ರಾಜಕೀಯ ನಿಂತ ನೀರಲ್ಲ ಅನ್ನೋ ಮಾತಿನಂತೆ ಇವತ್ತಿದ್ದ ಸ್ಥಾನಮಾನ ನಾಳೆ ಇರೋದಿಲ್ಲ. ಅದೇ ರಾಜಕೀಯ. ಯಾಕೆ ಈ ಮಾತು ಈಗ ಅನ್ನೋದಕ್ಕೆ ಒಂದು ಕಾರಣವಿದೆ. ಅಂದು ಇಡೀ ಏಷ್ಯಾ ಖಂಡವೇ, ಆ ದಕ್ಷ ಮಹಿಳಾ ರಾಜಕಾರಣಿಯತ್ತ ತಿರುಗಿ ನೋಡಿತ್ತು. ಆದ್ರೆ ಇಂದು ಮತ್ತೆ ಆ ರಾಜಕಾರಣಿ ಮಹಿಳೆ ಬಗ್ಗೆ ರಾಜಕೀಯ ಚರ್ಚೆ ಶುರು ಆಗಿದೆ. ಹಾಗಾದ್ರೆ ಯಾರು ಅವರು? ಅವರ ವಿಚಾರದಲ್ಲಿ ಅಂಥದ್ದೇನಾಯ್ತು? ಅದರ ಹಿಂದಿರೋ ಅಸಲಿ ರಾಜಕೀಯ ಏನ್ ಗೊತ್ತಾ?

ಶೈಲಜಾ ಟೀಚರ್ ಇವತ್ತು ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಹೆಸರು ಇವತ್ತು ರಾಜಕೀಯದ ಪುಸ್ತಕದ ಪುಟಗಳಲ್ಲಿ ಸೇರಿಕೊಂಡಿದೆ ಅಂದ್ರೆ ತಪ್ಪಾಗೋದಿಲ್ಲಾ. ಒಂದು ಬಾರಿ ಅವರು ತೆಗೆದುಕೊಂಡ ನಿರ್ಧಾರಗಳು ಇಡೀ ವಿಶ್ವವೇ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿತ್ತು. ಹಾಗೆ ಅವರು ನಿಭಾಯಿಸಿದ ಕಾರ್ಯ ವೈಖರಿಗೆ ಕೇರಳ ಮಾತ್ರವಲ್ಲ ಭಾರತವೇ ಹೆಮ್ಮೆ ಪಡುವಂತಾಗಿತ್ತು. ಇವತ್ತು ಅವರ ವಿಚಾರದಲ್ಲಿ ರಾಜಕೀಯ ನಡೆದಿರೋದು ಕೇರಳಿಗರಲ್ಲಿ ಅತೀವ ಬೇಸರ ತರಿಸಿದೆ. ಹಾಗಾದ್ರೆ ಅವರ ವಿಚಾರದಲ್ಲಿ ಸಿಎಂ ಪಿಣರಾಯಿ ವಿಜಯನ್ ತೆಗೆದುಕೊಂಡ ನಿರ್ಧಾರ ಏನು ಅನ್ನೋದನ್ನ ನೋಡ್ತಾ ಹೋಗೋಣ ಬನ್ನಿ.

2021ರ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪಿಣರಾಯಿ ವಿಜಯನ್ ಪಕ್ಷ ಅಧಿಕಾರದ ಚುಕ್ಕಾಣಿಗೇರಿದೆ. ಹಾಗಾಗಿ ಮತ್ತೊಮ್ಮೆ ಪಿಣರಾಯಿ ವಿಜಯನ್ ಸಿಎಂ ಆಗುತ್ತಿದ್ದಾರೆ. ಅದು ಇದೇ ತಿಂಗಳ 20 ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಆದ್ರೆ ಕಳೆದ ಬಾರಿ ಪಿಣರಾಯ್​​​ ಕ್ಯಾಬಿನೆಟ್​ನಲ್ಲಿದ್ದ ಕೆ.ಕೆ. ಶೈಲಜಾ ಅವರನ್ನ ಕೈಬಿಟ್ಟಿದೆ. ಈಗ ಇದೇ ವಿಚಾರಕ್ಕೆ ಕೇರಳದಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಯಾನ ಕೂಡ ಶುರು ಮಾಡಿದ್ದಾರೆ.

ಆರೋಗ್ಯ ಸಚಿವರಾಗಿದ್ದ ಕೆ.ಕೆ. ಶೈಲಜಾ ಅವರ ನಿರ್ಧಾರಗಳು ಹಾಗಿತ್ತು. ಅಂತಾ ಕಟು ನಿರ್ಧಾರಗಳಿಂದಲೇ ಅವರು ಏಷ್ಯಾದಲ್ಲಿ ಖ್ಯಾತಿಯನ್ನ ಪಡೆದುಕೊಂಡಿದ್ದರು. ಎಲ್​ಡಿಎಫ್​ ಪಕ್ಷದಿಂದ ಎಂಎಲ್​ಎ ಆಗಿ ರಾಜಕೀಯ ಪ್ರವೇಶ ಮಾಡಿದ್ದ ಅವರು ತೆಗೆದುಕೊಂಡಿದ್ದ ನಿರ್ಧಾರಗಳು ನಿಜಕ್ಕೂ ಗ್ರೇಟ್ ಅನ್ನಿಸುತ್ತೆ. ಅಷ್ಟರ ಮಟ್ಟಿಗೆ ಅವರು ಯಶಸ್ವಿಯಾಗಿ ಎಲ್ಲೂ ಕೂಡ ರಾಜ್ಯಕ್ಕಾಗಲಿ, ಪಕ್ಷಕ್ಕಾಗಲಿ ಧಕ್ಕೆ ಬಾರದಂತೆ ಕೆಲಸ ಮಾಡಿದ್ದರು. ಆದ್ರೆ ಈ ಬಾರಿಯೂ ಅವರಿಗೆ ಆರೋಗ್ಯ ಖಾತೆ ಸಿಕ್ಕೇ ಬಿಡುತ್ತೆ ಅಂತಾ ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಅವರನ್ನ ಕ್ಯಾಬಿನೇಟ್​ನಿಂದ ಕೈ ಬಿಡಲಾಗಿದೆ ಅನ್ನೋ ಪಕ್ಷದ ಹಿರಿಯ ಮುಖಂಡರು ಘೋಷಣೆ ಮಾಡುತ್ತಿದ್ದಂತೆ ಎಲ್ಲರಿಗೂ ಶಾಕ್ ಆಗಿತ್ತು. ಅಂತಾ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಅಂತಾ ನೋಡೋಣ.. ಅದಕ್ಕೂ ಮುನ್ನ ಅವರ ಕಾರ್ಯಗಳನ್ನ ಒಮಮ್ಮೆ ಮೆಲುಕು ಹಾಕಿಬಿಡೋಣ ಬನ್ನಿ.

2004 ರಲ್ಲಿ ಮೊದಲಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ರು ಟೀಚರ್ ಶೈಲಜಾ ಅವರು. ಅದಕ್ಕೂ ಮೊದಲು ಸುಮಾರು 23 ವರ್ಷಗಳ ಕಾಲ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಮೊಟ್ಟ ಮೊದಲ ಬಾರಿಗೆ ರಾಜಕೀಯಕ್ಕೆ ಕಾಲಿಟ್ಟಾಗ ಅವರಿಗೆ ಸ್ವಾಗತ ಮಾಡಿದ್ದು ಸಿಪಿಐ(ಎಂ). ಅದಕ್ಕೂ ಮುನ್ನ ಅವರು ಡಿವೈಎಫ್​​ಐ ನಲ್ಲಿ ತಮ್ಮನ್ನ ತಾವು ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಹೀಗೆ 2004 ರಲ್ಲಿ ರಾಜಕೀಯದ ಅಖಾಡಕ್ಕೆ ಧುಮುಕ್ಕಿದ್ದ ಟೀಚರ್ ಶೈಲಜಾ ಅವರು ಎಂದಿಗೂ ಹಿಂದೆ ತಿರುಗಿ ನೋಡಲಿಲ್ಲ. ಒಂದು ರಾಜ್ಯದ ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡಿ ಆ ಕೆಲಸಕ್ಕೆ ವಾಷಿಂಗ್​ಟನ್​ನಲ್ಲಿ ಸನ್ಮಾನ ಮಾಡುತ್ತೆ ಅಂದ್ರೆ ಅರ್ಥ ಮಾಡಿಕೊಳ್ಳಿ, ಇನ್ಯಾವ ರೀತಿ ತಮಗೆ ಕೊಟ್ಟಿದ್ದ ಜವಾಬ್ದಾರಿಯನ್ನ ನಿಭಾಯಿಸಿದ್ದರು ಅನ್ನೋದನ್ನ.

ಅವರು ಆರೋಗ್ಯ ಸಚಿವರಾಗಿ ಒಂದೆರಡು ಕಷ್ಟಗಳನ್ನ ಎದುರಿಸಲಿಲ್ಲ. ಬದಲಾಗಿ ಅದೆಂಥದ್ದೇ ಕಷ್ಟ ಎದುರಾದ್ರೂ ಕೂಡ ಜನರನ್ನ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಅದಕ್ಕೆ ತಕ್ಕಂತೆ ಒಂದು ಅಧಿಕಾರಿಗಳ ತಂಡವನ್ನ ಕಟ್ಟಿಕೊಂಡು ಖುದ್ದು ಫೀಲ್ಡ್​ಗೆ ಎಂಟ್ರಿ ಕೊಟ್ಟು, ಸಂಪೂರ್ಣವಾಗಿ ಕಾರ್ಯ ಪ್ರವೃತ್ತರಾಗಿ ಕಾರ್ಯವನ್ನ ತಾವು ನಿರ್ವಹಿಸುತ್ತಿದ್ದರು, ಎಲ್ಲರನ್ನೂ ತಮ್ಮ ಜೊತೆಯಲ್ಲಿ ನಿಭಾಯಿಸುವಂತೆ ತಿಳಿಸುತ್ತಿದ್ದಾರೆ. ಅಂದ್ರೆ ಒಬ್ಬ ಲೀಡರ್​​ಗೆ ಇದ್ದ ಎಲ್ಲ ಗುಣ ಲಕ್ಷಣಗಳು ಟೀಚರ್ ಶೈಲಜಾ ಅವರಲ್ಲಿ ಇತ್ತು ಅಂದ್ರೆ ತಪ್ಪಾಗೋದಿಲ್ಲಾ.

2018 ರಲ್ಲಿ ಎದುರಾಗಿತ್ತು ನಿಫಾ ವೈರಸ್ ಹಾವಳಿ
ಹೌದು. ಹಿಂದೆಂದೂ ಕೇಳದ ಹೊಸ ವೈರಸ್ ಒಂದು ಕೇರಳದಲ್ಲಿ 2018 ರಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಅದು ಒಂದು ವೈರಸ್ ಅನ್ನೋದು ಯಾರಿಗೂ ಗೊತ್ತಾಗಿರಲಿಲ್ಲ. ಅಲ್ಲದೇ ಆ ವೈರಸ್ ಮುಂದಿನ ದಿನಗಳಲ್ಲಿ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸೋ ಖಾಯಿಲೆ ಆಗುತ್ತೆ ಅಂತಾನೂ ಅಂದುಕೊಂಡಿರಲಿಲ್ಲ. ಯಾಕೆಂದ್ರೆ ವೈರಸ್ ಕಾಣಿಸಿಕೊಂಡ ಮೂರೇ ದಿನಗಳಲ್ಲಿ ಕೇರಳ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ನೋಡ ನೋಡುತ್ತಿದ್ದಂತೆ ಅಮಾಯಕರನ್ನ ಬಲಿ ಪಡೆಯೋದಕ್ಕೆ ಶುರು ಮಾಡಿತ್ತು.

ಎಸ್​​.. ನಿಫಾ ವೈರಸ್ ದಾಳಿಗೆ ದೇವರ ನಾಡು ಕೇರಳ ಅಕ್ಷರಶಃ ತತ್ತರಿಸಿ ಹೋಗಿತ್ತು. ಅದರಲ್ಲೂ ಕೋಝಿಕೋಡಾ ಹಾಗೂ ಮಲಪ್ಪುರಂ ಜಿಲ್ಲೆಯಲ್ಲಿ ನಿಗೂಢ ವೈರಸ್​​ ಸೋಂಕಿನಿಂದ ಜನಜೀವನವೇ ಅಸ್ತವ್ಯಸ್ತಗೊಂಡಿತ್ತು. ಯಾರಿಗೆಲ್ಲಾ ಸೋಂಕು ಪತ್ತೆಯಾಗುತ್ತಿತ್ತೋ, ಅವರೆಲ್ಲ ಇದ್ದಲ್ಲೇ ಕುಸಿದು ಬೀಳೋಕೆ ಶುರು ಮಾಡಿಕೊಳ್ಳುತ್ತಿದ್ದರು. ಆಗಲೇ ನೋಡಿ ಆ ವೈರಸ್ ಯಾವುದು ಅಂತಾ ಪತ್ತೆ ಹಚ್ಚೋಕೆ ಅಂತಾ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದ ಟೀಚರ್ ಶೈಲಜಾ ಅವರು ಕೆಲವೇ ಗಂಟೆಗಳಲ್ಲಿ ಅದು ನಿಫಾ ವೈರಸ್ ಅನ್ನೋದನ್ನ ಅಧಿಕಾರಿಯೊಬ್ಬರು ಕಂಡುಕೊಂಡು ಅದನ್ನ ಆರೋಗ್ಯ ಸಚಿವರ ಬಳಿ ಹೇಳಿಕೊಂಡಿದ್ದರು. ಆ ಅಧಿಕಾರಿ ಅದರ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದರು. ಅದು 1998 ರಲ್ಲೇ ಮೊದಲ ಬಾರಿಗೆ ಪತ್ತೆಯಾಗಿತ್ತು. ಆಗ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿ ಎದುರಾಗಿತ್ತು. ಅಂದು ವೈರಸ್ ಪತ್ತೆಯಾಗಿದ್ದರೂ ಅದಕ್ಕೆ ಇನ್ನೂ ಸೂಕ್ತ ಮೆಡಿಸಿನ್ ಕಂಡು ಹಿಡಿದಿರಲಿಲ್ಲ. ಯಾವಾಗ ಆ ವೈರಸ್ ದೇವರ ನಾಡಿಗೆ ಎಂಟ್ರಿ ಕೊಟ್ಟಿದೆ ಅನ್ನೋದು ಗೊತ್ತಾಗಿತ್ತೋ ಆಗಲೇ ನೋಡಿ ಆರೋಗ್ಯ ಸಚಿವರಾಗಿದ್ದ ಟೀಚರ್ ಶೈಲಜಾ ಅವರು ತೆಗೆದುಕೊಂಡ ನಿರ್ಧಾರಗಳು ಕಠಿಣವಾದ್ರೂ ವೈರಸ್ ವಿರುದ್ಧ ಹೋರಾಡಲು ಯಶಸ್ವಿಯಾಗಿತ್ತು. ಜನರಿಗೆ ತಿಳಿಯದಂತೆ ಅದೆಷ್ಟೋ ಕೆಲಸಗಳು ಅವರ ಮಧ್ಯೆ ನಡೆಯುತ್ತಿತ್ತು.

ಹೀಗೆ ನಿಫಾ ವೈರಸ್​ ಅನ್ನ ಎದುರಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದರು ಟೀಚರ್ ಶೈಲಜಾ. ಅಲ್ಲದೇ ಆಗಲೇ ನೋಡಿ ಕೇರಳದಲ್ಲಿ ಸ್ವಚ್ಚತೆ ಅನ್ನೋದರ ಕಡೆ ಹೆಚ್ಚೆಚ್ಚು ಗಮನ ಕೊಡೋದಕ್ಕೆ ಶುರು ಮಾಡಿದ್ದು. ಆಗಲೇ ನೋಡಿ ಇಡೀ ಏಷ್ಯಾದಲ್ಲಿಯೇ ಟೀಚರ್ ಶೈಲಜಾ ಅವರ ಕೊಂಡಾಡೋದಕ್ಕೆ ಶುರು ಮಾಡಿದ್ದು. ಹೀಗೆ ನಿಫಾ ವೈರಸ್ ವಿರುದ್ದ ಹೋರಾಡಿ ಗೆದ್ದು ಹೊರ ಬಂದು ಸಹಜ ಸ್ಥಿತಿಯನ್ನ ಮರಳುತ್ತಿದ್ದ ಕೇರಳಕ್ಕೆ ಮತ್ತೊಂದು ಶಾಕ್ ಎದುರಾಗಿತ್ತು.

ಪ್ರಕೃತಿ ವಿಕೋಪಕ್ಕೆ ಸಿಲುಕಿತ್ತು ಕೇರಳ
ಹೌದು. 2018 ಹಾಗೂ 2019 ರ ಸಂದರ್ಭದಲ್ಲಿ ಕೇರಳ ಆಗಷ್ಟೇ ನಿಫಾ ವೈರಸ್ ನಿಂದ ಚೇತರಿಸಿಕೊಂಡು ಸಹಜ ಜೀವನದತ್ತ ಸಾಗುತ್ತಿತ್ತು. ಆಗಲೇ ನೋಡಿ ಕೇರಳದಲ್ಲಿ ಪ್ರಕೃತಿ ವಿಕೋಪ ಎದುರಾಗಿತ್ತು. ಆಗಂತೂ ಕೇರಳದಲ್ಲಿನ ಅದೆಷ್ಟೋ ಡ್ಯಾಮ್​ಗಳು ಹೊಡೆದು ಡ್ಯಾಮ್​ನಲ್ಲಿದ್ದ ನೀರೆಲ್ಲಾ ನಗರ ಪ್ರದೇಶಗಳತ್ತ ನುಗ್ಗೋದಕ್ಕೆ ಶುರು ಆಗಿತ್ತು. ಆ ಸಂದರ್ಭದಲ್ಲಿ ಕೇರಳ ಸರ್ಕಾರವೇ ಏನೂ ಮಾಡದೇ ಸುಮ್ಮನಾಗಿ ಬಿಟ್ಟಿತ್ತು. ಆಗ ಮತ್ತೆ ಫೀಲ್ಡ್​ಗೆ ಧುಮುಕ್ಕಿದ ಟೀಚರ್ ಶೈಲಜಾ ಅವರು ತಮ್ಮ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಾಕಷ್ಟು ಕ್ರಮಗಳನ್ನ ತೆಗೆದುಕೊಂಡು ತತ್ತರಿಸಿಹೋಗಿದ್ದ ಜನ ಜೀವನವನ್ನ ಮರಳಿ ಸಹಜ ಸ್ಥಿತಿಗೆ ಬರುವಂತೆ ಬಹುಮುಖ್ಯ ಪಾತ್ರವನ್ನ ವಹಿಸಿದ್ದರು. ಹೀಗೆ ಒಂದಾದ ಮೇಲೊಂದರಂತೆ ಸಮಸ್ಯೆಗಳು ಎದುರಾಗುತ್ತಿತ್ತು. ಆದ್ರೂ ಕೂಡ ಅದ್ಯಾವುದಕ್ಕೂ ಹಿಂಜರಿಯದೇ ಆರೋಗ್ಯ ಸಚಿವೆ ಆಗಿದ್ದ ಕೆಕೆ ಶೈಲಜಾ ಅವರು ಧೈರ್ಯದಿಂದಲೇ ಕಟ್ಟುನಿಟ್ಟಿನ ಕ್ರಮಗಳನ್ನ, ನಿರ್ಧಾರಗಳನ್ನ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತಿದ್ದರು. ಹೀಗೆ ನಿಫಾ ವೈರಸ್​ ಆದ ಮೇಲೆ ಪ್ರಕೃತಿ ವಿಕೋಪವನ್ನ ಕೂಡ ಎದುರಿಸಿ ಮತ್ತೆ ಸಹಜ ಜೀವನದತ್ತ ಕೇರಳ ಮರಳುತ್ತಿತ್ತು.

ಹೆಮ್ಮಾರಿ ಕೊರೊನಾ ಕಾಣಿಸಿಕೊಂಡಿತ್ತು..
ನಮಗೆಲ್ಲಾ ಗೊತ್ತಿರೋ ಹಾಗೆ ಚೀನಾದ ವುಹಾನ್​ ನಲ್ಲಿ 2019 ರಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್​​ ನಂತರ ಇತರ ದೇಶಗಳಿಗೂ ಹರಡೋದಕ್ಕೆ ಶುರು ಆಗಿತ್ತು. ಅದಾದ ಬಳಿಕ 2020 ರಲ್ಲಿ ಭಾರತಕ್ಕೂ ಕೊರೊನಾ ವೈರಸ್ ಎಂಟ್ರಿ ಕೊಟ್ಟಿತ್ತು. ಆದ್ರೆ ಅದು ಮೊದಲಿಗೆ ಎಂಟ್ರಿ ಕೊಟ್ಟಿದ್ದೇ ಕೇರಳದಲ್ಲಿ. ಹೌದು ಚೀನಾದಿಂದ ಕೇರಳಗೆ ಬಂದಿದ್ದ ಯುವಕನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಅದು ಭಾರತದಲ್ಲಿ ಮೊಟ್ಟ ಮೊದಲ ಕೊರೊನಾ ಕೇಸ್​. ಅದು ಕೇರಳದಲ್ಲಿ ಮೊದಲು ವೈರಸ್ ಪತ್ತೆ ಆಗೋ ಮೂಲಕ ಇಡೀ ಭಾರತವೇ ಕೇರಳದತ್ತ ಮುಖ ಮಾಡಿ ನೋಡಿತ್ತು. ಆಗ ನಿಫಾ ವೈರಸ್ ಅನ್ನ ಸಮರ್ಥವಾಗಿ ಎದುರಿಸಿದ್ದ ಆರೋಗ್ಯ ಸಚಿವೆ ಶೈಲಜಾ ಅಂಡ್ ಟೀಮ್ ಮತ್ತೆ ಕೊರೊನಾ ವೈರಸ್ ಅತಿ ಹೆಚ್ಚು ಕಾಡದಂತೆ ಮುಂಜಾಗ್ರತೆ ವಹಿಸಲು ಟೊಂಕ ಕಟ್ಟಿಕೊಂಡು ನಿಂತಿತ್ತು. ಅದಾದ ಬಳಿಕ ಕೇರಳದಲ್ಲಿ ತೆಗೆದುಕೊಂಡಿದ್ದ ಕೆಲವು ಕ್ರಮಗಳನ್ನ ಇತರೆ ರಾಜ್ಯಗಳಲ್ಲಿಯೂ ಫಾಲೋ ಮಾಡಲಾಯಿತು. ಅದೇ ಕಾರಣಕ್ಕಾಗಿ 2020 ರ ಜೂನ್​ನಲ್ಲಿ ವಾಷಿಂಗ್​ಟನ್​ ನಲ್ಲಿ ಅವರಿಗೆ ಉತ್ತಮ ಕಾರ್ಯ ಮಾಡಿದ್ದರು ಅನ್ನೋ ಕಾರಣಕ್ಕೆ ಸನ್ಮಾನ ಕೂಡ ಮಾಡಲಾಯಿತು.

ನೋಡಿ.. ಹೀಗೆ ಅವರ ಮಂತ್ರಿಯಾಗಿ ಸ್ವೀಕರಿಸಿದ ಅವಧಿಯಲ್ಲಿ ಎದುರಾದ ಸಂಕಷ್ಟಗಳು, ಅದನ್ನ ಮಟ್ಟ ಹಾಕಲು ಟೀಚರ್ ತೆಗೆದುಕೊಂಡ ನಿರ್ಧಾರಗಳು ಇವತ್ತಿಗೂ ಇತರ ಮಂತ್ರಿಗಳಿಗೆ ಮಾದರಿ ಆಗಿದ್ದಾರೆ. ಹೀಗೆ ಅವರ ಅವಧಿ ಮುಗಿಯುತ್ತಾ ಬರುತ್ತಿದ್ದಂತೆ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವರ ಕ್ಷೇತ್ರದಿಂದ ಸುಮಾರು 60 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವನ್ನ ಸಾಧಿಸಿದ್ದರು. ಯಾವಾಗ ಮತ್ತೆ ಆರೋಗ್ಯ ಸಚಿವೆ ಟೀಚರ್ ಶೈಲಜಾ ಅವರು ಜಯಭೇರಿಯನ್ನ ಬಾರಿಸಿದ್ದರೋ ಆಗಲೇ ನೋಡಿ ಅವರು ಮತ್ತೊಮ್ಮೆ ಎರಡನೇ ಬಾರಿಗೆ ಆರೋಗ್ಯ ಖಾತೆಯನ್ನ ಸ್ವೀಕರಿಸಲಿದ್ದಾರೆ ಅಂತಾ ಕೇರಳ ಜನ ಅಂದುಕೊಂಡಿದ್ದು. ಅಷ್ಟೇ ಯಾಕೆ ಮತ್ತೊಮ್ಮೆ ಆರೋಗ್ಯ ಖಾತೆ ಕೊಟ್ಟರೆ ನಿಭಾಯಿಸಲು ರೆಡಿ ಅಂತಾ ಹೇಳಿದ್ದರು ಶೈಲಜಾ ಅವರೇ.

ಆದ್ರೆ ಯಾವಾಗ ಅವರಿಗೆ ಈ ಬಾರಿ ಆರೋಗ್ಯ ಖಾತೆ ಅಲ್ಲ ಕ್ಯಾಬಿನೇಟ್​​ನಿಂದಲೇ ಕೈ ಬಿಡಲಾಗಿದೆ ಅನ್ನೋದು ಕೇರಳ ಜನರಿಗೆ ಗೊತ್ತಾಯ್ತೋ ಎಲ್ಲರೂ ವಿರೋಧಿಸೋಕೆ ಶುರು ಮಾಡಿದ್ದಾರೆ. ಯಾಕೆ ಅವರಿಗೆ ಕ್ಯಾಬಿನೇಟ್​ನಿಂದ ಬಿಡಲಾಗಿದೆ ಅನ್ನೋ ಪ್ರಶ್ನೆಗಳನ್ನ ಮಾಡೋಕೆ ಶುರು ಮಾಡಿದ್ದಾರೆ.

ಕ್ಯಾಬಿನೇಟ್​ನಿಂದ ಟೀಚರ್​ನ ಹೊರಗಿಟ್ಟಿದ್ದು ಯಾಕೆ?
ಯಾವಾಗ ಮತ್ತೊಮ್ಮೆ ಪಿಣರಾಯಿ ವಿಜಯನ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿತ್ತೋ ಆಗಲೇ ಈ ಒಂದು ನಿರ್ಧಾರವನ್ನ ಪಕ್ಷ ತೀರ್ಮಾನ ಮಾಡಿತ್ತು. ಅದು ಹಿಂದೆ ಇದ್ದ ಕ್ಯಾಬಿನೆಟ್​ ಮಂತ್ರಿಗಳನ್ನೆಲ್ಲಾ ಕೈ ಬಿಟ್ಟು, ಹೊಸ ಮುಖಗಳಿಗೆ ಕ್ಯಾಬಿನೇಟ್​ಗಳಿಗೆ ಸೇರಿಸಿಕೊಳ್ಳೋಣಾ ಅಂತಾ. ಅದೇ ಕಾರಣಕ್ಕಾಗಿ ಹಳೇ ಮಂತ್ರಿಗಳನ್ನೆಲ್ಲಾ ಕೈ ಬಿಟ್ಟು ಹೊಸ ಶಾಸಕರಿಗೆ ಕ್ಯಾಬಿನೆಟ್​ಗೆ ಸೇರಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಖುದ್ದು ಮಾಜಿ ಸಚಿವೆ ಶೈಲಜಾ ಅವರು ಕೂಡ ಇದನ್ನೇ ಹೇಳಿಕೊಂಡಿದ್ದಾರೆ. ಅಲ್ಲದೇ ತನಗೆ ಪಕ್ಷ ಯಾವುದೇ ಕೆಲಸ ಕೊಟ್ಟರೂ ಕೂಡ ಮಾಡೋದಕ್ಕೆ ಸಿದ್ಧ ಅಂತಾ ಹೇಳಿದ್ದಾರೆ. ಅವರಿಗೆ ಯಾವುದೇ ಹುದ್ದೆ ಕೊಟ್ಟರೂ ಅದು ನಮಗೆ ಇಷ್ಟ ಇಲ್ಲಾ.. ಅವರಿಗೆ ಆರೋಗ್ಯ ಖಾತೆನೆ ಕೊಡಬೇಕು ಅನ್ನೋ ಅಭಿಯಾನ ಶುರು ಆಗಿದೆ. ಆದ್ರೆ ಮಂದೆ ಅದ್ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

ಉತ್ತಮವಾಗಿ ಜನ ಸೇವೆ ಮಾಡಿದ್ದ ಶೈಲಜಾ ಅವರಿಗೆ ಕ್ಯಾಬಿನೇಟ್​​ನಿಂದ ಕೈ ಬಿಡಲಾಗಿದೆ. ಮುಂದೆ ಇನ್ಯಾವ ಹುದ್ದೆ ಕೊಡುತ್ತಾರೋ ಗೊತ್ತಿಲ್ಲ. ಆದ್ರೆ ರಾಜಕೀಯದ ಇತಿಹಾಸದ ಪುಟಗಳಲ್ಲಿ ಅವರ ಹೆಸರಂತೂ ಸೇರಿಕೊಂಡಿರೋದು ನಿಜ. ಅವರಿಗೆ ಮುಂದೆ ಅದ್ಯಾವುದೇ ಸ್ಥಾನ ಕೊಟ್ಟರೂ ಕೂಡ ಅದನ್ನ ಅವರು ಖುಷಿಯಿಂದಲೇ ಸ್ವೀಕರಿಸಬಹುದು, ಆದ್ರೆ ಅದನ್ನ ರಾಜಕೀಯದ ಆಟ ಅನ್ನದೇ ಬೇರೆನೂ ಅನ್ನೋಕೆ ಆಗೋದಿಲ್ಲಾ.

The post ದೇಶವೇ ಕೊಂಡಾಡಿದ್ದ ಶೈಲಜಾ ಟೀಚರ್​​​​ನ ಕ್ಯಾಬಿನೆಟ್​ನಿಂದ ಹೊರಗಿಟ್ಟಿದ್ದು ಯಾಕೆ? appeared first on News First Kannada.

Source: newsfirstlive.com

Source link