ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ಹೆಚ್ಚಾಗಿರುವ ನಡುವೆಯೇ ಪಶ್ಚಿಮ ಬಂಗಾಳ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಯಾಸ್​​ ಚಂಡಮಾರುತ ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಈ ನಡುವೆ ಚಂಡಮಾರುತದಿಂದ ಎದುರಾಗಿರುವ ಸಂಕಷ್ಟವನ್ನು ಎದುರಿಸಲು ಕೇಂದ್ರದಿಂದ ವಿಶೇಷ ಪ್ಯಾಕೇಜ್ ನೆರವು ಕೇಳುವುದಿಲ್ಲ ಎಂದು ಒಡಿಸ್ಸಾ ಸಿಎಂ ನವೀನ್​ ಪಟ್ನಾಯಕ್​ ಹೇಳಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಇಂದು ಪ್ರಧಾನಿಗಳನ್ನು 30 ನಿಮಿಷ ಕಾಯಿಸಿದ್ದಲ್ಲದೇ.. 20 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಕೊಡಿ ಎಂದು ಒತ್ತಾಯಿಸಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಯಾಸ್​ ಚಂಡಮಾರುತದ ಹೊಡೆಕ್ಕೆ ಸಿಲುಕಿದ್ದ ಒಡ್ಡಿಸ್ಸಾ ಹಾಗೂ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಇದಕ್ಕೂ ಮುನ್ನ ಒಡಿಸ್ಸಾ ಸಿಎಂ ನವೀನ್​ ಪಟ್ನಾಯಕ್ ಅವರೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ಮೋದಿ ಅವರು ಚಂಡಮಾರುತದಿಂದ ಎದುರಾಗಿರುವ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದಿದ್ದರು. ಸಭೆಯ ಬಳಿಕ ಮಾತನಾಡಿದ ಸಿಎಂ ಪಟ್ನಾಯಕ್​, ದೇಶದಲ್ಲಿ ಕೊರೊನಾ ಸಂಕಷ್ಟ ಹೆಚ್ಚಿದೆ. ಆದ್ದರಿಂದ ನಾವು ಕೇಂದ್ರಕ್ಕೆ ತುರ್ತು ಆರ್ಥಿಕ ನೆರವು ನೀಡಲು ಮನವಿ ಮಾಡಿಲ್ಲ. ನಮ್ಮಲ್ಲಿ ಇರುವ ಮೂಲಗಳಿಂದಲೇ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವು ನೀಡುತ್ತೇವೆ ಎಂದು ಹೇಳಿದ್ದರು.

ಇತ್ತ ಪಿಎಂ ನೇತೃತ್ವದ ಸಭೆಯ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಪ್ರಧಾನಿಗಳು ಇಂದು ಚಂಡಮಾರುತದಿಂದ ಎದುರಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದರು. ಆದರೆ ನನಗೆ ದಿಘಾದಲ್ಲಿ ಸಭೆ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಕಲೈಕುಂಡಕ್ಕೆ ಹೋಗಿ ಪ್ರಧಾನಿಗಳಿಗೆ ವರದಿ ನೀಡಿದ್ದೇನೆ. ದಿಘಾ ಮತ್ತು ಸುಂದರ್‌ಬನ್ ಅಭಿವೃದ್ಧಿಗೆ ತಲಾ 10 ಸಾವಿರ ಕೋಟಿಯಂತೆ 20 ಕೋಟಿ ರೂಪಾಯಿ ನೆರವು ನೀಡುವಂತೆ ಮನವಿ ಮಾಡಿದ್ದೇನೆ. ಅಲ್ಲದೇ ನನ್ನನ್ನು ಭೇಟಿಯಾಗಲು ರಾಜ್ಯದ ಅಧಿಕಾರಿಗಳು ಕಾಯುತ್ತಿದ್ದ ಕಾರಣದಿಂದ ಅವರ ಅನುಮತಿಯನ್ನು ತೆಗೆದುಕೊಂಡು ಸಭೆಯಿಂದ ಹೊರಟು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನ ಅರ್ಧ ಗಂಟೆ ಕಾಯಿಸಿದ ಸಿಎಂ ಮಮತಾ ಬ್ಯಾನರ್ಜಿ- 15 ನಿಮಿಷದಲ್ಲೇ ಸಭೆ ಮೊಟಕು

The post ದೇಶ ಸಂಕಷ್ಟದಲ್ಲಿದೆ.. ಪ್ಯಾಕೇಜ್ ಕೇಳಲ್ಲ ಎಂದ ಒಡಿಸ್ಸಾ ಸಿಎಂ; ₹20 ಸಾವಿರ ಕೋಟಿ ಕೊಡಿ ಎಂದ ದೀದಿ appeared first on News First Kannada.

Source: newsfirstlive.com

Source link