ಚಿತ್ರದುರ್ಗ: ಕೊರೊನಾ ಸಂಕಷ್ಟ ಕಾಲದಲ್ಲೇ ಬ್ಲಾಕ್ ಫಂಗಸ್ (Skin Mucormycosis) ಎಂಬ ಮಾರಿಯೂ ದಿನಕ್ಕೊಂದು ಬಣ್ಣ ಬದಲಿಸುತ್ತಿದೆ. ಇಡೀ ದೇಶದಲ್ಲೇ ಮೊದಲ ಚರ್ಮದ ಬ್ಲಾಕ್ ಫಂಗಸ್ ಪ್ರಕರಣವೊಂದು ಕೋಟೆನಾಡು ಚಿತ್ರದುರ್ಗದಲ್ಲಿ ಪತ್ತೆಯಾಗಿದೆ.
ಈಗಾಗಲೇ ಕಣ್ಣು, ಮೂಗು, ಶ್ವಾಸಕೋಶದಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಮತ್ತಷ್ಟು ಪ್ರಭಾವಶಾಲಿಯಾಗುವಂತೆ ಕಾಣುತ್ತಿದ್ದು, ಇಡೀ ದೇಶದಲ್ಲೇ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಕಿವಿ ಭಾಗದ ಚರ್ಮದಲ್ಲಿ ಫಂಗಸ್ ಬೆಳೆದಿರುವುದು ಪತ್ತೆಯಾಗಿದೆ.

ಭಾರತದಲ್ಲೇ ಪ್ರಪ್ರಥಮ ಪ್ರಕರಣ ಎಂದಿರುವ ವೈದ್ಯರ ತಂಡ
ಹೌದು, ಕೋಟೆನಾಡು ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ಸ್ಕಿನ್ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಒಂದು ತಿಂಗಳ ಹಿಂದೆ ಕೋವಿಡ್ ನಿಂದ ಚೇತರಿಸಿಕೊಂಡಿದ್ದ 50 ವರ್ಷದ ವ್ಯಕ್ತಿಯ ಬಲ ಭಾಗದ ಕಿವಿ ಮೇಲೆ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ನಿರಂತರ ಮಾಸ್ಕ್ ಹಾಕಿಕೊಳ್ಳುತ್ತಿದ್ದ ಪರಿಣಾಮ ಕಿವಿ ಮೇಲ್ಬಾಗ ಕಪ್ಪಾಗುತ್ತಿದೆ ಎಂದು ಭಾವಿಸಿದ್ದ ವ್ಯಕ್ತಿ ಚಿತ್ರದುರ್ಗ ನಗರದ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ತಪಾಸಣೆಗೆ ಒಳಗಾದಾಗ ಫಂಗಸ್ ಖಚಿತವಾಗಿದೆ ಎಂದು ಕಿವಿ, ಮೂಗು, ಗಂಟಲು ತಜ್ಞ ಡಾ.ಪ್ರಹ್ಲಾದ್ ನ್ಯೂಸ್​​ಫಸ್ಟ್​​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 56ಕ್ಕೇರಿದ ಬ್ಲ್ಯಾಕ್ ಫಂಗಸ್‌ ಪ್ರಕರಣ -ಬಳ್ಳಾರಿಯಲ್ಲಿ ಹೆಚ್ಚಾಯ್ತು ಆತಂಕ

ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರ ತಂಡದಿಂದ ಅಧಿಕೃತ ಪ್ರಕಟಣೆ
ತೀವ್ರ ಸ್ವರೂಪದ ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯ ಕಿವಿ ಮೇಲ್ಭಾಗ ಹಾಗೂ ಕಿವಿಯ ಚರ್ಮವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆಗ ಚರ್ಮದ ಬ್ಲಾಕ್ ಫಂಗಸ್ ಖಚಿತವಾಗಿದೆ‌. ಫಂಗಸ್ ಈಗ ತಲೆ ಭಾಗದ ಚರ್ಮಕ್ಕೂ ವ್ಯಾಪಿಸಿದ್ದು, ಶಸ್ತ್ರಚಿಕಿತ್ಸೆ ಮೂಲಕ ಸೋಂಕು ತಗುಲಿರುವ ಎಲ್ಲ ಚರ್ಮವನ್ನು ತೆಗೆದು ಹಾಕಬೇಕಿದೆ. ಆಂಪೋಟೆರಿಸಿನ್- ಬಿ ಇಂಜೆಕ್ಷನ್‌ ನೊಂದಿಗೆ ಸೂಕ್ತ ಚಿಕಿತ್ಸೆ ನೀಡಬೇಕಿದೆ. ರೋಗಿ ಸಂಪೂರ್ಣ ಗುಣಮುಖವಾದ ಬಳಿಕ ಚರ್ಮದ ಕಸಿ ಮಾಡ ಬೇಕಾಗುತ್ತದೆ ಎಂದು ತಜ್ಞ ವೈದ್ಯ ಡಾ.ಪ್ರಹ್ಲಾದ್​ ವಿವರಿಸಿದ್ದಾರೆ. ಒಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ಚರ್ಮದ ಕಪ್ಪು ಶಿಲೀಂಧ್ರ ಪತ್ತೆ ಆಗಿರೋದು ಮತ್ತಷ್ಟು ಆತಂಕ ಮೂಡಿಸಿದೆ. ಸದ್ಯಕ್ಕೆ ಮೊದಲನೇ ಹಂತದ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿರೋದು ಕೊಂಚ ಸಮಾಧಾನ ಪಡುವಂತಾಗಿದೆ.

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್​ ಚಿಕಿತ್ಸೆಗೆ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ ಹೈದರಾಬಾದ್ ಐಐಟಿ.. ಏನಿದರ ವಿಶೇಷತೆ..?

The post ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಕೇಸ್​​​ ಚಿತ್ರದುರ್ಗದಲ್ಲಿ ಪತ್ತೆ appeared first on News First Kannada.

Source: newsfirstlive.com

Source link