ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಅಪ್ಪು ನಿಜಕ್ಕೂ ತಂದೆಗೆ ತಕ್ಕ ಮಗನಾಗಿದ್ದ: ಶಿವರಾಜಕುಮಾರ | Puneeth has fans across India, he was worthy son Dr Rajkumar: Shiva Rajkumar


ಪುನೀತ್ ರಾಜಕುಮಾರ್ 11ನೇ ದಿನದ ಕಾರ್ಯವನ್ನು ಅವರ ಕುಟುಂಬದ ಸದಸ್ಯರು ಸೋಮವಾರ ಕಂಠೀರವ ಸ್ಟುಡಿಯೋನಲ್ಲಿ ನೆರವೇರಿಸುವಾಗ ಶ್ರದ್ಧಾಂಜಲಿ ಸಲ್ಲಿಸಲು ಅಲ್ಲಿಗೆ ಆಗಮಿಸಿದ ಅಭಿಮಾನಿಗಳಿಗೆ ಆದ ಅನಾನುಕೂಲತೆಗಾಗಿ ಶಿವರಾಜಕುಮಾರ ವಿಷಾದ ವ್ಯಕ್ತಪಡಿಸಿದರು. ಅಭಿಮಾನಿಗಳನ್ನು ತಡೆಯುವ ಉದ್ದೇಶ ಕುಟುಂಬಕ್ಕೆ ಇರಲಿಲ್ಲ. ಆದರೆ, ಗುಂಪು ದೊಡ್ಡದಾಗಿ ಗದ್ದಲ ಆಗೋದು ಬೇಡ, ಹಾಗೆ ಆಗಿದ್ದೇಯಾದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತಿತ್ತು ಎಂದು ಶಿವಣ್ಣ ಹೇಳಿದರು. ಸಂಪ್ರದಾಯದ ಪ್ರಕಾರ ಎಲ್ಲ ವಿಧಿವಿಧಾನಗಳನ್ನ ನೆರವೇರಿಸಲೇ ಬೇಕು, ಹಾಗಾಗಿ ಅಭಿಮಾನಿಗಳನ್ನು ಸ್ವಲ್ಪ ಸಮಯದವರೆಗೆ ತಡೆಯಲಾಗಿತ್ತು ಎಂದು ಅವರು ಹೇಳಿದರು.

ಬೇರೆ ಬೇರೆ ಕಡೆಗಳಲ್ಲಿ ಪುನೀತ್​ಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ, 16ರಂದು ಕನ್ನಡ ಫಿಲ್ಮ್ ಚೇಂಬರ್​ನವರು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎಂದ ಶಿವಣ್ಣ ತಮಗೆ ಅಪ್ಪು ಬಗ್ಗೆ ಮಾತಾಡಲು ತುಂಬಾ ಕಷ್ಟವಾಗುತ್ತಿದೆ ಎಂದರು.

ಅಪ್ಪು ತಮಗೆ ತಮ್ಮನಿಗಿಂತ ಜಾಸ್ತಿ ಮಗನಂತಿದ್ದ, ಅವನು ಹುಟ್ಟಿದಾಗ ತಮಗೆ 13ರ ಪ್ರಾಯ ಅವನನ್ನು ಎತ್ತಿ ಆಡಿಸಿ ಬೆಳೆಸಿದ್ದು. ಅವನನ್ನು ನೆನಸಿಕೊಂಡು ಅಳಬಹುದು ಅದರೆ, ಎದೆಯನ್ನು ತುಂಬಿಕೊಂಡಿರುವ ದುಃಖವನ್ನು ಹೇಗೆ ಮರೆಯುವುದು? ತಮ್ಮ ಜೀವನ ಕೊನೆಗೊಂಡ ಮೇಲೂ ನೋವು ಮರೆಯಾಗುವುದಿಲ್ಲ ಅಂತ ಶಿವಣ್ಣ ಹೇಳಿದರು.

ಅಪ್ಪುಗೆ ದೇಶದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅವನು ನಿಜಕ್ಕೂ ತಂದೆಗೆ ತಕ್ಕ ಮಗನಾಗಿದ್ದ ಎಂದ ಶಿವಣ್ಣ ಅಪ್ಪು ಅಭಿಮಾನಿಗಳಗೆ ಪ್ರಾಣತ್ಯಾಗ ಮಾಡುವ ಕೆಲಸ ಮಾಡಬಾರದು, ಅವನ ಹೆಸರನ್ನು ಉಳಿಸುವ ಪ್ರಯತ್ನ ಮಾಡಬೇಕು. ಅಭಿಮಾನಿಗಳು ತಮ್ಮ ತಮ್ಮ ಕುಟುಂಬಗಳ ಬಗ್ಗೆ ಯೋಚನೆ ಮಾಡಬೇಕು. ಅಪ್ಪು ಸತ್ತಿದ್ದಾನೆ ಅಂತ ಯಾರೂ ಅಂದುಕೊಳ್ಳಬಾರದು. ಅವನು ನಮ್ಮೊಂದಿಗಿದ್ದಾನೆ ಅಂದುಕೊಂಡೇ ಮುಂದಿನ ಬದುಕು ನಡೆಸಬೇಕು ಎಂದು ಶಿವಣ್ಣ ಆಪೀಲ್ ಮಾಡಿದರು.

ತಮಗೂ ಅಪ್ಪು ನಿರ್ದೇಶಿಸುವ ಚಿತ್ರದಲ್ಲಿ ನಟಿಸಬೇಕೆಂಬ ಮಹದಾಸೆಯಿತ್ತು, ‘ಸಲಗ’ ಚಿತ್ರದ ಪ್ರಿಮೀಯರ್ ನಲ್ಲಿ ಅವನು ತನ್ನಾಸೆಯನ್ನು ಹೇಳಿಕೊಂಡಿದ್ದ ಎಂದು ಶಿವಣ್ಣ ಹೇಳಿದರು.

ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆನ್ನುವ ಚರ್ಚೆಯ ಬಗ್ಗೆ ಅವರನ್ನು ಕೇಳಿದಾಗ ಶಿವಣ್ಣ, ಅಪ್ಪುಗೆ ಯಾವುದೇ ಪ್ರಶಸ್ತಿಯ ಅಗತ್ಯವಿಲ್ಲ. ಅವನು ಅಮರಶ್ರೀ ಆಗಿರುವುದರಿಂದ ಪದ್ಮಶ್ರೀಯಂಥ ಪ್ರಶಸ್ತಿಗಳಿಂದ ಏನೂ ಆಗುವುದಿಲ್ಲ, ಎಲ್ಲರ ಆತ್ಮಗಳಲ್ಲಿ ಅವನು ಶ್ರೀ ಆಗಿದ್ದಾನೆ, ಪದ್ಮಶ್ರೀ ಅವನ ಹೆಸರಿನ ಮುಂದೆ ಸೇರುವ ಟೈಟಲ್ ಮಾತ್ರ ಆಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಪುನೀತ್​ ಆತ್ಮದ ಜತೆ ಮಾತನಾಡಿದ್ದೇನೆ ಎಂದು ವಿಡಿಯೋ ಹಂಚಿಕೊಂಡ ವ್ಯಕ್ತಿಗೆ ಅಭಿಮಾನಿಗಳ ಛೀಮಾರಿ

TV9 Kannada


Leave a Reply

Your email address will not be published. Required fields are marked *