ಹಾಸನ: ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ನಿಂದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಸಿಗಬಹುದು ಅನ್ನೋ ಭರವಸೆಯನ್ನು ಹಲವರು ಹೊಂದಿದ್ದರು. ಆದ್ರೂ ಕೊನೆಗೆ ಮಾಜಿ ಸಚಿವ ಹೆಚ್ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ಎಂಟ್ರಿ ಪಕ್ಕಾ ಆಗಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸೂರಜ್ ರೇವಣ್ಣ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ವು. ಆದರೆ ಈ ವಿಚಾರವಾಗಿ ದಳಪತಿಗಳು ಮಾತ್ರ ಗಪ್ಚುಪ್ ಆಗಿದ್ದರು. ಸದ್ಯ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು ಶಾಸಕರು, ಮುಖಂಡರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ. ಇನ್ನು ನಾಳೆ ಸೂರಜ್ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಹೆಚ್.ಡಿ ರೇವಣ್ಣರ ಮೊದಲನೇ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ. ರೇವಣ್ಣರಂತೂ ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿದ್ದು, ಅವರ ಪತ್ನಿ ಭವಾನಿ ರೇವಣ್ಣ ಕೂಡ ಸಕ್ರಿಯ ರಾಜಕೀಯದಲ್ಲಿದ್ದಾರೆ. ಇನ್ನು ದೇವೇಗೌಡರ ಮತ್ತೊಬ್ಬ ಪುತ್ರ ಹೆಚ್.ಡಿ ಕುಮಾರಸ್ವಾಮಿಯವರು ಹಾಗೂ ಅವರ ಧರ್ಮ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಜೊತೆಗೆ, ದೇವೇವಗೌಡರ ಇತರ ಹಲವು ಸಂಬಂಧಿಗಳು ಕೂಡ ಜೆಡಿಎಸ್ನಲ್ಲಿ ಸಕ್ರಿಯರಾಗಿದ್ದಾರೆ.