ದೊಡ್ಮನೆಯಿಂದ ಅಭಿಮಾನಿ ದೇವರುಗಳಿಗೆ ಅನ್ನಸಂತರ್ಪಣೆ; 4000 ಕೆಜಿ ಚಿಕನ್​


ಬೆಂಗಳೂರು: ದೊಡ್ಮನೆಯ ನಂದಾದೀಪ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು 12 ದಿನ. ಅವರ ಅಗಲಿಕೆಗೆ ಇಡೀ ಕರುನಾಡು ಶೋಕಪಟ್ಟಿದೆ. ಅವರ ಅಂತಿಮ ದರ್ಶನಕ್ಕೆ ಲಕ್ಷಗಟ್ಟಲೇ ಜನ ಕಂಠೀರವ ಸ್ಟೇಡಿಯಂಗೆ ಆಗಮಿಸಿರುವುದು ಮಾತ್ರವಲ್ಲದೆ ಅವರ ಸಮಾಧಿ ಕಂಠೀರವ ಸ್ಟುಡಿಯೊಗೆ ಸಹ ಪ್ರತಿನಿತ್ಯ ಸಾವಿರಗಟ್ಟಲೇ ಜನರು ಬಂದು ಕಣ್ಣೀರಿಡುತ್ತಿದ್ದಾರೆ.

ಅಭಿಮಾನಿ ದೇವರುಗಳ ಭಾವನೆಗಳಿಗೆ ಬೆಲೆ ನೀಡುತ್ತಾ ಬಂದಿರುವ ದೊಡ್ಮನೆ ಇಂದು ಅಪ್ಪು ಅಭಿಮಾನಿಗಳಿಗಾಗಿ ಪುಣ್ಯಸ್ಮರಣೆ ಪ್ರಯುಕ್ತ ಅರಮನೆ ಮೈದಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಅಡುಗೆ ಭಟ್ಟರು ನಿನ್ನೆ ರಾತ್ರಿಯಿಂದಲೇ ತಯಾರಿ ನಡೆಸುತ್ತಿದ್ದು ಹಲವಾರು ಬಗೆಬಗೆಯ ಖಾದ್ಯಗಳನ್ನು ತಯಾರು ಮಾಡುವುದರಲ್ಲಿ ಮಗ್ನರಾಗಿದ್ದಾರೆ.

ಈ ವೇಳೆ ಸಂಪೂರ್ಣ ಊಟದ ವ್ಯವಸ್ಥೆಯನ್ನು ವಹಿಸಿಕೊಂಡಿರುವ ಡಿ.ಎಲ್.ಎಸ್ ಕ್ಯಾಟರಿಂಗ್ ಮಾಲೀಕ ರಾಜೇಶ್ ನ್ಯೂಸ್​ಫಸ್ಟ್​ ಜೊತೆ ಮಾತನಾಡಿ ಸುಮಾರು 30,000 ಜನರಿಗೆ ಊಟವನ್ನು ತಯಾರಿಸಲಾಗುತ್ತಿದೆ ಎಂದರು.

ನಾನು ಕ್ಯಾಟರಿಂಗ್​ ಸಿಬ್ಬಂದಿ ಮಾತ್ರವಲ್ಲ ಡಾ.ರಾಜ್​ ಕುಟುಂಬದ ಜೊತೆ ಆತ್ಮೀಯ ಓಡನಾಟ ಹೊಂದಿದ್ದು ಪುನೀತ್​ ಮದುವೆಗೂ ನಮ್ಮ ತಂದೆ ಅಡುಗೆ ಮಾಡಿದ್ದರು. ಆದರೆ ಇಂದು ಅವರ ಇಂತಹ ಕಾರ್ಯದಲ್ಲಿ ಅಡುಗೆ ಮಾಡೋದಕ್ಕೆ ನಿಜವಾಗಿಯೂ ಬೇಸರವಾಗುತ್ತಿದೆ ಎಂದು ಭಾವುಕರಾದರು. ತುಂಬ ದುಃಖ ತುಂಬಿಕೊಂಡೇ ಅಡುಗೆ ಮಾಡುತ್ತಿರೋದಾಗಿ ಅವರು ತಿಳಿಸಿದರು.


ಇನ್ನು 30 ಸಾವಿರ ಜನರ ನೀರೀಕ್ಷೆಯನ್ನಿಟ್ಟುಕೊಂಡು ಅಡುಗೆ ತಯಾರಿಸಲಾಗುತ್ತಿದೆ. 4000 ಕೆಜಿ ಚಿಕನ್​ ಕಬಾಬ್​, ಘೀ ರೈಸ್​, ಅನ್ನ ರಸಂ, ಮಟನ್​ ಚಾಪ್ಸ್​, ಮಸಾಲಾ ರೈಸ್​, ಮಸಾಲಾ ವಡೆ, ಅಕ್ಕಿ ಪಾಯಸ  ಸೇರದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಿರಿವುದಾಗಿ ಅವರು ಮಾಹಿತಿ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿ ಆಗುವ ನಿರೀಕ್ಷೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.

News First Live Kannada


Leave a Reply

Your email address will not be published. Required fields are marked *