ಹಾಸನ: ಇಂದಿನಿಂದ ಮೂರು ದಿನಗಳ ಕಾಲ ಸಿಎಂ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದು, ಇಂದು ಹಾಸನಕ್ಕೆ ಭೇಟಿ ನೀಡಿ ಹಾಸನದ ಜಿಲ್ಲಾ ಪಂಚಾಯತ್ ಕಚೇರಿಗೆ ತೆರಳಿ ಜಿಲ್ಲೆಯ ಕೋವಿಡ್-19 ಪರಿಶೀಲನೆ ಸಭೆಗೆ ಹಾಜರಾದರು.

ಸಭೆಗೂ ಮುನ್ನ ಬೂವನಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಕಾರಣದಿಂದ ಆರ್ಥಿಕ ಕುಸಿತ ಎಲ್ಲರಿಗೂ ಗೊತ್ತಿರುವ ವಿಚಾರ. ತೆರಿಗೆ ಸಂಗ್ರಹ ಕುಂಠಿತಗೊಂಡಿದೆ, ಸುಧಾರಣೆ ಮಾಡುತ್ತಿದ್ದೇವೆ. ಲಾಕ್​​ಡೌನ್ ಸಂಬಂಧ ಎರಡು ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದರ ನಡುವೆಯೂ ನೀರಾವರಿಗೂ ಆದ್ಯತೆ ನೀಡಿದ್ದೇವೆ. ದೇವೇಗೌಡರ ಆಸೆಯಂತೆ ಹಾಸನದಲ್ಲಿ ಏರ್ ಪೋರ್ಟ್ ಆಗಬೇಕಿದೆ. ಯಾವ ರೀತಿ ಆರಂಭ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಾಗುವುದು. ಹಿರಿಯರ ಆಸೆಯನ್ನು ಶೀಘ್ರ ಈಡೇರಿಸಲಾಗುವುದು ಎಂದರು.

ಕೊರೊನಾ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ ಇಳಿಯಬೇಕು. ರೇವಣ್ಣ ಅವರು ಒಬ್ಬ ಜವಾಬ್ದಾರಿಯುತ ಶಾಸಕರು. ಸಾವಿಗೆ ರಾಜ್ಯ ಕೇಂದ್ರ ಸರ್ಕಾರಗಳೇ ಕಾರಣ ಎಂಬ ಹೇಳಿಕೆ ನೀಡಬಾರದು. ಮೂರನೇ ಅಲೆ ತಡೆಗೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲಾಗುವುದು. ವಾರಕ್ಕೆ ಎರಡೂ ದಿನ ಜಿಲ್ಲೆಗಳಿಗೆ ಭೇಟಿ ನೀಡಿ ಕೊರೊನಾ ಸ್ಥಿತಿಗಳನ್ನು ಪರಿಶೀಲನೆ ನಡೆಸಲಾಗುವುದು. ಅದರಂತೆ ಇಂದು ಹಾಸನಕ್ಕೆ ಬಂದಿದ್ದು, ನಾಳೆ ಶಿವಮೊಗ್ಗದಲ್ಲಿ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ ಎಂದರು.

ಇಂದಿನಿಂದ ಸಿಎಂ ಬಿಎಸ್​​ ಯಡಿಯೂರಪ್ಪ ಅವರು, ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಹಾಸನ ಕೋವಿಡ್​ ಸಭೆಯ ಬಳಿಕ ಶಿವಮೊಗ್ಗದ ಶಿಕಾರಿಪುರಕ್ಕೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ ಶಿಕಾರಿಪುರ ಕ್ಷೇತ್ರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಸಂಜೆ ಶಿವಮೊಗ್ಗ ಜಿಲ್ಲೆಯ ಕೋವಿಡ್ ಪರಿಶೀಲನಾ ಸಭೆ ನಡೆಸಲಾಗುವುದು. ಆ ಬಳಿಕ ಶಿಕಾರಿಪುರದಲ್ಲೇ ಉಳಿದುಕೊಂಡು ಭಾನುವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇದನ್ನೂ ಓದಿ: ‘ಬೆಂಗಳೂರು ನೋಡಿದ್ರೆ ನನಗೂ ಭಯ ಆಗುತ್ತೆ’ -ಹೀಗೆ​ ಯಾಕೆ ಅಂದ್ರು ಸುಧಾಕರ್?

The post ದೇವೇಗೌಡ್ರ ಆಸೆಯನ್ನು ಶೀಘ್ರ ಈಡೇರಿಸಲಾಗುತ್ತದೆ- ಸಿಎಂ ಬಿಎಸ್​​ವೈ appeared first on News First Kannada.

Source: newsfirstlive.com

Source link

Leave a comment