ್ ಆದ್ರೂ ಸರ್ಕಾರ ಮದ್ಯದಂಗಡಿಯ ಬಾಗಿಲು ತೆರೆದೇ ಇರುವಂತೆ ನೋಡಿಕೊಂಡಿತು. ಸರ್ಕಾರದ ಬೊಕ್ಕಸವನ್ನ ಇದುವೇ ದೊಡ್ಡ ಸಂಖ್ಯೆಯಲ್ಲಿ ತುಂಬುತ್ತೆ ಎನ್ನುವುದೇ ಇದಕ್ಕಿರುವ ಪ್ರಮುಖ ಕಾರಣ. ಇವೆಲ್ಲದರ ನಡುವೆ ದೆಹಲಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟು ಲಿಕ್ಕರ್ ಹೋಮ್ ಡೆಲಿವರಿಗೂ ಓಕೆ ಅಂದಿರೋದು ಮದ್ಯಪ್ರಿಯರಿಗೆ ಇನ್ನೊಂದಿಷ್ಟು ಅನುಕೂಲ ಆಗಿದೆ.

ಕೊರೊನಾದ ಮೊದಲ ಅಲೆಯ ಲಾಕ್​​ಡೌನ್ ವೇಳೆ ಅಗತ್ಯ ಸೇವೆಯನ್ನು ಹೊರತುಪಡಿಸಿದ್ರೆ ಉಳಿದೆಲ್ಲಾ ವಲಯಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದವು. ಬಾರ್, ರೆಸ್ಟೋರೆಂಟ್ ಗಳು ವಾರಗಟ್ಟಲೇ ಬಾಗಿಲು ಹಾಕಿದ್ದವು. ಇದ್ರಿಂದ ಎಣ್ಣೆ ಪ್ರಿಯರು ಮದ್ಯ ಸಿಗದೆ ಕಂಗಲಾಗಿ ಹೋಗಿದ್ರು. ಎಣ್ಣೆ ಸಿಗದೆ ಮದ್ಯಪ್ರಿಯರು ಎಲ್ಲಿಯವರೆಗೆ ರೋಸಿ ಹೋಗಿದ್ರು ಅಂದ್ರೆ, ಕೆಲವರು ಪ್ರಾಣವನ್ನು ಕಳ್ಕೊಂಡ ಘಟನೆಗಳು ನಡೆದವು. ಆದ್ರೆ ದೇಶಕ್ಕೆ ಎರಡನೇ ಅಲೆ ಅಪ್ಪಳಿಸಿದಾಗ ವಿವಿಧ ವಲಯಗಳು ಲಾಕ್ ಆಗಿದ್ರೆ, ಈ ನಡುವೆ ಕೆಲ ತಿಂಗಳ ಬಳಿಕ ಮದ್ಯದಂಗಡಿಯ ಬಾಗಿಲು ಸದಾ ತೆರೆದೇ ಇತ್ತು.

ಲಾಕ್​ಡೌನ್ ವೇಳೆ ಬಾರ್​ನಲ್ಲಿ ಕೂತು ಎಣ್ಣೆ ಕುಡಿಯಲು ಅವಕಾಶ ನಿರಾಕರಿಸಲಾಗಿತ್ತಾದ್ರೂ ಎಣ್ಣೆ ಪಾರ್ಸಲ್​ಗೆ ಮಾತ್ರ ಯಾವುದೇ ತೊಂದರೆ ಇರ್ಲಿಲ್ಲ. ಸರ್ಕಾರದ ಕೃಪೆಯಿಂದ ಈ ಬಾರಿ ಎಣ್ಣೆ ಪ್ರಿಯರಿಗೆ ಕಳೆದ ವರ್ಷದಂತಹ ಸಮಸ್ಯೆ ಎದುರಾಗ್ಲಿಲ್ಲ. ನಿಗದಿತ ಸಮಯದಲ್ಲಿ ಎಣ್ಣೆ ಪಾರ್ಸಲ್​ಗೆ ಅವಕಾಶ ಕಲ್ಪಿಸಿದ ಕಾರಣ ಮದ್ಯಪ್ರಿಯರು ಕೋಳಿ ಕೂಗುವ ಹೊತ್ತಲ್ಲೇ ಎಣ್ಣೆ ಪಾರ್ಸಲ್ ಗಾಗಿ ಬಾರ್ ಮುಂದೆ ಕ್ಯೂ ನಿಲ್ತಿದ್ರು. ಇದ್ರಿಂದ ಕೆಲವರಿಗೆ ಕೊರೊನಾ ಹರಡುವ ಆತಂಕ ಕಾಡ್ತಿತ್ತು. ಹೀಗೆ ಆತಂಕದಲ್ಲಿದ್ದ ಎಣ್ಣೆಪ್ರಿಯರಿಗೆ ದೆಹಲಿಯ ಕೇಜ್ರಿವಾಲ್ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.

ಫುಡ್ ಆರ್ಡರ್ ಮಾದರಿಯಲ್ಲೇ ಇನ್ಮುಂದೆ ಲಿಕ್ಕರ್ ಆರ್ಡರ್
ಇನ್ಮುಂದೆ ಎಣ್ಣೆ ಬೇಕಾದ್ರೆ ಬಾರ್ ಗೆ ಹೋಗಬೇಕಾಗಿಲ್ಲ. ಬಾರ್ ಎದುರು ಗಂಟೆಗಟ್ಟಲೇ ಕಾಯಬೇಕಿಲ್ಲ. ಆನ್​​ಲೈನ್ ಮೂಲಕ ಮದ್ಯವನ್ನು ಮನೆಬಾಗಿಲಿಗೆ ಸರಬರಾಜು ಮಾಡಲು ಅವಕಾಶ ಕೊಡ್ಬೇಕೆನ್ನುವ ಕೂಗು ಕೊರೊನಾದ ಆರಂಭದಿಂದ್ಲೂ ಕೇಳಿಬರ್ತಿತ್ತು. ಆದ್ರೆ ಇದೀಗ ಆ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಹೌದು ದೆಹಲಿಯಲ್ಲಿ ಕೊರೊನಾ ಇಳಿಮುಖ ಕಾಣುತ್ತಿರುವ ಹಿನ್ನೆಲೆ ಸರ್ಕಾರ ಒಂದೊಂದಾಗಿ ಲಾಕ್​ಡೌನ್ ಸಡಿಲಿಕೆ ಮಾಡ್ತಿದೆ. ಈ  ವೇಳೆ ಸರ್ಕಾರ ಮದ್ಯಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದ್ದು, ಎಣ್ಣೆ ಹೋಂ ಡೆಲಿವರಿಗೆ ಗ್ರೀನ್ ಸಿಗ್ನಲ್ ತೋರಿಸಿದೆ. ನೀವು ಮನೆಯಲ್ಲಿಯೇ ಕೂತು ಜಸ್ಟ್ ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಆರ್ಡರ್ ಮಾಡಿದ್ರೆ ಸಾಕು, ಕೆಲವೇ ಕ್ಷಣಗಳಲ್ಲಿ ಬಯಸಿದ ಎಣ್ಣೆ ನಿಮ್ಮ ಮನೆಯ ಬಾಗಿಲು ತಲುಪಲಿದೆ.

ಮದ್ಯವನ್ನ ಆನ್​ಲೈನ್​ನಲ್ಲಿ ಆರ್ಡರ್​ ಮಾಡೋದು ಹೇಗೆ?
ದೆಹಲಿ ಸರ್ಕಾರ ಡ್ರಿಂಕ್ಸ್ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸುತ್ತಿದ್ದಂತೆಯೇ ದೇಶದಲ್ಲಿ ಮುಂಚೂಣಿಯಲ್ಲಿರುವ ಆನ್​ಲೈನ್ ಡೆಲಿವರಿ ಪ್ಲಾಟ್ ಫಾರ್ಮ್​​ಗಳು ಮುಂಚೂಣಿಗೆ ಬಂದಿವೆ. ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ ಕಾರ್ಟ್ ಕೂಡ ಮುಂದೆ ಬಂದಿವೆ. ಕಳೆದ ವರ್ಷ ಕೂಡ ಝೋಮ್ಯಾಟೋ ಕಂಪನಿ ಅನುಮತಿ ಕೇಳಿದ್ರೂ ಸರ್ಕಾರವೇ ಕೊಟ್ಟಿರ್ಲಿಲ್ಲ. ಡ್ರಿಂಕ್ಸ್ ಬೇಕಾದವರು ತಮ್ಮ ಮೊಬೈಲ್ ಅಪ್ಲಿಕೇಷನ್ ಅಥವಾ ಆನ್​ಲೈನ್ ಮೂಲಕ ಬುಕ್ ಮಾಡಿದರೆ ನೀವು ಬಯಸಿದ ದೇಶೀಯ ಮಾತ್ರಲ್ಲದೇ ವಿದೇಶಿ ಎಣ್ಣೆಗಳು ಕೂಡ ನಿಮ್ಮ ಮನೆಗೆ ಬರಲಿದೆ. ಈ ಎಲ್ಲಾ ಆ್ಯಪ್ ಗಳ ಮೂಲಕ ನೀವು ಬಯಸಿದ ಎಣ್ಣೆಯನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.

ಲಿಕ್ಕರ್ ಹೋಮ್ ಡೆಲಿವರಿಯಿಂದ ಆಗುವ ಲಾಭ ಏನು?
ದೆಹಲಿ ಸರ್ಕಾರ ಕೈಗೊಂಡ ನಿರ್ಧಾರದಿಂದ ಸರ್ಕಾರಕ್ಕೆ ಡಬಲ್ ಲಾಭವಾಗಲಿದೆ ಎನ್ನಲಾಗಿದೆ. ಹೋಮ್ ಡೆಲಿವರಿಯಿಂದ ಜನರು ಬಾರ್ ಎದುರು ಗುಂಪುಗೂಡುದನ್ನು ತಡೆಯಬಹುದು. ಇದ್ರಿಂದ ಒಂದಿಷ್ಟು ಕೊರೊನಾ ಕೇಸ್ ಗಳು ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಎಣ್ಣೆ ಪಾರ್ಸಲ್ಗೆ ನಿಗದಿತ ಸಮಯವನ್ನು ಮೀಸಲಿಟ್ಟ ಕಾರಣ ದೇಶದ ಕೆಲವೆಡೆ ಎಣ್ಣೆಗಾಗಿ ಜನರು ಬಾರ್ ಎದುರು ಯಾವುದೇ ಸಾಮಾಜಿಕ ಅಂತರವಿಲ್ಲದೆ ಗುಂಪುಗೂಡ್ತಿದ್ರು. ಇದು ಕೊರೊನಾ ಹರಡಲು ಕೂಡ ಕಾರಣವಾಗ್ತಿತ್ತು. ಆದ್ರೆ ಎಣ್ಣೆ ಹೋಮ್ ಡೆಲಿವರಿಯಿಂದ ಬಾರ್ ಎದುರು ಗುಂಪು ಗೂಡುವುದು ತಪ್ಪಿಸಿದಂತ್ತಾಗುತ್ತದೆ.

ಮದ್ಯ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಿರುವುದರಿಂದ ಸರ್ಕಾರಕ್ಕೆ ಮತ್ತೊಂದು ಲಾಭವಿದೆ. ಲಾಕ್​ಡೌನ್ ವೇಳೆ ಮದ್ಯದಂಗಡಿಗೆ ಅವಕಾಶ ಕಲ್ಪಿಸಿದ್ರು ಕೆಲವರು ಬಾರ್​ಗೆ ಹೋಗಲು ಹಿಂದೇಟು ಹಾಕ್ತಿದ್ದಾರೆ. ಬಾರ್ ಎದ್ರೂ ಗುಂಪುಗಟ್ಟಿ ನಿಲ್ಲುವುದರಿಂದ್ಲೂ ಕೊರೊನಾ ಹರಡುವ ಸಾಧ್ಯತೆ ಇರುವುದರಿಂದ ಕೆಲವರು ಓಪನ್ ಇದ್ರೂ ಬಾರ್ಗೆ ಹೋಗಿ ಮದ್ಯ ತರಲು ಒಲ್ಲೆ ಎಂದಿದ್ರು. ಇದ್ರಿಂದ ಅಬಕಾರಿ ಇಲಾಖೆಯು ಸಾಕಷ್ಟು ನಷ್ಟ ಅನುಭವಿಸಿದ್ದು, ಸರ್ಕಾರದ ಆದಾಯ ಕುಸಿದಿತ್ತು. ಒಂದು ಕಡೆ ಕುಡಿಯಬೇಕೆಂಬ ಆಸೆ, ಬಾರ್​​ಗೆ ಹೋದ್ರೆ ಕೊರೊನಾದ ಕಾಟ ಹೀಗೆ ಕೆಲ ಎಣ್ಣೆ ಪ್ರಿಯರು ಆತಂಕ ಮತ್ತು ಗೊಂದಲದಲ್ಲಿದ್ರು. ಆದ್ರೆ ಇದೀಗ ಅವುಗಳಿಗೆ ಅಂತ್ಯವಾಡುವ ಸಮಯ ಬಂದಿದ್ದು, ಸರ್ಕಾರದ ನಿರ್ಧಾರದಿಂದ ಅಬಕಾರಿ ಇಲಾಖೆಗೂ ಆದಾಯ ಹೆಚ್ಚುವ ನಿರೀಕ್ಷೆ ಇದೆ.

ಡೆಲಿವರಿ ಬಾಯ್ಸ್​ ಮದ್ಯವನ್ನು ಮನೆಗಳಿಗೆ ತಲುಪಿಸುವಾಗ ಕೊರೊನಾ ನಿಯಮವನ್ನು ಪಾಲನೆ ಮಾಡುವುದರಿಂದ ಗ್ರಾಹಕರು ಯಾವುದೇ ರೀತಿಯಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲವೆಂದು ಸರ್ಕಾರ ತಿಳಿಸಿದೆ. ಸಾಮಾನ್ಯವಾಗಿ ಫುಡ್ ಆರ್ಡರ್ ಮಾಡಿದಾಗ ಯಾವ ರೀತಿ ನಿಯಮಗಳು ಅನ್ವಯವಾಗುತ್ತೋ ಅದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಡೆಲಿವರಿ ಮಾಡುವ ಕಂಪನಿಗಳು ಅನುಸರಿಸಲಿವೆ. ಬುಕ್ ಆದ ವಸ್ತುವನ್ನ ಕೈಗೆತ್ತಿಕೊಳ್ಳುವ ಮೊದಲು ಡೆಲಿವರಿ ಬಾಯ್ ಪಲ್ಸ್ ರೇಟ್ ಚೆಕ್ ಮಾಡಲಾಗುತ್ತೆ. ಅಲ್ಲದೇ ಕಂಪ್ಲೀಟ್ ವ್ಯಾಕ್ಸಿನೇಷನ್ ಕೂಡ ಮಾಡಲಾಗುತ್ತೆ ಎನ್ನಲಾಗಿದೆ. ಇದ್ರಿಂದ ಎಣ್ಣೆ ಪ್ರಿಯರು ಕೂಡ ಫುಲ್ ಖುಷ್ ಆಗಿದ್ದಾರೆ.

ಡ್ರಿಂಕ್ಸ್ ಹೋಮ್ ಡೆಲಿವರಿಗೆ ಪಬ್, ಕ್ಲಬ್, ಬಾರ್​ಗಳ ವಿರೋಧ
ದೆಹಲಿ ಸರ್ಕಾರ ಮನೆ ಬಾಗಿಲಿಗೆ ಎಣ್ಣೆ ತಲುಪಿಸುವ ನಿರ್ಧಾರಕ್ಕೆ ಅಸ್ತು ಎಂದಿದೆ. ಆದ್ರೆ ಜನರು ಇದ್ಕೆ ತಕ್ಕ ಸಹಕಾರ ಕೊಡ್ತಾರಾ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕಂದ್ರೆ ಈ ಹಿಂದೆ ಜಾರ್ಖಾಂಡ್ ನಲ್ಲೂ ಸ್ವಿಗ್ಗಿಯ ಮೂಲಕ ಎಣ್ಣೆ ಡೆಲಿವರಿಗೆ ಅವಕಾಶ ಕಲ್ಪಿಸಿದ್ರು ಕೂಡ ಅಷ್ಟರ ಮಟ್ಟಿಗೆ ವರ್ಕೌಟ್ ಆಗಿರ್ಲಿಲ್ಲ. ಜಾರ್ಖಾಂಡ್ ಮಾತ್ರವಲ್ಲದೇ ಪಶ್ಚಿಮ ಬಂಗಾಳ, ಛತ್ತೀಸ್ ಗಢದಲ್ಲೂ ಕಳೆದ ವರ್ಷ ಇದೇ ರೀತಿಯ ನಿಯಮ ಜಾರಿಗೆ ತರಲಾಗಿದ್ರು ಅವು ಆಯಾ ರಾಜ್ಯ ಸರ್ಕಾರ ಅಂದುಕೊಂಡಷ್ಟು ಖಜಾನೆ ತುಂಬಿಸಿಲ್ಲ. ಅದ್ಕೆ ಅಲ್ಲಿಯ ಸರ್ಕಾರದ ನಿರ್ಬಂಧಗಳೇ ಕಾರಣ. ಈ ವೇಳೆ ಎಣ್ಣೆ ಬುಕ್ ಮಾಡಲು ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿತ್ತು. ಒಬ್ಬರಿಗೆ 5 ಲೀಟರ್ ಗಿಂತ ಹೆಚ್ಚಿನ ಮದ್ಯ ಪಡೆಯುವ ಅವಕಾಶ ಇರ್ಲಿಲ್ಲ. 18 ವರ್ಷದ ಮೇಲ್ಪಟ್ಟವರು ಬುಕ್ ಮಾಡಿದ್ರೆ ಮಾತ್ರ ಆರ್ಡರ್ ರಿಸಿವ್ ಮಾಡಲಾಗ್ತಿತ್ತು. ಇತರೆ ರಾಜ್ಯಗಳು ಕೂಡ ಈ ರೀತಿಯ ಬಿಗಿ ನಿಯಮಗಳನ್ನ ಜಾರಿಗೆ ತಂದಿದ್ವು. ಈ ಎಲ್ಲಾ ಅಡೆತಡೆಗಳಿಂದ ಸರ್ಕಾರದ ಪ್ಲಾನ್ ವರ್ಕೌಟ್ ಆಗಿರ್ಲಿಲ್ಲ. ಆದ್ರೆ ಕೇಜ್ರಿವಾಲ್ ಸರ್ಕಾರ ಈ ಬಾರಿ ಇಂತಹ ನಿರ್ಬಂಧಗಳನ್ನ ಸಡಿಲಿಕೆ ಮಾಡಿದ್ದರಿಂದ ಸರ್ಕಾರದ ನಡೆ ಸಕ್ಸಸ್ ಆಗಲಿದೆ ಎನ್ನಲಾಗಿದೆ.

ಇನ್ನು ಕ್ಲಬ್, ಪಬ್, ಬಾರ್ ಮಾಲೀಕರಿಂದ ಈ ಹೋಮ್ ಡೆಲಿವರಿ ಸಿಸ್ಟಮ್ ಗೆ ಮೊದಲಿನಿಂದಲೂ ವಿರೋಧ ಇದ್ದೇ ಇದೆ. ಮನೆಯಲ್ಲೂ ಮದ್ಯಪ್ರಿಯರು ಕುಳಿತು ಬಿಟ್ಟರೆ ಬಾರ್, ಕ್ಲಬ್, ಪಬ್ ಗಳಿಗೆ ಬರೋರ ಸಂಖ್ಯೆ ಕಡಿಮೆ ಆಗಿಬಿಡುತ್ತೆ ಅನ್ನೋದು ಇವರ ಆತಂಕ. ಇದರಿಂದ ಪೆಗ್ ಸಿಸ್ಟಮ್ ನಲ್ಲಿ ಡ್ರಿಂಕ್ಸ್ ಕೊಟ್ಟು ಹೆಚ್ಚು ಲಾಭ ಗಿಟ್ಟಿಸ್ತಿದ್ದವರಿಗಂತೂ ಇನ್ನಿಲ್ಲದ ನಷ್ಟ. ಹೀಗಾಗಿ ಸಹಜವಾಗಿ ಇವರ ವಿರೋಧ ಇದ್ದೇ ಇರುತ್ತೆ.

ಡ್ರಿಂಕ್ಸ್ ಹೋಮ್ ಡೆಲಿವರಿ ಬಗ್ಗೆ ಕರ್ನಾಟಕದಲ್ಲೂ ಚರ್ಚೆ ಆಗಿತ್ತು
ಡ್ರಿಂಕ್ಸ್ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸುವ ಕುರಿತು ಈ ಹಿಂದೆ ಕರ್ನಾಟಕದಲ್ಲೂ ಇದೇ ರೀತಿಯ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಇದುವರೆಗೂ ಆ ನಿಯಮ ಜಾರಿಗೆ ಬಂದಿಲ್ಲ.ಆದ್ರೆ ಒಂದು ವೇಳೆ ಈ ನಿಯಮ ಜಾರಿಯಾದ್ರೆ ಸಹಜವಾಗಿಯೇ ವಿರೋಧ ವ್ಯಕ್ತವಾಗಬಹುದು. ಆದ್ರೆ ಕೆಲವರ ವಿರೋಧದ ನಡುವೆ ಸರ್ಕಾರದ ಖಜಾನೆ ಮಾತ್ರ ತುಸು ಚೇತರಿಕೆ ಕಾಣುವ ಸಾಧ್ಯತೆಯನ್ನು ಕೂಡ ಇಲ್ಲಿ ನಾವು ತಳ್ಳಿ ಹಾಕುವಂತ್ತಿಲ್ಲ. ಇದೇ ರೀತಿ ಕೊರೊನಾ ಕಾಟ ಮುಂದುವರೆದರೆ ಇಂತಹ ಸಿಸ್ಟಮ್ ಗೆ ಅನುಮತಿ ಕೊಡುವ ಸಮಯ ಹತ್ತಿರ ಬರಬಹುದು. ಜನ ಗುಂಪು ಗೂಡಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತೆಲ್ಲ ನಿಯಮ ಕಂಟಿನ್ಯೂ ಮಾಡಬೇಕು ಅಂದ್ರೆ ಲಿಕ್ಕರ್ ಹೋಮ್ ಡೆಲಿವರಿಯಿಂದ ಅನುಕೂಲ ಆಗಲಿದೆ.

The post ದೆಹಲಿಯಲ್ಲಿ ಲಿಕ್ಕರ್​ ಹೋಂ ಡೆಲಿವರಿಗೆ ಅಸ್ತು, ಇದ್ರಿಂದ ಆಗೋ ಲಾಭ ಏನು? appeared first on News First Kannada.

Source: newsfirstlive.com

Source link