ಅಡಿಯಿಂದ ಮುಡಿವರೆಗೆ ಇಡೀ ದೇಹದ ತುಂಬಾ ಒಂದಲ್ಲಾ ಒಂದು ಗಾಯ. ಪ್ರತಿದಿನ ಅದರ ನೋವು. ನಾಳೆ ಸ್ವಲ್ಪ ಕಡಿಮೆಯಾಗಬಹುದೇನೋ.. ನಾಡಿದ್ದು ಒಳ್ಳೆ ದಿನವಾಗಿರಬಹುದೇನೋ ಅಂತ ಇಲ್ಲೊಬ್ಬರು ಕಾರ್ಗಿಲ್​​ ಹೀರೋ ಪ್ರತಿದಿನ ಭರವಸೆಯಲ್ಲೇ ಬದುಕುತ್ತಿದ್ದಾರೆ. ಇವರ ನಾಲ್ಕು ಸಾಲುಗಳ ಟ್ವಿಟರ್​ ಪೋಸ್ಟ್ ಹಾಗೂ ಒಂದು ಫೋಟೋ ಕಲ್ಲು ಹೃದಯವನ್ನ ಕರಿಗಿಸುವಂತಿದೆ. ಜೊತೆಗೆ ಇಡೀ ವಿಶ್ವವೇ ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸುತ್ತಿರುವ ಈ ಹೊತ್ತಲ್ಲಿ ಜನರಲ್ಲಿ ನಾಳೆಯ ಬಗ್ಗೆ​ ಅದಮ್ಯ ವಿಶ್ವಾಸವನ್ನ ಮೂಡಿಸುತ್ತಿದೆ.

PIC FROM Kennedy News / Photography by Mary

ಹೌದು. ಕೆಲ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಹಬ್ಬಿ ಲಕ್ಷಾಂತರ ಎಕರೆ ಭೂಮಿ ನಾಶವಾಗಿತ್ತು. ಬಳಿಕ ಅದೆಲ್ಲೋ ಒಂದು ಸುಟ್ಟು ಕರಕಲಾದ ಮರದಲ್ಲಿ ಎಳೆಗೆಂಪು ಬಣ್ಣದ ಎಲೆ ಚಿಗುರೊಡೆದು ನಾವು ಸೋತಿರಬಹುದು ಆದ್ರೆ ಸತ್ತಿಲ್ಲ ಅನ್ನೋ ಸಂದೇಶವನ್ನ ಇಡೀ ವಿಶ್ವಕ್ಕೆ ಸಾರಿತ್ತು. ಅದೇ ರೀತಿ ಕಾರ್ಗಿಲ್​​​​ ಯುದ್ಧದಲ್ಲಿ ಹೋರಾಡಿದ್ದ ಮೇಜರ್​ ಡಿ.ಪಿ ಸಿಂಗ್, ನಾನು ಪ್ರತಿದಿನ ನಾಳೆಯ ಭರವಸೆಯಲ್ಲೇ ಬದುಕುತ್ತಿದ್ದೀನಿ ಅಂತ ಹೇಳಿದ್ದು, ಜನರಲ್ಲೂ ನಾಳೆಯ ಬಗ್ಗೆ ಭರವಸೆ ಇಟ್ಟುಕೊಳ್ಳಲು ಪ್ರೇರೇಪಿಸಿದೆ.

ಫೋಟೋವೊಂದನ್ನ ಶೇರ್ ಮಾಡಿರುವ ಸಿಂಗ್, ತಮ್ಮ ಇಡೀ ದೇಹ ಗಾಯಗಳಿಂದ ಕೂಡಿರೋದನ್ನ ತೋರಿಸಿದ್ದಾರೆ. ಬಲಗಾಲು ಮುರಿದು ಕೃತಕ ಕಾಲು ಜೋಡಿಸಿರೋದು, ಗಾಯಗೊಂಡಿರೋ ಎಡಗಾಲಿನ ಮಂಡಿ, ಮುರಿದ ಮೊಣಕೈ ಹಾಗೂ ಪಕ್ಕೆಲುಬು, ಡ್ಯಾಮೇಜ್ ಆಗಿರೋ ಕರುಳು, ಗಾಯಗೊಂಡ ಲಿವರ್, ಶ್ರವಣ ದೋಷ.. ಹೀಗೆ ತಮ್ಮ ದೇಹದಲ್ಲಿ ಸುಮಾರು 15 ಗಾಯಗಳಾಗಿರೋದನ್ನ ಸಿಂಗ್​ ಅವರು ತಿಳಿಸಿದ್ದಾರೆ.

ನನ್ನ ದಿನ ಒಂದಿಷ್ಟು ಭರವಸೆಯೊಂದಿಗೆ ಶುರುವಾಗುತ್ತೆ. ಎಕ್ಸರ್ಸೈಜ್ ಮಾಡೋದ್ರಿಂದ ಗಾಯಗಳ ನೋವನ್ನ ದೂರ ಮಾಡುತ್ತೆ. ಆದ್ರೆ ಅದು ಕೂಡ ಒಂದೆರಡು ಗಂಟೆಗಳಷ್ಟೇ. ಆಮೇಲೆ ನೋವಿನ ಬಗ್ಗೆ ಯೋಚಿಸಬಾರದು ಅನ್ನೋ ಕಠಿಣ ಪ್ರಯತ್ನ ಶುರುವಾಗುತ್ತೆ. ಅದು ದಿನದ ಅಂತ್ಯದವರೆಗೆ ಸಾಗುತ್ತೆ. ನೋವುಗಳನ್ನು ಮರೆಯಲು ಕೆಲವೊಮ್ಮೆ ಪಾನೀಯ ಸಹಾಯ ಮಾಡುತ್ತದೆ. ನಾಳೆ ಉತ್ತಮವಾಗಲಿದೆ ಎಂಬ ಭರವಸೆಯಲ್ಲಿ ರಾತ್ರಿ ಕಳೆಯುತ್ತದೆ. ಇದೇ ನನ್ನ ಜೀವನದ ಚಕ್ರ ಅಂತ ಸಿಂಗ್ ಬರೆದುಕೊಂಡಿದ್ದಾರೆ.

ಪ್ರತಿ ಕ್ಷಣದಲ್ಲೂ ಆಯ್ಕೆ ಮಾಡುವ ಶಕ್ತಿ ಮನುಷ್ಯರಿಗೆ ಇದೆ. ಅದು ಕರ್ಮ. ನಮ್ಮ ಆಯ್ಕೆಗಳ ಪ್ರಕಾರ ನಾವು ನಮ್ಮ ಹಣೆಬರಹವನ್ನು ರೂಪಿಸಿಕೊಳ್ಳುತ್ತೇವೆ. ಆದ್ದರಿಂದ ಬುದ್ಧಿವಂತರಾಗಿರಿ. ಯಾವುದು ಸರಿಯೋ ಮತ್ತು ನೀವು ಯಾವುದನ್ನ ಇಷ್ಟಪಡುತ್ತೀರೋ ಅದನ್ನೇ ಆರಿಸಿ ಅಂತಾರೆ ಸಿಂಗ್​​.

ದೇಶಕ್ಕಾಗಿ ಹೋರಾಡಿ, ದೇಹದ ತುಂಬಾ ನೋವುಗಳನ್ನೇ ತುಂಬಿಕೊಂಡರೂ ನಾಳೆಯ ಭರವಸೆಯಲ್ಲಿ ಬದುಕುತ್ತಿರೋ ಸಿಂಗ್​ ಅವರಿಗೆ ನಮ್ಮದೊಂದು ಸಲಾಂ. ಇಷ್ಟು ನೋವು ತಿಂದರೂ ಆಶಾಭಾವನೆಯಿಂದ ಬದುಕುತ್ತಿರೋ ಅವರನ್ನ ನೋಡಿದ್ರೆ, ಗಟ್ಟಿಮುಟ್ಟಾಗಿರೋ ನಾವೆಲ್ಲರೂ ನಾಳೆ ಒಳ್ಳೆಯದಾಗುತ್ತೆ ಅನ್ನೋ ಭಾವನೆಯಲ್ಲಿ ಲವ್ ಯೂ ಜಿಂದಗಿ ಅಂತ ಬದುಕುವ ಚೈತನ್ಯ ತುಂಬುತ್ತಿರೋದು ಸುಳ್ಳಲ್ಲ.

The post ದೇಹದ ಒಳಗೆ ಬರೋಬ್ಬರಿ 28 ಕೆಜಿ ಕೃತಕ ಅಂಗ.. ಆದ್ರೂ ನಗು ಮುಖ; ಕಾರ್ಗಿಲ್​ ಹೀರೋ ಬಗ್ಗೆ ತಿಳಿಯಲೇಬೇಕು appeared first on News First Kannada.

Source: newsfirstlive.com

Source link