ಸಾಂಕೇತಿಕ ಚಿತ್ರ
ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Delhi Airport) ಹೊರಟಿದ್ದ ಅಮೃತ್ಸರ್ ಮೂಲದ ವಿಸ್ತಾರ ಏರ್ಲೈನ್ಸ್ (Vistara Flight) ವಿಮಾನ ಕೆಲವೇ ಕ್ಷಣಗಳಲ್ಲಿ ಹಿಂದಿರುಗಿ ಬಂದು, ದೆಹಲಿ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಫ್ಲೈಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದೇ ತುರ್ತು ಭೂಸ್ಪರ್ಶಕ್ಕೆ ಕಾರಣ ಎಂದು ಹೇಳಲಾಗಿದೆ. ವಿಸ್ತಾರಾ ಏರ್ಲೈನ್ಸ್ನ ಯುಕೆ 697 ಎಂಬ ವಿಮಾನ ದೆಹಲಿಯಿಂದ ಅಮೃತ್ಸರ್ಗೆ ಹೊರಟಿತ್ತು. ಆದರೆ ಕೆಲವೇ ಕ್ಷಣದಲ್ಲಿ ತಾಂತ್ರಿಕ ಅಡಚಣೆಯಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಪೈಲಟ್ ವಿಮಾನವನ್ನು ವಾಪಸ್ ದೆಹಲಿ ಏರ್ಪೋರ್ಟ್ಗೇ ತಂದರು ಎಂದು ಏರ್ಲೈನ್ಸ್ನ ವಕ್ತಾರ ತಿಳಿಸಿದ್ದಾರೆ.
ಈ ವಿಮಾನದಲ್ಲಿ 146 ಮಂದಿ ಪ್ರಯಾಣಿಕರು ಇದ್ದರು. ಬೆಳಗ್ಗೆ ಎಂದಿನಂತೆ ದೆಹಲಿಯಿಂದ ಹೊರಟಿತ್ತು. ಆದರೆ 10.15ರ ಹೊತ್ತಿಗೆ ಈ ವಿಮಾನ ವಾಪಸ್ ಏರ್ಪೋರ್ಟ್ಗೆ ಬಂದು ತುರ್ತು ಭೂಸ್ಪರ್ಶ ಆಗುವ ಬಗ್ಗೆ ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಬಂತು. ಸಣ್ಣ ತಾಂತ್ರಿಕ ದೋಷ ಉಂಟಾದರೂ ಅದು ಮುಂದೆ ದೊಡ್ಡ ಅಪಾಯ ತಂದೊಡ್ಡುವ ಸಂಭವ ಇರುತ್ತದೆ. ಹೀಗಾಗಿ ಪೈಲಟ್ ಅದನ್ನು ತುರ್ತು ಭೂಸ್ಪರ್ಶ ಮಾಡಿಸುವ ನಿರ್ಧಾರ ಕೈಗೊಂಡರು ಎಂದು ಏರ್ಪೋರ್ಟ್ ಆಡಳಿತ ಹೇಳಿದೆ.
ವಿಮಾನ ವಾಪಸ್ ಬರುವಷ್ಟರಲ್ಲಿ ಏರ್ಪೋರ್ಟ್ನಲ್ಲಿ ಪೊಲೀಸರು, ಆರು ಅಗ್ನಿಶಾಮಕದಳದ ಘಟಕಗಳು ಸಿದ್ಧವಾಗಿ ನಿಂತಿದ್ದರು. ಅದು ಭೂಸ್ಪರ್ಶ ಆಗುವ ಹೊತ್ತಿಗೆ ಯಾವುದೇ ರೀತಿಯ ಅಪಾಯ ಆಗುವುದನ್ನು ತಪ್ಪಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿತ್ತು. ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ಕೆಳಗೆ ಇಳಿಯಿತು. ಯಾರೊಬ್ಬರಿಗೂ ಏನೂ ಆಗಲಿಲ್ಲ ಎಂದೂ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ನಮಗೆ ನಮ್ಮ ಪ್ರಯಾಣಿಕರ ಸುರಕ್ಷತೆ ಮುಖ್ಯ. ಹೀಗಾಗಿ ಈ ವಿಮಾನವನ್ನು ಹಿಂದಕ್ಕೆ ತರಲಾಯಿತು. ನಂತರ ತಕ್ಷಣವೇ ಅಮೃತ್ಸರ್ಗೆ ಇನ್ನೊಂದು ಫ್ಲೈಟ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳಿಸಲಾಯಿತು ಎಂದೂ ವಿಸ್ತಾರಾ ಏರ್ಲೈನ್ಸ್ ವಕ್ತಾರ ಮಾಹಿತಿ ನೀಡಿದ್ದಾರೆ.