ಕೋವಿಡ್ 2ನೇ ಅಲೆಯನ್ನ ತಗ್ಗಿಸಲು ವಿಧಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆ, ಸರ್ಕಾರ ಪರಿಹಾರವನ್ನೇನೋ ಘೋಷಿಸಿದೆ. ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ಸೇವಾ ಸಿಂಧು ವೈಬ್‌ಸೈಟ್‌ನಲ್ಲಿ ಆಟೋ ಹಾಗು ಕ್ಯಾಬ್ ಚಾಲಕರು ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಆದ್ರೆ ಅದ್ಯಾಕೋ ಚಾಲಕರ ಕೈಗೆ ಹಣ ಸೇರೋಕೆ ಇನ್ನೂ ಸಮಯ ಬಂದಿಲ್ಲ ಅನಿಸ್ತಿದೆ.

ದೇವ್ರು ಕೊಟ್ರು ಪೂಜಾರಿ ಕೊಡ್ಲಿಲ್ಲ ಅನ್ನೋ ಮಾತು ಸದ್ಯ ಆಟೋ ಮತ್ತು ಕ್ಯಾಬ್​ ಚಾಲಕರ ಪಾಲಿಗೆ ಹೇಳಿ ಮಾಡಿಸಿದಂತೆ ಆಗ್ಬಿಟ್ಟಿದೆ. ಯಾಕಂದ್ರೆ ಸರ್ಕಾರ ಏನೋ ಚಾಲಕರಿಗೆ ಸಹಾಯಧನ ವಿಧಿಸಿದೆ. ಆದ್ರೆ ಸರ್ವರ್​ ಕೈ ಕೊಟ್ಟುಬಿಟ್ಟಿದೆ.

ಕಳೆದ ವರ್ಷ ಆಟೋ ಹಾಗು ಟ್ಯಾಕ್ಸಿ ಚಾಲಕರಿಗೆ ಸರ್ಕಾರ 3,000 ಸಹಾಯಧನ ಘೋಷಿಸಿತ್ತು. ಎರಡೂವರೆ ಲಕ್ಷ ಅರ್ಜಿಗಳು ಸರ್ಕಾರಕ್ಕೆ ಬಂದಿತ್ತು. ಅವುಗಳ ಪೈಕಿ ಸುಮಾರು 2 ಲಕ್ಷ 25 ಸಾವಿರ ಆಟೋ ಚಾಲಕರಿಗೆ ಮಾತ್ರ ಪರಿಹಾರ ನೀಡಲಾಗಿತ್ತು. ಆದ್ರೆ ಉಳಿದ 25-30 ಸಾವಿರ ಚಾಲಕರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಈ ಮಧ್ಯೆ ಸರ್ಕಾರ ಈ ವರ್ಷದ ಲಾಕ್​ಡೌನ್ ಪರಿಹಾರ ಘೋಷಿಸಿದೆ.  ಚಾಲಕರು ಮಾತ್ರ, ಪರಿಹಾರ ನೀಡುವಲ್ಲಿ ಕಳೆದ ಬಾರಿಯಂತೆ ಈ ಬಾರಿ ತಡ ಮಾಡಬೇಡಿ ಅಂತಿದ್ದಾರೆ.

ಕಳೆದ ವರ್ಷವೂ ತಾಂತ್ರಿಕ ಕಾರಣಗಳನ್ನು ಒಡ್ಡಿ ಪರಿಹಾರ ನೀಡೋದನ್ನು ಸರ್ಕಾರ ವಿಳಂಬ ಮಾಡಿತ್ತು. ಈ ಬಾರಿ ಸಹ ತಾಂತ್ರಿಕ ದೋಷ ಮೊದಲನೇ ದಿನವೇ ಕಂಡುಬಂದಿದೆ. ಸೇವಾಸಿಂಧು ವೈಬ್‌ಸೈಟ್‌ಗೆ ಲಾಗಿನ್ ಆಗಿರೋ ಸಾವಿರಾರು ಆಟೋ ಹಾಗು ಕ್ಯಾಬ್ ಚಾಲಕರು ನೋಂದಾಯಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಮತ್ತೊಂದೆಡೆ ನೋಂದಣಿ ಮಾಡಿಕೊಳ್ಳಲು ಡೆಡ್‌ಲೈನ್‌  ಸಹ ಸರ್ಕಾರ ನೀಡಿದ್ದು, ಅದು ಕೊನೆಯಾಗಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ.

ನಗರದ ಅದೆಷ್ಟೋ ಚಾಲಕರು ಪ್ರೈವೇಟ್ ಫೈನಾನ್ಸ್, ಕೈ ಸಾಲದಲ್ಲಿ ಆಟೋ ಹಾಗು ಟ್ಯಾಕ್ಸಿಗಳನ್ನು ಖರೀದಿಸಿದ್ದಾರೆ. ಅವುಗಳಿಗೆ ಕಟ್ಟಬೇಕಾದ ಕಂತಿನ ಹಣ, ಬಡ್ಡಿಯನ್ನು ಲಾಕ್‌ಡೌನ್‌ನಿಂದಾಗಿ ಕಟ್ಟಲು ಸಾಧ್ಯವಾಗ್ತಿಲ್ಲ. ಜೊತೆಗೆ ದುಡಿಮೆ ಇಲ್ಲದ ಕಾರಣ ಹಲವಾರು ಚಾಲಕರ ಕುಟುಂಬಸ್ಥರು  ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಚಾಲಕರಿಗೆ ನೀಡಬೇಕಾದ ಪರಿಹಾರ ಹಣವನ್ನು ಕೂಡಲೇ ಬಿಡುಗಡೆಗೊಳಿಸುವ ಅನಿವಾರ್ಯತೆ ಇದೆ.

The post ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅನ್ನುವಂತಾಯ್ತಾ ಚಾಲಕರಿಗೆ ಸೇರಬೇಕಾದ ಪರಿಹಾರ appeared first on News First Kannada.

Source: newsfirstlive.com

Source link