ಇದು ಎಲ್ಲರಲ್ಲೂ ಕಾಡ್ತಾ ಇರುವ ಪ್ರಶ್ನೆ. ಇದು ಲಕ್ಷಾಂತರ ಜನರ ಬದುಕಿನ ಪ್ರಶ್ನೆ. ಇದು ಲಕ್ಷಾಂತರ ಜೀವಗಳ ರಕ್ಷಣೆಯ ಪ್ರಶ್ನೆಯೂ ಹೌದು. ದೇಶದ ಬಹುತೇಕ ರಾಜ್ಯಗಳು, ಮಹಾನಗರಗಳು ಕಂಪ್ಲೀಟ್ ಬಂದ್ ಆಗಿ ಹೋಗಿವೆ. ಇನ್ನೆಷ್ಟು ದಿನ ಈ ದಿಗ್ಬಂಧನ ಅನ್ನೋದು ಚಿಂತೆಗೀಡು ಮಾಡಿದೆ.

ದೆಹಲಿ, ಮುಂಬೈ, ಬೆಂಗಳೂರು ಎಲ್ಲೆಡೆ ಕಂಪ್ಲೀಟ್ ಬಂದ್
ಮುಂಬೈ, ದೆಹಲಿ, ಬೆಂಗಳೂರು ಎಲ್ಲಾ ನಗರಗಳೂ ಹೆಚ್ಚು ಕಡಿಮೆ ಬಂದ್ ಆಗಿಬಿಟ್ಟಿವೆ. ನಿತ್ಯ ಕೋಟಿ ಕೋಟಿ ವಹಿವಾಟು ನಡೆಯುವ ಮುಂಬೈ ಸ್ತಬ್ಧವಾಗಿ ಹದಿನೈದು ಇಪ್ಪತ್ತು ದಿನಗಳೇ ಕಳೆದು ಹೋಗಿವೆ. ಇನ್ನಷ್ಟು ದಿನ ಇದು ಮುಂದುವರೆಯಲಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕಥೆಯೂ ಇದೆ. ಎಲ್ಲಾ ಕಡೆ ಬಂದ್ ವಾತಾವರಣ. ಲಾಕ್ ಡೌನ್ ,ಕ್ಲೋಸ್ ಡೌನ್, ಸೀಲ್ ಡೌನ್ ಎಲ್ಲಿ ಕೇಳಿದ್ರೂ ಇದೇ. ಮಹಾನಗರಗಳೆಲ್ಲ ಹೀಗೆ ಸ್ತಬ್ಧವಾಗಿ ಬಿಟ್ಟರೆ ಆರ್ಥಿಕತೆಗೆ ಅದೆಷ್ಟು ಹೊಡೆತ ಬೀಳುತ್ತೆ ಅಂತ ಸುಲಭಕ್ಕೆ ಅಂದಾಜು ಮಾಡಲು ಸಾಧ್ಯವೇ ಇಲ್ಲ.

ತಿಂಗಳುಗಟ್ಟಲೇ ವ್ಯಾಪಾರ-ವಹಿವಾಟು-ಉತ್ಪಾದನೆ-ಸಂಚಾರ ಎಲ್ಲವೂ ನಿಂತು ಹೋಗಿ ಬಿಟ್ರೆ ಏನಾಗುತ್ತೆ? ಜೀವ ಮುಖ್ಯ, ಹಾಗೆಯೇ ಜೀವನವೂ ಮುಖ್ಯ. ಕೊರೊನಾ ಮೂರನೇ ಅಲೆಯ ಹೊಡೆತದಿಂದ ಜನರೆಲ್ಲ ಮನೆಯೊಳಗೆ ಇರುವಂತಾಗಿ ಬಿಟ್ಟಿದೆ. ಅನೇಕರು ಮಹಾನಗರಗಳನ್ನು ಬಿಟ್ಟು ಊರಿಗೆ ಹೋಗಿ ಕುಳಿತು ಬಿಟ್ಟಿದ್ದಾರೆ. ಆದ್ರೆ ಹಳ್ಳಿಗಳಲ್ಲಾದರೂ ನೆಮ್ಮದಿ ಇದ್ಯಾ ಅಂತ ಕೇಳಿದ್ರೆ ಖಂಡಿತ ಇಲ್ಲ. ಗ್ರಾಮಾಂತರ ಪ್ರದೇಶಗಳೇ ಈಗ ಕೊರೊನಾ ಹಾಟ್ ಸ್ಪಾಟ್ಗಳಾಗ್ತಿವೆ. ಹಳ್ಳಿಗಳಲ್ಲೂ ಮನೆಯಿಂದ ಹೊರಗೆ ಬರಲು ಜನ ಹೆದರುತ್ತಿದ್ದಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಊಹಿಸಿಕೊಳ್ಳಿ.

ಇನ್ನೆಷ್ಟು ದಿನ ಮುಂದುವರೆಯುತ್ತೆ ಇಂತಹ ದಿಗ್ಬಂಧನ?
ಕೊರೊನಾ ಎರಡನೇ ಅಲೆ ಶಾಕ್ ಕೊಟ್ಟು ಪರಿಸ್ಥಿತಿ ಇಷ್ಟೊಂದು ಗಂಭೀರವಾಗುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ತಜ್ಞರು ಎಚ್ಚರಿಕೆ ಕೊಡ್ತಾ ಇದ್ರೂ ಜನ, ಸರ್ಕಾರ ಯಾರೂ ಕಿವಿಗೊಡಲಿಲ್ಲ. ಆದ್ರೆ ಯಾವಾಗ ಕೊರೊನಾ ಕೇಸ್ಗಳು ಸಾವಿರಗಟ್ಟಲೇ, ಲಕ್ಷಗಟ್ಟಲೇ ಶುರುವಾಯ್ತೋ ಸ್ವಲ್ಪ ಮಟ್ಟಿಗೆ ಎಚ್ಚೆತ್ತುಕೊಳ್ಳುವಂತಾಯ್ತು. ಇನ್ನ ಸ್ಮಶಾನದ ಬಳಿ ಆ್ಯಂಬುಲೆನ್ಸ್​ಗಳ ಸಾಲು ಹೆಚ್ಚುತ್ತಿದಂತೆ, ಸಾವಿನ ಮೆರವಣಿಗೆಯೇ ಕಾಣ್ತಾ ಇದ್ದಂತೆ ಜನ ಬೆಚ್ಚಿ ಬಿದ್ದರು. ಈ ಕೊರೊನಾ ಚೈನ್ ಬ್ರೇಕ್ ಮಾಡಬೇಕು ಅಂದ್ರೆ ಲಾಕ್​​​ಡೌನ್ ಅನಿವಾರ್ಯ ಅನ್ನೋ ಪರಿಸ್ಥಿತಿ ಬಂದು ಬಿಟ್ಟಿತ್ತು.

ಹೀಗಾಗಿ ಈಗ ಕರ್ನಾಟದಲ್ಲಂತೂ ವಿನಾಯ್ತಿಯೊಂದಿಗೆ ಲಾಕ್​​​ಡೌನ್ ಜಾರಿಯಲ್ಲಿದೆ. ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಇದೇ ಟೈಮ್ನಲ್ಲಿ ಜನರ ಸಂಚಾರ ಹೆಚ್ಚಾಗ್ತಾ ಇದೆ. ಮುಖ್ಯ ರಸ್ತೆಯಲ್ಲಿ ಜನರ ಸಂಚಾರ, ವಾಹನಗಳ ಓಡಾಟ ಅಷ್ಟಾಗಿ ಇಲ್ಲವಾದರೂ ಗಲ್ಲಿ ಗಲ್ಲಿಯಲ್ಲಿ ಅಂಗಡಿಗಳ ಮುಂದೆ ಜನ ನಿಂತಿರ್ತಾರೆ. ಇದರಿಂದ ಕಂಪ್ಲೀಟ್ ಆಗಿ ಈ ಲಾಕ್​​​ಡೌನ್​ನಿಂದ ಕೊರೊನಾ ಚೈನ್ ಬ್ರೇಕ್ ಆಗುತ್ತಾ ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ.

ಬಹುಶಃ ಈಗಿನ ಪರಿಸ್ಥಿತಿ ನೋಡಿದ್ರೆ ಈಗ ಮಾಡಿರುವ ಲಾಕ್​​​ಡೌನ್ ಅವಧಿ ಸಾಕಾಗುತ್ತಾ ಅನ್ನೋ ಪ್ರಶ್ನೆಯೂ ಮೂಡುತ್ತೆ. ಇದೇ ವೇಳೆ ಯಾವಾಗ ಲಾಕ್​​​ಡೌನ್ ತೆರವಾಗಬಹುದು ಅನ್ನೋ ಪ್ರಶ್ನೆಯೂ ಶುರುವಾಗಿದೆ. ಕಾರಣ ಬದುಕು. ಬದುಕೇ ಕಷ್ಟವಾಗಿ ಬಿಟ್ಟಿದೆ. ಮಹಾನಗರಗಳಲ್ಲಿ ಕೆಲಸ ಇಲ್ಲ, ಸಂಬಳ ಇಲ್ಲ ಅಂದ್ರೆ ಬಾಡಿಗೆ ಕಟ್ಟೋದಾದ್ರೂ ಹೇಗೆ? ನಿತ್ಯ ಜೀವನ ಸಾಗಿಸೋದ್ರೂ ಹೇಗೆ? ಇನ್ನು ಸಣ್ಣ ಪುಟ್ಟ ವ್ಯಾಪಾರ ಮಾಡೋರು, ಆಟೋ, ಟ್ಯಾಕ್ಸಿ ಚಾಲಕರು, ಗಾರ್ಮೆಂಟ್ಸ್​​ಗಳಿಗೆ ಹೋಗೋರಿಗಂತೂ ಇನ್ನೆಷ್ಟು ದಿನ ಈ ದಿಗ್ಬಂಧನ ಅಂತ ಚಿಂತೆ ಶುರುವಾಗಿದೆ.

ಮಹಾನಗರಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲೂ ದಿಗ್ಬಂಧನ
ಪರಿಸ್ಥಿತಿ ತೀರಾ ಗಂಭೀರವಾಗಿದೆ. ಬೆಂಗಳೂರಿನಲ್ಲಿ ಕೇಸ್ ಇಳಿಮುಖವಾದಂತೆ ಕಾಣ್ತಾ ಇದೆ. ಆದ್ರೆ ಪಾಸಿಟಿವಿಟಿ ರೇಟ್ ಇಳಿತಾ ಇಲ್ಲ. ಲಕ್ಷಣ ಕಂಡುಬಂದವರಲ್ಲಿ 100 ಜನರಿಗೆ ಟೆಸ್ಟ್ ಮಾಡಿಸಿದರೆ ಅತಿ ಹೆಚ್ಚು ಸಂಖ್ಯೆಯ ಜನರಿಗೆ ಕೊರೊನಾ ದೃಢವಾಗ್ತಿದೆ. ಬೆಂಗಳೂರಿನಲ್ಲಷ್ಟೇ ಅಲ್ಲ. ಹಲವು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಎಂಥಾ ವಿಚಿತ್ರ ನೋಡಿ. ಉತ್ತರ ಕನ್ನಡ ಜಿಲ್ಲೆ ಕೊರೊನಾ ಹಾಟ್ ಸ್ಪಾಟ್ ಆಗಿ ಹೋಗಿದೆ.

ದಟ್ಟ ಅರಣ್ಯವೇ ಆವರಿಸಿರುವ ಈ ಜಿಲ್ಲೆಯಲ್ಲಿ ಜನಸಾಂದ್ರತೆಯೂ ಕಡಿಮೆ. ಅಲ್ಲೊಂದು ಇಲ್ಲೊಂದು ಮನೆಗಳು ಇರುವ ಜಿಲ್ಲೆ. ಸಾಮಾಜಿಕ ಅಂತರ ಸುಲಭ. ಒಬ್ಬರಿಗೊಬ್ಬರು ಸಂಧಿಸೋದು ಕಡಿಮೆ. ಅವರವರ ಪಾಡಿಗೆ ಕಾಡಿನ ಮಧ್ಯೆಯ ಒಂಟಿ ಮನೆಯಲ್ಲಿ ಬದುಕು ಸಾಗಿಸ್ತಾ ಇದ್ದವರಿಗೂ ಕೊರೊನಾ ಕಾಟ ಕೊಟ್ಟಿದೆ. ಮಹಾನಗರದ ಜನಸಂದಣಿಯಿಂದ ಮಲೆನಾಡಿನ ಒಂಟಿ ಮನೆಯವರಿಗೂ ಕೊರೊನಾ ತಲುಪಿಬಿಟ್ಟಿದೆ. ಇಂಥಾ ಪರಿಸ್ಥಿತಿಯಲ್ಲಿ ಲಾಕ್​​​ಡೌನ್ ತೆರವು ಮಾಡಿದ್ರೆ ಮತ್ತಷ್ಟು ಗಂಭೀರ ಪರಿಸ್ಥಿತಿ ಎದುರಾಗೋ ಆತಂಕ.

ಈ ತಿಂಗಳು ಪೂರ್ಣ ಲಾಕ್ ಡೌನ್ ತೆರವು ಮಾಡಲ್ವಾ?
ಮೊದಲು ಲಾಕ್​​​ಡೌನ್ ಇಲ್ಲವೇ ಇಲ್ಲ ಅಂತ ಹೇಳಿದ್ದ ರಾಜ್ಯ ಸರ್ಕಾರ, ಕೊನೆಗೂ ಕ್ಲೋಸ್​ಡೌನ್ ಅಂತ ಹೇಳಿ, ಆನಂತರ ಲಾಕ್​​​ಡೌನ್ ಮಾಡಿತ್ತು. ಈಗ ಮೇ 24ರವರೆಗೆ ಸಾಕಾಗೋದಿಲ್ಲ, ಇನ್ನಷ್ಟು ದಿನ ಮಾಡಬೇಕಾಗಬಹುದು ಅನ್ನೋ ಚರ್ಚೆ ಶುರುವಾಗಿದೆ. ಬಹುಶಃ ಈ ತಿಂಗಳ ಅಂತ್ಯದವರೆಗೂ ಲಾಕ್​​​ಡೌನ್ ವಿಸ್ತರಣೆಯಾಗಬಹುದು. ವಿಸ್ತರಣೆಯಾಗುವ ಲಾಕ್​​​ಡೌನ್ ಇನ್ನಷ್ಟು ಕಠಿಣವಾಗಬಹುದು. ಈಗೇನೋ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರನ್ನು ಬಿಡ್ತಾ ಇದಾರೆ. ಮುಂದೆ ಕೇಸ್ ಇಳಿಮುಖ ಕಂಡಿಲ್ಲ ಅಂತಾದ್ರೆ ಇನ್ನಷ್ಟು ಸ್ಟ್ರಿಕ್ಟ್ ರೂಲ್ಸ್ ತರೋದು ಅನಿವಾರ್ಯ ಆಗುತ್ತೆ.

ಬಹುಶಃ ಅಂತಹ ಪರಿಸ್ಥಿತಿ ಬಂದರೆ ಮೂರ್ನಾಲ್ಕು ದಿನಗಳಿಗೊಮ್ಮೆ ಒಂದೆರಡು ಗಂಟೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕೊಟ್ಟರೂ ಕೊಡಬಹುದು. ಕೆಲವು ಜಿಲ್ಲೆಗಳಲ್ಲಿ ಕಂಪ್ಲೀಟ್ ಬಂದ್ ಮಾಡಲು ಯೋಚನೆ ನಡೀತಾ ಇದೆ. ಕೆಲವು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಇದನ್ನು ಮಾಡಿಯೂಬಿಟ್ಟಿದ್ದಾರೆ. ಹೀಗಿರುವಾಗ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಇನ್ನಷ್ಟು ಸ್ಟ್ರಿಕ್ಟ್ ರೂಲ್ಸ್ ತಂದರೆ ಅಚ್ಚರಿಯೇನೂ ಇಲ್ಲ.

ಮುಂಬೈನಲ್ಲಿ ನಿರ್ಬಂಧ ಮುಂದುವರೆಸಲಾಗಿದೆ. ದೆಹಲಿಯಲ್ಲೂ ಲಾಕ್​​​ಡೌನ್ ಮುಂದುವರೆಸಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕೇಸ್ ಇಳಿಮುಖವಾಗದೇ ಇದ್ರೆ ಬಿಡೋಕಾಗುತ್ತಾ. ಖಂಡಿತ ಲಾಕ್​​​ಡೌನ್ ಕಂಟಿನ್ಯೂ ಆಗುತ್ತೆ. ಕಾರಣ ಈಗ ಕೊರೊನಾ ಕಂಟ್ರೋಲ್ ಮಾಡಲು ಫೈನಲ್ ಆಗಿ ಇರೋ ಮಾರ್ಗವೇ ಲಾಕ್​​​ಡೌನ್. ಇದು ಬಿಟ್ಟರೆ ಬೇರೆ ಯಾವ ದಾರಿಯೂ ಕಾಣ್ತಾ ಇಲ್ಲ. ಆದರೆ, ಲಾಕ್​​​ಡೌನ್ ವಿಸ್ತರಣೆ ಆಗ್ತಾ ಹೋದಂತೆ ಜನ ಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಹೇಗೋ ಹದಿನೈದು ದಿನ, ಒಂದು ತಿಂಗಳಾದರೂ ತಡೆದುಕೊಳ್ಳಬಹುದು. ಆದ್ರೆ ತಿಂಗಳು ಕಳೆದ ಬಳಿಕವೂ ಲಾಕ್​​​ಡೌನ್ ಮುಂದುವರೆಸುವ ಪರಸ್ಥಿತಿ ಬಂದುಬಿಟ್ಟರೆ ಆಗ ತೀರಾ ಸಂಕಷ್ಟಕ್ಕೀಡಾಗಲಿದ್ದಾರೆ ಜನ.

ಇದಕ್ಕಿರುವ ಮಾರ್ಗ ಅಂದ್ರೆ ಜನರೇ ಸ್ವಯಂ ನಿರ್ಬಂಧ ವಿಧಿಸಿಕೊಳ್ಳೋದು. ಎಷ್ಟು ದಿನ ಮನೆಯಿಂದ ಹೊರಗೆ ಬರದೆ ಲಾಕ್​​​ಡೌನ್ ಸಕ್ಸಸ್ ಆಗೋದಕ್ಕೆ ಜನ ಸಹಕಾರ ಕೊಡ್ತಾರೋ ಆಗ ಆದಷ್ಟು ಬೇಗ ಮತ್ತೆ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಲು ನಿರ್ಬಂಧ ತೆರವಾಗಬಹುದು. ಇಲ್ಲವಾದರೆ ಮತ್ತಷ್ಟು ದಿನ ದಿಗ್ಬಂಧನ ಖಚಿತ. ಇದು ಸರ್ಕಾರದ ಮಟ್ಟದಲ್ಲೇ ಚರ್ಚೆಯಾಗ್ತಿದೆ. ಇನ್ನು ಕೆಲವು ತಜ್ಞರಂತೂ ಇನ್ನೂ ನಾಲ್ಕರಿಂದ ಆರು ವಾರಗಳ ಕಾಲ ಲಾಕ್ ಡೌನ್ ಮಾಡಿದರೆ ಒಳಿತು ಅಂತ ಹೇಳ್ತಿದಾರೆ. ಆದರೆ ಆರ್ಥಿಕತೆಯ ದೃಷ್ಟಿಯಂದ, ಜನಸಾಮಾನ್ಯರ ಬದುಕಿನ ದೃಷ್ಟಿಯಿಂದ ಸರ್ಕಾರ ಅನಿವಾರ್ಯವಾಗಿ ಲಾಕ್​​​ಡೌನ್ ಓಪನ್ ಮಾಡಬೇಕಾಗುತ್ತದೆ. ಇಲ್ಲವಾದರೆ ಕೊರೊನಾ ಸಮಸ್ಯೆಯ ಜೊತೆಗೆ ಜನ ಸಾಮಾನ್ಯರ ನಿತ್ಯ ಬದುಕಿನ ಸಮಸ್ಯೆಗೂ ಪರಿಹಾರ ಕೊಡಬೇಕಾದ ಸಂದರ್ಭವೂ ಎದುರಾಗಬಹುದು.

ಒಂದು ಕಡೆ ಕೊರೊನಾ ತರ್ತಾ ಇರುವ ಸಾವು, ಅದರಿಂದ ತಮ್ಮವರನ್ನು ಕಳೆದುಕೊಂಡಿರುವವರ ಗೋಳು, ಇನ್ನೊಂದು ಕಡೆ ಲಾಕ್​​​ಡೌನ್ನಿಂದ ಬದುಕಿನ ಬಂಡಿ ದೂಡಲಾಗದೇ ಇರುವವರ ಸಂಕಷ್ಟ. ಜೀವನ ಮುಂದೆ ಕಟ್ಟಿಕೊಳ್ಳಬಹುದು, ಜೀವ ಹೋಗಿ ಬಿಟ್ರೆ ಮತ್ತೆ ಬರುತ್ತಾ? ಹೀಗಾಗಿ ತಾಳ್ಮೆಯಿಂದ ಇರುವುದೇ ಸೂಕ್ತ. ಜಗತ್ತೇ ಸಂಕಷ್ಟದಲ್ಲಿರುವಾಗ ಯಾರೋ ಒಂದಿಷ್ಟು ಜನ ಮಾತ್ರ ಸಂಕಷ್ಟಕ್ಕೆ ಗುರಿಯಾಗಿಲ್ಲ. ಬದುಕಿನಲ್ಲಿ ಎದುರಾದ ಇಂತಹ ಸವಾಲನ್ನು ಎಲ್ಲರೂ ಧೈರ್ಯದಿಂದ ಎದರಿಸಲೇಬೇಕು. ಲಾಕ್​​​ಡೌನ್ ಕಂಟಿನ್ಯೂ ಆದ್ರೂ ಸಹಿಸಿಕೊಳ್ಳಬೇಕು. ಇನ್ನಷ್ಟು ದಿನ ಕೊರೊನಾ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುತ್ತಲೇ ಇರಬೇಕು.

ಇದು ನಿಜಕ್ಕೂ ಎಲ್ಲರಿಗೂ ಅಗ್ನಿ ಪರೀಕ್ಷೆಯ ಕಾಲ. ಹಲವರಿಗೆ ಜೀವನದ ಪ್ರಶ್ನೆ. ಇನ್ನು ಕೆಲವರಿಗೆ ಜೀವ ಕಾಪಾಡಿಕೊಳ್ಳಬೇಕಾದ ಪರೀಕ್ಷೆ.

The post ದೇಶದ ಮಹಾನಗರಗಳು ಕಂಪ್ಲೀಟ್ ಬಂದ್ -ಮೇ 24ರ ಬಳಿಕವೂ ಮುಂದುವರೆಯುತ್ತಾ ಲಾಕ್​​​ಡೌನ್? appeared first on News First Kannada.

Source: newsfirstlive.com

Source link