ಮುಂಬೈ: ದೇಶದ ಮೊದಲ ರೂಫ್ ಟಾಪ್ ಡ್ರೈವ್ ಇನ್ ಸಿನಿಮಾ ಥಿಯೇಟರ್ ಮಹಾರಾಷ್ಟ್ರದ ಮುಂಬೈನಲ್ಲಿ ಆರಂಭಗೊಂಡಿದೆ.
ರಿಲಯನ್ಸ್ ರಿಟೇಲ್ ಸಹಭಾಗಿತ್ವದಲ್ಲಿ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ಸುಮಾರು 290 ವಾಹನಗಳಿಗೆ ಸ್ಥಳಾವಕಾಶ ನೀಡುವ ಡ್ರೈವ್-ಇನ್ ಥಿಯೇಟರ್ ಶುರುವಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ ಸೂರ್ಯವಂಶಿ ಚಿತ್ರ ಡ್ರೈವ್-ಇನ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರವಾಗಿದೆ. ಕೊರೊನಾ ನಂತರ ಚಿತ್ರಮಂದಿರಕ್ಕೆ ಪರ್ಯಾಯವಾಗಿ ಡ್ರೈವ್ ಇನ್ ಥಿಯೇಟರ್ ಗಮನ ಸೆಳೆಯುತ್ತಿದೆ.
ಏನಿದು ಡ್ರೈವ್ ಇನ್ ಥಿಯೇಟರ್?
ಕಾರು ಪಾರ್ಕಿಂಗ್‌ನಂತಹ ದೊಡ್ಡ ದೊಡ್ಡ ಜಾಗದಲ್ಲಿ ಅತಿ ದೊಡ್ಡ ಸ್ಕ್ರೀನ್ ಅಳವಡಿಸಿ ಕಾರಿನಲ್ಲಿಯೇ ಕುಳಿತು ಸಿನಿಮಾ ನೋಡಲು ಮಾಡಲಾಗುವ ವ್ಯವಸ್ಥೆಯೇ ಡ್ರೈವ್ ಇನ್ ಥಿಯೇಟರ್. ಪರದೆ ಮೇಲೆ ಬರೀ ಸಿನಿಮಾ ಮಾತ್ರ ಮೂಡುತ್ತಿರುತ್ತದೆ. ಅದರ ಶಬ್ದ ಕಾರಿನ ಒಳಗಿನ ಸಿಸ್ಟಮ್‌ಗೂ ಕನೆಕ್ಟ್ ಆಗುವಂತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಅಥವಾ ಕಾರಿನ ಪಕ್ಕ ದೊಡ್ಡದಾದ ಸ್ಪೀಕರ್ ಇಡಲಾಗಿರುತ್ತದೆ.