ದೇಶ ವಿಭಜನೆಗೆ ಜವಾಹರ್​​ಲಾಲ್​​ ನೆಹರು ಕಾರಣ ಎಂದು ವಿಡಿಯೊ ಟ್ವೀಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ತಿರುಗೇಟು | Partition Horrors Remembrance Day BJP Targets Jawaharlal Nehru In Video On Partition


ವಿಡಿಯೊಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ವಿಭಜನೆಯ ದುರಂತವನ್ನು ದ್ವೇಷ ಮತ್ತು ಪೂರ್ವಾಗ್ರಹವನ್ನು ಉತ್ತೇಜಿಸಲು “ದುರುಪಯೋಗ” ಮಾಡಬಾರದು ಎಂದಿದ್ದಾರೆ. ಸತ್ಯ ಏನೆಂದರೆ ಎರಡು ದೇಶದ ಕಲ್ಪನೆ ಮಾಡಿದ್ದು ಸಾವರ್ಕರ್…

ದೇಶ ವಿಭಜನೆಗೆ ಜವಾಹರ್​​ಲಾಲ್​​ ನೆಹರು ಕಾರಣ ಎಂದು ವಿಡಿಯೊ ಟ್ವೀಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ತಿರುಗೇಟು

ಜವಾಹರ್ ಲಾಲ್ ನೆಹರು

ದೆಹಲಿ: ಆಗಸ್ಟ್ 14ನ್ನು ದೇಶ ವಿಭಜನೆಯ ಕರಾಳ ನೆನಪಿನ ದಿನ (Partition Horrors Remembrance Day) ಎಂದು ಆಚರಿಸಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದರು. ಈ ಬಾರಿ ‘ದೇಶ ವಿಭಜನೆಯ ಕರಾಳ ನೆನಪಿನ ದಿನ’ ಪ್ರಯುಕ್ತ ಬಿಜೆಪಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, 1947 ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಘಟನೆಗಳನ್ನು ವಿವರಿಸಿದೆ. ಹಿಂದಿನ ಘಟನೆಗಳ ವಿಡಿಯೊ ತುಣುಕು ಬಳಸಿ ಮತ್ತು ವಿಭಜನೆಯ ನಾಟಕೀಯ ದೃಶ್ಯಗಳಿರುವ ಏಳು ನಿಮಿಷಗಳ ವಿಡಿಯೊವು ಪಾಕಿಸ್ತಾನದ ರಚನೆಗಾಗಿ ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ನ ಬೇಡಿಕೆಗಳಿಗೆ ಜವಾಹರ್​​ಲಾಲ್ ನೆಹರು (Jawaharlal Nehru) ಒಪ್ಪಿರುವುದನ್ನು ವಿಡಿಯೊದಲ್ಲಿ ದೂಷಿಸಲಾಗಿದೆ. ಈ ವಿಡಿಯೊವನ್ನು ಟೀಕಿಸಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಈ ದಿನವನ್ನು ಗುರುತಿಸುವ ಪ್ರಧಾನ ಮಂತ್ರಿಯ ನಿಜವಾದ ಉದ್ದೇಶ ಅತ್ಯಂತ ಆಘಾತಕಾರಿ ಐತಿಹಾಸಿಕ ಘಟನೆಗಳನ್ನು ತಮ್ಮ ಪ್ರಸ್ತುತ ರಾಜಕೀಯ ಹೋರಾಟಗಳಿಗೆ ಬಳಸಿಕೊಳ್ಳುವುದಾಗಿದೆ ಎಂದಿದ್ದಾರೆ. ಆಧುನಿಕ ದಿನದ ಸಾವರ್ಕರ್​​ಗಳು ಮತ್ತು ಜಿನ್ನಾಗಳು ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 1947ರಲ್ಲಿ ದೇಶ ವಿಭಜನೆಯಾದಾಗ ಇಲ್ಲಿನ ಜನರು ಯಾವ ರೀತಿ ನೋವು, ಯಾತನೆ ಅನುಭವಿಸಿದ್ದರು, ಮತ್ತು ಅವರ ತ್ಯಾಗವನ್ನು ನೆನಪಿಸುವುದಕ್ಕಾಗಿ ಆಗಸ್ಟ್ 14ನ್ನು ದೇಶ ವಿಭಜನೆಯ ಕರಾಳ ನೆನಪಿನ ದಿನ’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಕರೆ ನೀಡಿದ್ದರು. ಈ ಬಗ್ಗೆ ಮೋದಿ ಟ್ವೀಟ್ ಕೂಡಾ ಮಾಡಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಸಿರಿಲ್ ಜಾನ್ ರಾಡ್‌ಕ್ಲಿಫ್ ಅವರ ವಿಭಜನಾ ನಕ್ಷೆಯು ಪಂಜಾಬ್ ಮತ್ತು ಬಂಗಾಳವನ್ನು ಅರ್ಧದಷ್ಟು ವಿಭಜಿಸಿತು. ಭಾರತೀಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದಿಲ್ಲದ ವ್ಯಕ್ತಿಗೆ ಕೇವಲ ವಾರಗಳಲ್ಲಿ ಭಾರತವನ್ನು ಹೇಗೆ ವಿಭಜಿಸಲು ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ. ನಿರೂಪಣೆಯು ವಿಭಜನೆಯ ಭೀಕರತೆಯನ್ನು ವಿವರಿಸುವಾಗ ನೆಹರೂ ಅವರ ದೃಶ್ಯಗಳು ವಿಡಿಯೊದಾದ್ಯಂತ ಕಾಣಿಸಿಕೊಂಡವು.

ಭಾರತದ ಸಾಂಸ್ಕೃತಿಕ ಪರಂಪರೆ, ನಾಗರಿಕತೆ, ಮೌಲ್ಯಗಳು, ತೀರ್ಥಯಾತ್ರೆಗಳ ಬಗ್ಗೆ ತಿಳಿದಿಲ್ಲದವರು ಕೇವಲ ಮೂರು ವಾರಗಳಲ್ಲಿ, ಅವರು ಶತಮಾನಗಳಿಂದ ಒಟ್ಟಿಗೆ ವಾಸಿಸುವ ಜನರ ನಡುವೆ ಗಡಿಯನ್ನು ಎಳೆದರು. ಈ ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ಜವಾಬ್ದಾರಿ ಹೊತ್ತಿದ್ದವರು ಆ ಸಮಯದಲ್ಲಿ ಎಲ್ಲಿದ್ದರು?’’ ಎಂದು ಬಿಜೆಪಿ ವಿಡಿಯೊ  ಟ್ವೀಟ್ ಮಾಡಿದೆ.

ವಿಡಿಯೊಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ವಿಭಜನೆಯ ದುರಂತವನ್ನು ದ್ವೇಷ ಮತ್ತು ಪೂರ್ವಾಗ್ರಹವನ್ನು ಉತ್ತೇಜಿಸಲು “ದುರುಪಯೋಗ” ಮಾಡಬಾರದು ಎಂದಿದ್ದಾರೆ. ಸತ್ಯ ಏನೆಂದರೆ ಎರಡು ದೇಶದ ಕಲ್ಪನೆ ಮಾಡಿದ್ದು ಸಾವರ್ಕರ್, ಜಿನ್ನಾ ಅದನ್ನು ಕಾರ್ಯಪ್ರವೃತ್ತ ಮಾಡಿದರು. ನಾವು ವಿಭಜನೆಯನ್ನು ಒಪ್ಪದೇ ಇದ್ದರೆ, ಭಾರತ ಹಲವಾರು ತುಂಡುಗಳಾಗಿ ವಿಭಜನೆಯಾಗಿ ಇಡೀ ನಾಶವಾಗಿ ಬಿಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಜನ ಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನೂ ನೆನಪಿಸಿಕೊಳ್ಳಬೇಕು. ಯಾಕೆಂದರೆ ಅವರು ಶರತ್ ಚಂದ್ರ ಬೋಸ್ ಅವರ ಆಗ್ರಹಕ್ಕೆ ವಿರುದ್ಧವಾಗಿ ಬಂಗಾಳವನ್ನು ವಿಭಜಿಸಿದರು.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಗಾಂಧಿ, ನೆಹರು, ಪಟೇಲ್ ಮತ್ತು ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಅವಿರತರಾಗಿದ್ದ ಅನೇಕರ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ದ್ವೇಷದ ರಾಜಕಾರಣವನ್ನು ಹೆಮ್ಮೆಟ್ಟಿಸುತ್ತೇವೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.

ಬಿಜೆಪಿಯ ವಿಡಿಯೊ ದೇಶ ವಿಭಜನೆಗೆ ಭಾರತೀಯ ಕಮ್ಯುನಿಸ್ಟರನ್ನೂ ದೂಷಿಸಿದೆ. ಕಮ್ಯುನಿಸ್ಟ್ ನಾಯಕರು ಮುಸ್ಲಿ ಲೀಗ್ ಅನ್ನು ಬೆಂಬಲಿಸಿದರು ಮತ್ತು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಯನ್ನು ಸಮರ್ಥಿಸಿಕೊಂಡರು ಎಂದು ವಿಡಿಯೊ ಹೇಳುತ್ತದೆ. ಈ ವಿಡಿಯೊದಲ್ಲಿ ಹೆಚ್ಚಿನ ದೃಶ್ಯಗಳು ನೆಹರು ಮತ್ತು ಜಿನ್ನಾ ಅವರನ್ನು ಒಳಗೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *