ಬೆಂಗಳೂರು: ಅನಧಿಕೃತ ಟೆಲಿಫೋನ್ ಎಕ್ಸ್​​ಚೇಂಜ್​​ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಕನ್ವರ್ಟ್ ಮಾಡುತ್ತಿದ್ದ ದೊಡ್ಡ ಜಾಲವೊಂದು ಬಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದೆ. ಇಬ್ರಾಹಿಂ ಪುಲ್ಲಟ್ಟಿ ಮೊಹಮ್ಮದ್ ಕುಟ್ಟಿ ಹಾಗೂ ಗೌತಮ್ ಬಂಧಿತರು.

ಅಕ್ರಮವಾಗಿ ಐಎಸ್​​ಡಿ ಕರೆಗಳನ್ನ ಕನ್ವರ್ಟ್​ ಮಾಡುವ ಮೂಲಕ ಈ ಆರೋಪಿಗಳು ದೇಶದ ಭದ್ರತೆಗೆ ಸವಾಲೊಡ್ಡಿದ್ರಾ ಅನ್ನೋ ಆತಂಕ ಮೂಡಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಬಹುದೊಡ್ಡ ಕಾರ್ಯಾಚರಣೆ ನಡೆಸಿ, ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳ(ಎಟಿಸಿ) ಈ ಇಬ್ಬರು ಶಂಕಿತರನ್ನ ಬೇಟೆಯಾಡಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಮಿಲಿಟರಿ ಕಮಾಂಡರ್​​ರಿಂದ ನಮಗೆ ಮಾಹಿತಿ ಬಂದಿತ್ತು. ಬಂಧಿತರಿಂದ 960 ಸಿಮ್ ಕಾರ್ಡ್​​ಗಳನ್ನು ಅಳವಡಿಸುವಂತಹ 30 SIM BOX DEVICE ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ರು.

ಹೇಗೆ ನಡೀತಿತ್ತು ಇವರ ಕೃತ್ಯ?
ಬಿಟಿಎಂ ಲೇಔಟ್​ನ 6 ಕಡೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳು 32 ಸಿಮ್ ಕಾರ್ಡ್ ಅಳವಡಿಸುವಂತಹ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ 900ಕ್ಕು ಹೆಚ್ಚು ಸಿಮ್ ಕಾರ್ಡ್ ಅಳವಡಿಸಿಕೊಂಡಿದ್ದರು. ಈ ಮೂಲಕ ISD ಫೋನ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುತ್ತಿದ್ದರು. ಅಮಾಯಕರ ಗುರುತಿನ ಚೀಟಿಗಳ ಮೂಲಕ ಸಿಮ್ ಕಾರ್ಡ್​ಗಳನ್ನು ಪಡೆಯುತ್ತಿದ್ದರು. ಕೇರಳ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ತಮ್ಮ ಸಹಚರರ ಮೂಲಕ ಗುರುತಿನ ಚೀಟಿಗಳನ್ನ ಸಂಗ್ರಹ ಮಾಡ್ತಿದ್ದರು. ಸಿಮ್ ಪಡೆಯಲು ಬರುವ ಗ್ರಾಮೀಣ ಭಾಗದ ಜನರ ಐಡಿ ಕಾರ್ಡ್ ಡುಪ್ಲೀಕೇಟ್ ಪಡೆದು, ಆ ಮೂಲಕ ಈ ಗ್ಯಾಂಗ್ ಬೇರೆ ಸಿಮ್ ಕಾರ್ಡ್​​ಗಳನ್ನು ಪಡೆಯುತ್ತಿತ್ತು ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ದುಬೈನ ತಮ್ಮ ನೆಟ್​​ವರ್ಕ್​​​ನಿಂದ, ಆರೋಪಿಗಳು ಇಲ್ಲಿ ಹವಾಲಾ ಮೂಲಕ ಹಣ ಪಡೆಯುತ್ತಿದ್ದರು. ತಿಂಗಳಿಗೆ 10 ರಿಂದ 15 ಲಕ್ಷ ಬಿಸಿನೆಸ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಕೇಸ್​​ನಲ್ಲಿ ಸದ್ಯ 5 ಜನರು ಆಕ್ಟಿವ್ ಆಗಿರುವ ಮಾಹಿತಿ ಇದೆ. ಇಬ್ರಾಹಿಂ, ತಿಂಗಳಿಗೆ 70 ಸಾವಿರ ಹಣ ಕೊಟ್ಟು ಈ ಕೆಲಸಕ್ಕಿಟ್ಟುಕೊಂಡಿದ್ದ. ರಾಜ್ಯದ ಇತರೆ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದೇವೆ. ಅಲ್ಲದೇ ಇದುವರೆಗಿನ ಕರೆಗಳ ಮಾಹಿತಿ ಪಡೆಯಲಾಗ್ತಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ಏನಿದು ಸಿಮ್ ಕಿಟ್​..?
ಅಂತಾರಾಷ್ಟ್ರೀಯ ಕರೆಗಳನ್ನ ಸ್ವೀಕರಿಸಿ ಕಡಿಮೆ‌ ದರದಲ್ಲಿ ಮಾತನಾಡಲು ಸಿಮ್ ಕಿಟ್​ ನೆರವಾಗುತ್ತದೆ. ಇಂತಹ ಸಿಮ್ ಕಿಟ್​​ಗಳನ್ನ ವಿದೇಶಿ ಕಂಪನಿಗಳು ಬೇರೆ ದೇಶದ ತಮ್ಮ ಬ್ರಾಂಚ್ ಕಂಪನಿಗಳಿಗೆ ನೀಡುತ್ತವೆ. ಇಂಟರ್​​ನ್ಯಾಷನಲ್​​ ಕಾಲ್​ಗೆ 10 ರೂಪಾಯಿ ಇದ್ರೆ ಇಲ್ಲಿ 1-2 ರೂಪಾಯಿಯಲ್ಲಿ ಮಾತನಾಡಬಹುದು. ಎರಡೂ ದೇಶದಲ್ಲಿ ಕಂಪನಿಗಳಿದ್ರೆ ಈ ಸಿಮ್ ಕಿಟ್ ಸಹಕಾರಿಯಾಗುತ್ತದೆ. ಎಲ್ಲಿ ಕೆಲಸ ಮಾಡ್ತಾರೋ ಅಲ್ಲಿಯೇ ಸಿಮ್ ಕಿಟ್ ಇಟ್ಟುಕೊಳ್ಳಬೇಕು. ಕಿಟ್ ಇಟ್ಟ ಸ್ಥಳದಲ್ಲೇ ಬಂದು ಕಾಲ್ ಕನೆಕ್ಟ್ ಮಾಡಿ‌ ಮಾತನಾಡಬಹುದು.  ಆದರೆ ತೆರಿಗೆ ಇನ್ನಿತರ ಕಾರಣದಿಂದಾಗಿ ಈ ಕಿಟ್​ಗಳನ್ನ ಭಾರತದಲ್ಲಿ ಬಳಸಲು TRAI-Telecom Regulatory authority of India  ಅನುಮತಿ‌ ನೀಡಿಲ್ಲ‌

ಅಲ್ಲದೆ ಸಿಮ್ ಕಿಟ್ ಬಳಸಿದ್ರೆ ಡೇಟಾ, ಸಿಡಿಆರ್(ಕಾಲ್​ ಡೀಟೇಲ್ಸ್​ ರೆಕಾರ್ಡ್​) ರಿಟ್ರೀವ್ ಮಾಡಲು ಆಗುವುದಿಲ್ಲ. ಇದರಿಂದ ಭಯೋತ್ಪಾದಕ ಕೃತ್ಯಗಳು ನಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ದೇಶದ ಅಂತರಿಕ ಭದ್ರತೆಗೆ ಪೆಟ್ಟಾಗಬಹುದು.

10 ರೂಪಾಯಿ ಕಾಲ್ 10 ಪೈಸೆಗೆ ಕನ್ವರ್ಟ್
ಬಂಧಿತ ಆರೋಪಿಗಳು 10 ರೂಪಾಯಿ ಕಾಲ್​ಗಳನ್ನ 10 ಪೈಸೆಗೆ ಕನ್ವರ್ಟ್ ಮಾಡಿದ್ದಾರೆ ಎನ್ನಲಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ನೆರವಾಗುವ ಸಂಬಂಧ ಕಾಲ್ ಕನ್ವರ್ಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇಶದ ಹೊರಗಿನ ಉಗ್ರಗಾಮಿ ಗುಂಪುಗಳ ಜೊತೆ ಮಾತುಕತೆಗೆ ಸಹಕರಿಸಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗ್ತಿದೆ. ಸದ್ಯ ಎಟಿಸಿ ಇನ್ನೂ ಕೆಲ ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಿದೆ.

The post ದೇಶದ ಭದ್ರತೆಗೆ ಗಂಡಾಂತರ: ₹10ರ ISD ಕಾಲ್ 10 ಪೈಸೆಗೆ ಕನ್ವರ್ಟ್ ಮಾಡ್ತಿದ್ದ ಮಹಾಜಾಲ ಬಯಲು appeared first on News First Kannada.

Source: newsfirstlive.com

Source link