ಬೆಂಗಳೂರು: ಕಾಗೆ ಕೂರೋದಕ್ಕೂ, ಕೊಂಬೆ ಮುರಿಯೋಕ್ಕು ಸರಿಯಾಗಿದೆ ಎಂಬ ಸ್ಥಿತಿ ಬಿಜೆಪಿಯದ್ದಾಗಿದೆ. ಬೊಮ್ಮಾಯಿ ದೆಹಲಿಗೆ ಹೋಗಿ ರಿಪೋರ್ಟ್ ಕೊಟ್ಟು ಬಂದ ಬಳಿಕ ಮಾಜಿ ಸಿಎಂ ಶೆಟ್ಟರ್, ದಿಢೀರ್ ಫ್ಲೈಟ್ ಹತ್ತಿದ್ದಾರೆ. ಇಷ್ಟು ದಿನ ಬಿಟ್ಟು ಜಗದೀಶ್ ಶೆಟ್ಟರ್ ಈಗ್ಯಾಕೆ ದೆಹಲಿ ಪ್ರವಾಸ ಕೈಗೊಂಡ್ರು ಅನ್ನೋ ಚರ್ಚೆ ಹಬ್ಬಿದೆ.
ಬೊಮ್ಮಾಯಿ ದೆಹಲಿ ಪ್ರವಾಸ ಬೆನ್ನಲ್ಲೆ ದೆಹಲಿಗೆ ಹಾರಿದ ಶೆಟ್ಟರ್
ಜಗದೀಶ್ ಶೆಟ್ಟರ್ ಅವರನ್ನ ಕರೆಸಿಕೊಳ್ತಾ ಬಿಜೆಪಿ ಹೈಕಮಾಂಡ್?
ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಭಾರಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಸಿಎಂ ಕೂಡ ದೆಹಲಿಗೆ ಹೋಗಿ ಬಂದಿದ್ದಾರೆ. ಆದ್ರೆ ಈ ಬೆಳವಣಿಗೆಯ ನಡುವೆ ದಿಢೀರ್ ಅಂತ ಮಾಜಿ ಸಿಎಂ ದೆಹಲಿಗೆ ಹಾರಿದ್ದಾರೆ. ಇಷ್ಟು ದಿನ ಬಿಟ್ಟು ಜಗದೀಶ್ ಶೆಟ್ಟರ್ ಈಗ್ಯಾಕೆ ದೆಹಲಿ ಪ್ರವಾಸ ಕೈಗೊಂಡ್ರು ಅನ್ನೋ ಕುತೂಹಲ ಹೆಚ್ಚಾಗಿದೆ. ಇದೆಲ್ಲಾ ನೋಡ್ತಿದ್ರೆ, ಕಾಗೆ ಕೂರಕ್ಕೂ, ಕೊಂಬೆ ಮುರಿಯೋಕ್ಕು ಸರಿಯಾಗಿದೆ ಎಂಬ ಸ್ಥಿತಿ ಬಿಜೆಪಿಗೆ ಬಂದಂತಾಗಿದೆ.
ದೆಹಲಿಗೆ ಹಾರಿದ ಶೆಟ್ಟರ್!
ಎರಡು ದಿನದ ಹಿಂದಷ್ಟೇ ದೆಹಲಿ ಯಾತ್ರೆ ಕೈಗೊಂಡಿದ್ದ ಸಿಎಂ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಭೇಟಿ ಬಳಿಕ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬೊಮ್ಮಾಯಿ ಹಿಂತಿರುಗಿದ ನಂತ್ರ ದೆಹಲಿಗೆ ಶೆಟ್ಟರ್ ಪ್ರಯಾಣ ಬೆಳೆಸಿದ್ದು, ಅವರನ್ನ ಬಿಜೆಪಿ ಹೈಕಮಾಂಡ್ ಕರೆಸಿಕೊಂಡಿದೆ. ಜಗದೀಶ್ ಶೆಟ್ಟರ್ ಈಗ್ಯಾಕೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಅನ್ನೋ ವಿಚಾರ ಸಾಕಷ್ಟೂ ಕುತೂಹಲ ಕೆರಳಿಸಿದೆ. ಅಲ್ಲದೆ ಇದು ರಾಜ್ಯ ಕಮಲ ಮನೆಯಲ್ಲಿ ಚರ್ಚೆಗೂ ಕಾರಣವಾಗಿದೆ.
ಹೈಕಮಾಂಡ್ ನಿಗೂಢ ಹೆಜ್ಜೆ!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವೇಳೆ ಮೌನವಾಗಿದ್ದ ಶೆಟ್ಟರ್, ಇತರರಂತೆ ದೆಹಲಿ ಪ್ರಯಾಣವೂ ಮಾಡಿರಲಿಲ್ಲ ಅನ್ನೋದು ಗಮನಾರ್ಹವಾಗಿತ್ತು. ಇನ್ನು ಈಗ ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಪ್ರಕರಣ ದೊಡ್ಡ ಸುದ್ದಿ ಆಗ್ತಿದೆ. ಬಿಟ್ ಕಾಯಿನ್ ದಂಧೆ ಪ್ರಕರಣಕ್ಕೂ ಸಿಎಂಗೂ ಸಂಬಂಧವಿದೆಯೇ? ಅನ್ನೋ ಬಗ್ಗೆ ಖುದ್ದು ಪ್ರಧಾನಿ ಮೋದಿ, ಸಿಎಂ ಭೇಟಿಗೂ ಮುನ್ನ ರಾಜ್ಯಪಾಲರಿಂದ ಮಾಹಿತಿ ಪಡೆದುಕೊಂಡಿದ್ದರು. ಈ ಮೊದಲೇ ಪ್ರಧಾನಿ ಭೇಟಿ ಆಗಿದ್ದ ಥಾವರಚಂದ್ ಗೆಹಲೋತ್ ಈ ಬಗ್ಗೆ ಮಾಹಿತಿ ನೀಡಿದ್ರು. ಒಟ್ನಲ್ಲಿ ಒಂದ್ಕಡೆ ರಾಜ್ಯಪಾಲರು, ಇನ್ನೊಂದ್ಕಡೆ ಸಿಎಂ, ಈಗ ಶೆಟ್ಟರ್ ಪ್ರವಾಸದಿಂದ ಬಿಜೆಪಿ ಹೈಕಮಾಂಡ್ ನಾಯಕರು ಮಾಡುತ್ತಿರುವುದಾದ್ರೂ ಏನು? ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕಿದೆ.
ಇದನ್ನೂ ಓದಿ: ಬೊಮ್ಮಾಯಿ ವಾಪಸ್ಸಾದ ಬೆನ್ನಲ್ಲೇ ಶೆಟ್ಟರ್ಗೆ ಹೈಕಮಾಂಡ್ನಿಂದ ಬುಲಾವ್; ಯಾಕೆ?
ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮನದಲ್ಲಿ ಏನೋ ಬೇರೆ ಯೋಚನೆ ಇದ್ದಂತಿದೆ. ಇದೇ ಕಾರಣಕ್ಕೆ ರಾಜ್ಯಪಾಲರು, ಸಿಎಂ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ರಾಜ್ಯ ಬಿಜೆಪಿ ನಾಯಕರಿಗೆ ತಲೆಕೆಡುವಂತೆ ಮಾಡಿದೆ. ಹೈಕಮಾಂಡ್ ಲೆಕ್ಕಾಚಾರ ಏನು? ದೆಹಲಿಯಲ್ಲಿ ಏನ್ ನಡೀತಿದೆ ಅಂತ ಕಮಲ ಮನೆಯ ನಾಯಕರು ಫುಲ್ ತಲೆಕೆಡಿಸಿಕೊಳ್ತಿದ್ದಾರೆ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ