ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಇಂದಿನಿಂದ ಐದು ದಿನಗಳ ಕಾಲ 100 ನಾಟ್​​ಔಟ್​ ಪ್ರತಿಭಟನೆ ನಡೆಸಲಿದ್ದು, ಇಂದು ಬೆಳ್ಳಂ ಬೆಳಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ ನಾಯಕರು ಶಿವಾನಂದ ಸರ್ಕಲ್ ನ ರೆಡ್ಡಿ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.

ಕೊರೊನಾ ಕಾರಣದಿಂದ ರಾಜ್ಯಾದ್ಯಂತ 5 ಸಾವಿರ ಪೆಟ್ರೋಲ್​ ಬಂಕ್​ಗಳ ಎದುರು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆಗಳನ್ನು ಕಾಂಗ್ರೆಸ್​​ ನಾಯಕರು ಕೈಗೊಂಡಿದ್ದಾರೆ. ದೇಶಾದ್ಯಂತ ಪೆಟ್ರೋಲ್ ಪ್ರತಿ ಲೀಟರ್​ಗೆ 100 ಗಡಿ ದಾಟಿದೆ. ದಿನೇ ದಿನೇ ಪೆಟ್ರೋಲ್ ಏರುತ್ತಿರೋದನ್ನ ಖಂಡಿಸಿ ಕಾಂಗ್ರೆಸ್​ ಬೀದಿಗೆ ಇಳಿದಿದೆ.

ಪ್ರತಿಭಟನೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೇಂದ್ರ ಸರ್ಕಾರ ಜನರ ಮೇಲೆ 20 ಲಕ್ಷದ 60 ಸಾವಿರ ಕೋಟಿ ರೂಪಾಯಿ ತೆರಿಗೆ ಹೊರಿಸಿದೆ. ಕೇಂದ್ರ ಸರ್ಕಾರ ಪೀಕ್ ಪಾಕೆಟ್ ಸರ್ಕಾರ. ಜನರ ಜೇಬಿಗೆ ಕೇಂದ್ರ ಸರ್ಕಾರ ಕನ್ನ ಹಾಕ್ತಿದೆ. ಕೇಂದ್ರ ಸರ್ಕಾರ ಮಾಡುತ್ತಿರುವ ಪೀಕ್ ಪ್ಯಾಕೇಟ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಆಗ ಬಿಜೆಪಿ ಹಾಹಾಕಾರ ಸೃಷ್ಟಿ ಮಾಡಿತ್ತು
ಆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 19 ಬಾರಿ ಕೇಂದ್ರ ಪೆಟ್ರೋಲ್ ಬೆಲೆ ಹೆಚ್ಚಿಸಿದೆ. ರಾವಣ ರಾಜ್ಯದಲ್ಲಿ ಪೆಟ್ರೋಲ್ 59 ರೂಪಾಯಿ. ರಾಮನ ರಾಜ್ಯದಲ್ಲಿ ಪೆಟ್ರೋಲ್ ದರ 100 ರೂ. ಇದೆ. ರಾಮನ ಹೆಸರನ್ನ ಹೇಳ್ತೀರ ನಿಮಗೆ ನಾಚಿಕೆಯಾಗಲ್ವೇ? ಜನಸಾಮಾನ್ಯರ ಕಷ್ಟ ನಿಮಗೆ ಅರ್ಥವಾಗಲ್ವೇ? ಇವತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾವು ಪ್ರತಿಭಟನೆ ಮಾಡ್ತಿದ್ದೇವೆ. ದೇಶದಾದ್ಯಂತ ಇದರ ಬಗ್ಗೆ ಕಾಂಗ್ರೆಸ್ ಹೋರಾಡುತ್ತಿದೆ. ಆ ಮೂಲಕ ಸರ್ಕಾರವನ್ನ ಎಚ್ಚರಗೊಳಿಸುವ ಕೆಲಸ ಮಾಡ್ತಿದ್ದೇವೆ ಎಂದರು.

 

ಮನಮೋಹನ್ ಸರ್ಕಾರದದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅವರು ಹಾಹಾಕಾರ ಸೃಷ್ಟಿ ಮಾಡಿದ್ದರು. ಮೋದಿ ಅವರು ಪ್ರತಿಭಟನೆ ಮಾಡಿದ್ದರು. ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದವರು.. ಅಚ್ಛೇದಿನ್ ಆಯೇಂಗೆ ಎಂದು ಹೇಳಿದ್ದರು. ಇವತ್ತು ನರಕದ ದಿನಗಳ ಬಂದಿವೆ. ನಾವು ನರಕ ನೋಡಿಲ್ಲ, ಇದೀಗ ನರಕದ ದಿನಗಳನ್ನು ನೋಡುತ್ತಿದ್ದೇವೆ. ಕೋವಿಡ್ ಸಂಕಷ್ವವಿದೆ, ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ. ಜನ ಸಾಮಾನ್ಯರು ಜೀವನ ನಡೆಸುವುದು ಹೇಗೆ? ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪರತಿಭಟನೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ದಿನೇಶ್​ ಗುಂಡೂರಾವ್ ಅವರು, ದೇಶದಲ್ಲಿ ಪೆಟ್ರೋಲ್​ ಶತಕ ತಲುಪಿದೆ. ಪ್ರಧಾನಿಗಳು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನೋಟು ಬ್ಯಾನ್, ಜಿಎಸ್​​ಟಿ ಜಾರಿ ಮಾಡಿ ಜನರ ದುಡಿಮೆಯನ್ನು ಹಾಳು ಮಾಡಿದ್ದರು. ಇಂದು ಕೊರೊನಾ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿ ಇದ್ದರೂ ಬೆಲೆ ಹೆಚ್ಚಳ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಚೆನ್ನಾಗಿ ಬೆಳೀತಿರೋದು ಎರಡೇ. ಒಂದು ಮೋದಿ ಬಿಳಿ ಗಡ್ಡ, ಮತ್ತೊಂದು ಪೆಟ್ರೋಲ್​ ಬೆಲೆ. ಮೋದಿ ಅವರಿಗೆ ಯಾರು ಮಾತು ಕೇಳುತ್ತಿಲ್ಲ. ಅವರು ಯಾರನ್ನೂ ಭೇಟಿ ಮಾಡುವುದು ಇಲ್ಲ. ಈಗ ಅಧಿಕಾರ ಅವರ ಕೈಯಲಿದ್ದು, ಅವರನ್ನ ಎಚ್ಚರಿಸುವ ಕೆಲಸವನ್ನು ಕಾಂಗ್ರೆಸ್​ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇತ್ತ ಕೊರೊನಾ ಕಾರಣದಿಂದ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲದ ಕಾರಣ, ಪೆಟ್ರೋಲ್​ ಬಂಕ್​ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಯರ್ತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಕರೆದುಕೊಂಡು ಹೋದರು.

The post ’ದೇಶದಲ್ಲಿ ಬೆಳೀತಿರೋದು ಎರಡೇ.. ಮೋದಿ ಗಡ್ಡ, ಪೆಟ್ರೋಲ್​ ಬೆಲೆ’-ಗುಂಡೂರಾವ್ ವಾಗ್ದಾಳಿ appeared first on News First Kannada.

Source: newsfirstlive.com

Source link

Leave a comment