ದೇಶದ ವಿವಿಧೆಡೆ ಅಡುಗೆ ಎಣ್ಣೆ ದರ 20 ರೂಪಾಯಿಯಷ್ಟು ಇಳಿಕೆ: ಕೇಂದ್ರ ಆಹಾರ ಇಲಾಖೆ ಮಾಹಿತಿ | Edible oil prices declined by up to Rs 20, says food department


ದೇಶದ ವಿವಿಧೆಡೆ ಅಡುಗೆ ಎಣ್ಣೆ ದರ 20 ರೂಪಾಯಿಯಷ್ಟು ಇಳಿಕೆ: ಕೇಂದ್ರ ಆಹಾರ ಇಲಾಖೆ ಮಾಹಿತಿ

ಅಡುಗೆ ಎಣ್ಣೆ

ದೆಹಲಿ: ಭಾರತದಲ್ಲಿ ಅಡುಗೆ ಎಣ್ಣೆಯ ಧಾರಣೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ದೇಶದ ವಿವಿಧೆಡೆ ₹ 7ರಿಂದ ₹ 20 ರೂಪಾಯಿಯವರೆಗೆ ದರ ಕಡಿಮೆಯಾಗಿದೆ ಎಂದು ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳೆ ಎಣ್ಣೆ, ಶೇಂಗಾ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳ ಧಾರಣೆಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಈ ಎಣ್ಣೆಗಳು ಖಾದ್ಯತೈಲ ಮಾರುಕಟ್ಟೆಯಲ್ಲಿ ಶೇ 89ರಷ್ಟು ಪಾಲು ಹೊಂದಿವೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮತ್ತೊಂದು ಅವಧಿಗೆ ವಿಸ್ತರಿಸುವ ಪ್ರಸ್ತಾವವಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಸ್ತುತ ದೇಶದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದೆ. ಈ ಹಂತದಲ್ಲಿ ಗರೀಬ್ ಕಲ್ಯಾಣ್ ಯೋಜನೆಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದರು.

ಕೊವಿಡ್-19 ಪಿಡುಗಿನಿಂದ ಸಂಕಷ್ಟ ಅನುಭವಿಸುತ್ತಿರುವ ದೇಶದ ಬಡ ಜನರಿಗೆ ಆಹಾರ ಒದಗಿಸುವ ₹ 1.70 ಲಕ್ಷ ಕೋಟಿ ಮೊತ್ತದ ಯೋಜನೆ ಇದು. ದೇಶದಲ್ಲಿ ಜೀವನಾಶ್ಯಕ ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆಹಾರ ಧಾನ್ಯಗಳು ಮತ್ತು ಖಾದ್ಯ ತೈಲಗಳ ಬೆಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುವುದು. ಮುಂದಿನ ವಾರದಿಂದ ರಾಜ್ಯ ಸರ್ಕಾರಗಳು ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ ದಾಸ್ತಾನು ಮಿತಿ ಪ್ರಕಟಿಸಲಿವೆ ಎಂದು ಘೋಷಿಸಿದ್ದರು.

ಕೇವಲ ಎರಡು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಇಂಧನ ಬೆಲೆ ಕಡಿತವನ್ನು ಘೋಷಿಸಿತ್ತು. ದೀಪಾವಳಿಗೆ ಮೊದಲು, ಅಂದರೆ ನ.3ರಿಂದ ಪ್ರತಿ ಲೀಟರ್‌ ಪೆಟ್ರೋಲ್‌ ₹ 5 ಹಾಗೂ ಪ್ರತಿ ಲೀಟರ್ ಡೀಸೆಲ್‌ ಮೇಲೆ ₹ 10 ರೂಪಾಯಿ ಅಬಕಾರಿ ತೆರಿಗೆ ಕಡಿಮೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: ಬೆಲೆ ಏರಿಕೆಯಾದ ತಕ್ಷಣ ವೈಭವೀಕರಣ ಮಾಡುವುದು ಬಿಡಿ; ಸಂಸದ ಜಿಎಂ ಸಿದ್ದೇಶ್ವರ್
ಇದನ್ನೂ ಓದಿ: ಗ್ಯಾಸ್, ಅಡುಗೆ ಎಣ್ಣೆ ದರ ಇಳಿಸದಿದ್ದರೆ 2023ರ ಚುನಾವಣೆಯಲ್ಲೂ ಬಿಜೆಪಿಗೆ ಸೋಲಾಗಲಿದೆ: ಡಿಕೆ ಶಿವಕುಮಾರ್

TV9 Kannada


Leave a Reply

Your email address will not be published. Required fields are marked *