
ಮೋಹನ್ಲಾಲ್
ಮೋಹನ್ಲಾಲ್ ಹಾಗೂ ಮಾನ್ಸನ್ ನಡುವೆ ಗೆಳೆತನವಿತ್ತೇ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಮೂಡಿದೆ. ಏಕೆಂದರೆ ಈ ಮೊದಲು ಮಾನ್ಸನ್ ಮನೆಗೆ ಮೋಹನ್ಲಾಲ್ ಅವರು ಒಮ್ಮೆ ಭೇಟಿ ನೀಡಿದ್ದರು.
ಮೋಹನ್ಲಾಲ್ ಅವರು (Mohanlal) ಮಲಯಾಳಂನಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿದ್ದಾರೆ. ಸದ್ಯ ‘ಗಾಡ್ ಫಾದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗ ಅವರಿಗೆ ಸಂಕಷ್ಟ ಒಂದು ಎದುರಾಗಿದೆ. ಅಕ್ರಮ ಹಣ ವರ್ಗಾವಣೆ (Money Laundering Case) ಪ್ರಕರಣದಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೋಹನ್ಲಾಲ್ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದ್ದು, ಮುಂದಿನ ವಾರ ಅವರು ವಿಚಾರಣೆಗೆ ಹಾಜರಿ ಹಾಕಲಿದ್ದಾರೆ ಎನ್ನಲಾಗುತ್ತಿದೆ.
ಪುರಾತನ ವಸ್ತುಗಳ ಹೆಸರಿನಲ್ಲಿ ಕೇರಳದ ವ್ಯಾಪಾರಿ ಮಾನ್ಸನ್ ಮಾವುಂಕಲ್ ಅನೇಕರಿಗೆ ವಂಚಿಸಿದ್ದಾನೆ. ಅಕ್ರಮ ಹಣ ವರ್ಗವಾಣೆ ಪ್ರಕರಣದಲ್ಲಿ ಅವನ ವಿರುದ್ಧ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮೋಹನ್ಲಾಲ್ಗೆ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಅವರು ಮುಂದಿನ ವಾರ ಕೊಚ್ಚಿಯ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ ಎಂದು ವರದಿ ಆಗಿದೆ.
ಅಪರೂಪದ ಮತ್ತು ಪುರಾತನ ವಸ್ತುಗಳನ್ನು ಹೊಂದಿದ್ದೇನೆಂದು ಹಲವರಿಗೆ ಮಾನ್ಸನ್ ಮಾವುಂಕಲ್ ವಂಚನೆ ಎಸಗಿದ್ದ. ಈತನ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ದೂರನ್ನು ಆಧರಿಸಿ ಮಾವುಂಕಲ್‌ನನ್ನು ಕೇರಳ ಕ್ರೈಂ ಬ್ರ್ಯಾಂಚ್ ಪೊಲೀಸರು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈತನನ್ನು ಬಂಧಿಸಿದ್ದರು.
ಮಾನ್ಸನ್ಗೂ ಮೋಹನ್ಲಾಲ್ಗೂ ಏನು ಸಂಬಂಧ?
ಮೋಹನ್ಲಾಲ್ ಹಾಗೂ ಮಾನ್ಸನ್ ನಡುವೆ ಗೆಳೆತನವಿತ್ತೇ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಮೂಡಿದೆ. ಏಕೆಂದರೆ ಈ ಮೊದಲು ಮಾನ್ಸನ್ ಮನೆಗೆ ಮೋಹನ್ಲಾಲ್ ಅವರು ಒಮ್ಮೆ ಭೇಟಿ ನೀಡಿದ್ದರು. ಈ ಭೇಟಿ ಹಿಂದಿನ ಉದ್ದೇಶ ಗುಟ್ಟಾಗಿಯೇ ಉಳಿದಿದೆ. ಈ ಭೇಟಿ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಹೋಗಿದೆ ಎನ್ನಲಾಗುತ್ತಿದೆ. ವಿಚಾರಣೆ ವೇಳೆ ಮೋಹನ್ಲಾಲ್ ಯಾವ ರೀತಿಯ ಉತ್ತರ ನೀಡಲಿದ್ದಾರೆ ಎಂಬುದು ಸದ್ಯದ ಕುತೂಹಲ.