ದೊಡ್ಮನೆಯಿಂದ ಅನ್ನಸಂತರ್ಪಣೆ; ಪುನೀತ್​ ಹೆಸರಲ್ಲಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ | Puneeth Rajkumar 12 Day Rituals Anna Santarpane In Bangalore


ದೊಡ್ಮನೆಯಿಂದ ಅನ್ನಸಂತರ್ಪಣೆ; ಪುನೀತ್​ ಹೆಸರಲ್ಲಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ

ಪುನೀತ್​ ರಾಜ್​ಕುಮಾರ್ ಸಮಾಧಿ

ಪುನೀತ್​ ರಾಜ್​ಕುಮಾರ್ (Puneeth Rajkumar)​ ದೊಡ್ಡ ಅಭಿಮಾನಿ ಬಳಗವನ್ನು ತೊರೆದು ಹೋಗಿದ್ದಾರೆ. ಅವರು ಸಿನಿಮಾ ಹಾಗೂ ಸಾಮಾಜಿಕ ಕೆಲಸದ ಮೂಲಕ ಜನರ ಮನದಲ್ಲಿ ಅಚ್ಚು ಮೂಡಿಸಿ ಹೋಗಿದ್ದಾರೆ. ಅವರು ಅಗಲಿ ಇಂದಿಗೆ (ಅಕ್ಟೋಬರ್ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುತ್ತಿದೆ. ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅನ್ನಸಂತರ್ಪಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇದೆ. ಇದಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾದರೆ ಈ ಕಾರ್ಯಕ್ರಮ ಹೇಗೆ ನಡೆಯಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.  ಇಂದು ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿದೆ. ಎಲ್ಲಾ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಬಹುದು. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. 2 ಸಾವಿರಕ್ಕೂ ಹೆಚ್ಚು ಚೇರ್, ಊಟದ ಟೇಬಲ್ ಹಾಕಲಾಗಿದೆ. 600ಕ್ಕೂ ಹೆಚ್ಚು ಅಡುಗೆ ಭಟ್ಟರು, ಹೆಲ್ಪರ್​​ಗಳು ಭಾಗಿಯಾಗುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭವಾಗಲಿದೆ.

20 ಸಾವಿರ ಜನರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ಜನರಿಗೆ ಸಸ್ಯಾಹಾರಿ ಊಟಕ್ಕೆ ವ್ಯವಸ್ಥೆ ನಡೆಸಲಾಗುತ್ತಿದೆ. ಒಟ್ಟು 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ಸಂದರ್ಭದಲ್ಲಿ ನೂಕುನುಗ್ಗಲು ಆಗದಿರಲಿ ಎನ್ನುವ ಕಾರಣಕ್ಕೆ ಅರಮನೆ ಮೈದಾನದ ಸುತ್ತಮುತ್ತ ಪೊಲೀಸ್​ ಬಂದೋಬಸ್ತ್ ನಿಯೋಜಿಸಲಾಗಿದೆ.

ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ ರೆಡಿ ಮಾಡಲಾಗುತ್ತಿದೆ. 25 ಸಾವಿರ ಸೋನಾ ಮಸೂರಿ ಅಕ್ಕಿ, 750 ಲೀ. ಅಡುಗೆ ಎಣ್ಣೆ, 100 ಕಟ್ಟು ಪುದೀನ ಸೊಪ್ಪು, 100 ಕೆ.ಜಿ ಟೊಮ್ಯಾಟೋ, ತಲಾ 50 ಕೆ.ಜಿ ಈರುಳ್ಳಿ, ಬೆಳ್ಳುಳ್ಳಿ, 3 ಸಾವಿರ ಕೆ.ಜಿ. ಚಿಕನ್, 8500 ಕೋಳಿ ಮೊಟ್ಟೆ, 50, 60,70 & 80 ಕೆ.ಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ತಯಾರಿ ಮಾಡಲಾಗುತ್ತಿದೆ. 50 ಕೆೆ.ಜಿಯ ಐದಾರು ದೊಡ್ಡ ಪಾತ್ರೆಗಳಲ್ಲಿ ಮೊಟ್ಟೆಗಳನ್ನು ಬೇಯಿಸಲಾಗ್ತಿದೆ.

ನಟ ಪುನೀತ್​ ರಾಜ್​ಕುಮಾರ್​ ಅವರ 11ನೇ ದಿನ ಕಾರ್ಯವನ್ನು ಸೋಮವಾರ (ನ.8) ನೆರವೇರಿಸಲಾಯಿತು. ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಶಿವರಾಜ್​ಕುಮಾರ್​ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ‘11ನೇ ದಿನ ಅಂದುಕೊಂಡು ಇದನ್ನೆಲ್ಲ ಮಾಡುವುದೇ ನಮಗೆ ನೋವಿನ ವಿಚಾರ. ಅಪ್ಪುಗೆ ಇದೆಲ್ಲ ಮಾಡುತ್ತಿದ್ದೇವಾ? ಮಾಡಬೇಕಾ ಅಂತ ಬೆಳಗ್ಗೆ ಅಂದುಕೊಳ್ಳುತ್ತಿದ್ದೆ. ಅದರ ಬಗ್ಗೆ ಮಾತನಾಡುವುದೇ ತುಂಬ ಬೇಜಾರು ಆಗುತ್ತದೆ. ವಿಧಿ ವಿಧಾನಗಳ ಪ್ರಕಾರ ಅದೆಲ್ಲ ನಡೆಯಲೇಬೇಕು’ ಎಂದು ಶಿವಣ್ಣ ಹೇಳಿದ್ದರು.

ಇದನ್ನೂ ಓದಿ: Puneeth Rajkumar: ಮರಳು ಶಿಲ್ಪ ರಚಿಸಿ ಪುನೀತ್​ ರಾಜ್​ಕುಮಾರ್​ಗೆ ನಮನ

TV9 Kannada


Leave a Reply

Your email address will not be published. Required fields are marked *