ನಂಬಿಕೆ ಮತ್ತು ಅಪ ನಂಬಿಕೆಯ ಮೇಲೆ ಜೀವ ಹಾಗೂ ಜೀವನ ನಿಂತಿದೆ. ಗಾಳಿನ ನೋಡೋಕ್ಕಾಗಲ್ಲ ಆದ್ರೆ ಅನುಭವಿಸಬಹುದು. ಅದ್ರ ಜೊತೆ ಜೀವಿಸಬಹುದು. ಅದೇ ರೀತಿ ನಂಬಿಕೆ ಅನ್ನೋದು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಂಬಿಕೆಗೆ ವಿಜ್ಞಾನ ಅನ್ನೋ ಲೆಕ್ಕಚಾರವನ್ನ ಬೇರೆಸಿಕೊಂಡು ಬಾಳಿದ್ರೆ ಖಂಡಿತ ಎಲ್ಲರದ್ದೂ ಸಕ್ಸಸ್ಫುಲ್ ಲೈಫ್. ನಮ್ಮ ದೇಶದ ಎಷ್ಟೋ ನಂಬಿಕೆಯ ಆಚಾರಣೆಗಳಲ್ಲಿ ವಿಜ್ಞಾನ ಅಡಗಿರುತ್ತೆ. ಹಂಗತ್ಹೇಳಿ ಎಲ್ಲಾ ಆಚರಣೆಯ ನಂಬಿಕೆಯಲ್ಲೂ ವಿಜ್ಞಾನ ಅಡಗಿದೆ ಅಂತ ಹೇಳೋಕೆ ಆಗಲ್ಲ. ಅಂಥ ಆಚರಣೆಗಳನ್ನ ಅಜ್ಞಾನ ಎನ್ನಬಹುದು. ಈಗ ಕೊರೊನಾ ಸಂಕಷ್ಟ ಕಾಲ. ಆರೋಗ್ಯವೇ ಭಾಗ್ಯ ಎಂದು ಸಾರುತ್ತಿರೋ ಕಾಲ. ಆರೋಗ್ಯವಾಗಿದ್ದರೆ ಬದುಕು, ಇಲ್ಲದಿದ್ದರೆ ಅಂತ್ಯ ಎಂಬುವಂತೆ ಆಗಿದೆ ಇಂದಿನ ಪರಿಸ್ಥಿತಿ.

ಕಳೆದ ವರ್ಷ ಕಾಣದ ಕೊರೊನಾ ವಿಶ್ವದಲ್ಲಿ ಬಂದಾಗ ಎಲ್ಲರೂ ಮನೆ ಸೇರಿದ್ರು. ಕೊರೊನಾದಿಂದ ಸಾವು ನೋವುಗಳನ್ನ ನಮ್ಮ ದೇಶವು ಕಂಡಾಗಿದೆ ಮತ್ತು ಕಾಣುತ್ತಿದೆ. ಕಳೆದ ವರ್ಷ ಮೊದ ಮೊದಲು ಕೊರೊನಾ ಕಂಡಾಗ ಸರಿಯಾದ ಮದ್ದನ್ನ ಕಂಡು ಹಿಡಿಯಲು ವೈದ್ಯಕೀಯ ಲೋಕ ಪರದಾಡಿತ್ತು. ಬರೋಬ್ಬರಿ 40 ಲಕ್ಷ ಮಂದಿ ವಿಶ್ವಾದ್ಯಂತ ಕೋವಿಡ್​​ಗೆ ಬಲಿಯಾದ್ರು. ಈ ಸಂದರ್ಭದಲ್ಲಿ ಕೊರೊನಾ ಮಣಿಸಲು ಮೆಡಿಸಿನ್ ಕಂಡುಹಿಡಿಯುವ ಪ್ರಯತ್ನ ಶುರುವಾಗಿ ಅದು ಇನ್ನೂ ಮುಂದುವರೆದಿದೆ. ಆದ್ರೆ ಒಂದೇ ವರ್ಷದಲ್ಲಿ ವ್ಯಾಕ್ಸಿನ್ ಸಿದ್ಧಪಡಿಸಲಾಯ್ತು. ಕೊರೊನಾಗೆ ವ್ಯಾಕ್ಸಿನ್ ಕಂಡುಹಿಡಿಯೋದ್ರಲ್ಲಿ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದು. ವ್ಯಾಕ್ಸಿನ್ ತಯಾರಿಕೆಯಲ್ಲಿ ಮತ್ತು ಹಂಚಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದ್ರೆ ದೇಶದಲ್ಲೇ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ವೇಗ ಪಡೀತಾ ಇಲ್ಲ. ಮೊದಲು ಜನರೇ ನಿರಾಸಕ್ತರಾಗಿದ್ರು. ಬಳಿಕ ಎರಡನೇ ಅಲೆ ಗರಿಷ್ಟ ಮಟ್ಟ ತಲುಪಿ ಭೀಕರತೆ ಅನಾವರಣವಾದಾಗ ವ್ಯಾಕ್ಸಿನ್​​ಗೆ ಮುಗಿಬಿದ್ರು. ಆದ್ರೆ ದಿಢೀರ್ ಅಂತ ಬೇಡಿಕೆಗೆ ತಕ್ಕಷ್ಟು ಲಸಿಕೆ ವೂರೈಸುವುದು ಸಾಧ್ಯವಾಗ್ತಾ ಇಲ್ಲ.

ಕೊರೊನಾಕ್ಕೆ ಸರಿಯಾದ ಔಷಧ ಸಿಗದೇ ಇದ್ದರು ರೋಗನಿರೋಧಕ ಶಕ್ತಿ ವೃದ್ಧಿಸುವ ಆರೋಗ್ಯ ರಕ್ಷಾ ಕವಚ ಎನ್ನಬಹುದಾದ ಲಸಿಕೆಯನ್ನ ಭಾರತ ಕಂಡುಹಿಡಿಯಿತು. ಕೋವ್ಯಾಕ್ಸಿನ್ , ಕೋವಿಶೀಲ್ಡ್ ಅನ್ನೋ ಎರಡು ಲಸಿಕೆಯನ್ನ ಈಗಾಗಲೇ ಭಾರತ ಬಳಸುತ್ತಿದೆ ಹಾಗೂ ಕೆಲ ದಿನಗಳ ಹಿಂದೆ ಬೇರೆ ಬೇರೆ ದೇಶಗಳಿಗೆ ರಫ್ತನ್ನು ಮಾಡಿದೆ. ಆದ್ರೆ ಈಗ ಎರಡನೇ ಕೊರೊನಾ ಅಲೆಯಲ್ಲಿ ಭಾರತಕ್ಕೆ ಲಸಿಕೆಗಳ ಅಭಾವ ಉಂಟಾಗಿದೆ. ಕೋವ್ಯಾಕ್ಸಿನ್ , ಕೋವಿಶೀಲ್ಡ್ಗಳ ಜೊತೆಗೆ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 80 ಕೋಟಿ ಜನರಿಗೆ ಕೆಲವೇ ತಿಂಗಳಲ್ಲಿ ಲಸಿಕೆ ಕೊಡೋ ಯೋಜನೆಗೆ ಭಾರತ ಸರ್ಕಾರ ನಿರ್ಧಾರ ಮಾಡಿದೆ. ಆದ್ರೆ ಏನ್ ಮಾಡೋದು ಈ ನಂಬಿಕೆ ಅನ್ನೋ ವಿಚಾರವನ್ನ ನಮ್ಮ ನಿಮ್ಮ ನಡುವೆ ಇರೋ ಲಸಿಕೆಗಳು ಗಳಿಸಬೇಕಾಗಿದೆ. ಜನರಲ್ಲಿರುವ ಮೂಢನಂಬಿಕೆಗಳು ದೂರಾಗಬೇಕಿದೆ. ಯಾಕೆ ಹೀಗೆ ಹೇಳ್ತಿದ್ದಿವಿ ಅಂದ್ರೆ ಜನ ಸಾಮಾನ್ಯರು ಲಸಿಕೆಯನ್ನ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜನರಿಗೆ ಲಸಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆಯೂ ಇದೆ.

ಮೊದ ಮೊದಲು ಲಸಿಕೆಗಳ ಬಗ್ಗೆ ಅಪ ನಂಬಿಕೆಯ ಮಾತು ಹಾಗೂ ತಪ್ಪು ತಿಳುವಳಿಕೆಯ ಮಾತುಗಳನ್ನ ನಗರ ಪ್ರದೇಶದ ಜನರು ಆಡಿದ್ರು. ಆದ್ರೆ ಅದ್ಯಾವಾಗ ಕೊರೊನಾ ಎರಡನೇ ಅಲೆ ಹೆಚ್ಚಾಯ್ತೋ ಲಸಿಕೆ ನಮಗೆ ಬೇಕೇ ಬೇಕು ಎಂದು ಮುಗಿಬಿದ್ದರು. ಈಗ ಈ ರೀತಿಯ ಅಪ ನಂಬಿಕೆಯ ಭಾವನೆ ಹಳ್ಳಿ ಜನರಲ್ಲಿ ಮೂಡಲಾರಂಭಿಸಿದೆ. ಕೋವಿಡ್ ಲಸಿಕೆಯನ್ನ ಪಡೆದ್ರೆ ಸೈಡ್ ಎಫೆಕ್ಟ್ ಆಗುತ್ತೆ, ಜ್ವರ ಬರುತ್ತೆ , ಹಂಗಾಗುತ್ತೆ ಹಿಂಗಾಗುತ್ತೆ ಅಂತ ಹಳ್ಳಿ ಜನ ತಪ್ಪು ಮಾಹಿತಿಯನ್ನ ತಿಳಿಸಿಕೊಂಡಿದ್ದಾರೆ. ಇದು ಸರ್ಕಾರಗಳಿಗೆ ದೊಡ್ಡ ತಲೆನೋವಾಗಿದೆ. ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯ ಬಗ್ಗೆ ಅರಿವು ಮೂಡಿಸಲು ಹರಸಾಹಸ ಪಡ್ತಿದ್ದಾರೆ. ಗದಗ ಜಿಲ್ಲೆಯ ಒಂದು ಹಳ್ಳಿಯ ಜನ ನಮಗೆ ಲಸಿಕೆ ಬೇಡ ಬೇಡ ಎಂದು ಪಟ್ಟು ಹಿಡಿದ್ದಾರೆ. ಇದಕ್ಕೆ ಕಾರಣ ದೇವರ ಮೇಲಿನ ನಂಬಿಕೆ.

ದೇವರ ಮೇಲಿನ ನಂಬಿಕೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳದ ಜನ
ವ್ಯಾಕ್ಸಿನ್ ಹಾಕೋದಾದ್ರೆ ಇನ್ಶೂರೆನ್ಸ್ ಮಾಡ್ಸಿ ಎಂದ ಗ್ರಾಮಸ್ಥರು

ದೌಲ್ ಮಲಿಕ್ ನಮ್ಮನ್ನ ಕಾಪಾಡ್ತಾನೆ. ನಮಗೆ ವ್ಯಾಕ್ಸಿನ್ ಬೇಡ. ಒಂದು ವೇಳೆ ನೀವು ನಮಗೆ ವ್ಯಾಕ್ಸಿನ್ ಹಾಕಲೇಬೇಕಾದರೆ ನಮ್ಮ ಹೆಸರಲ್ಲಿ ಇನ್ಶುರೆನ್ಸ್ ಮಾಡಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. ಈ ರೀತಿಯ ಮಾತುಗಳು ಕೇಳಿ ಬರುತ್ತಿರೋದು ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ವ್ಯಾಪ್ತಿಯ ದೌಲ್ ಮಲಿಕ್ ಅನ್ನೋ 18ನೇ ವಾರ್ಡ್ ನಲ್ಲಿ..

ಮಹಾಮಾರಿ ಕೊರೊನಾ ಎರಡನೇ ಅಲೆಯಿಂದ ಮನುಕುಲ ತತ್ತರಿಸಿ ಹೋಗಿದೆ. ಸಾವು ನೋವು ಲೆಕ್ಕವಿಲ್ಲದಷ್ಟು ಸಂಭವಿಸುತ್ತಿವೆ. ಕೊರೊನಾದಿಂದ ಬಚಾವ್ ಆಗಲು ಯಾವುದಾದರೊಂದು ಔಷಧಿ ಸಿಕ್ಕರೆ ಸಾಕು ಅಂತ ಜನ ಬಕಪಕ್ಷಿಯಂತೆ ಕಾಯ್ತಿದ್ದಾರೆ. ಇತ್ತ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ ಹಾಹಾಕಾರ, ಮತ್ತೊಂದೆಡೆ ವ್ಯಾಕ್ಸಿನ್ ಅಭಾವದಿಂದ ಆಡಳಿತ ಪಕ್ಷ ಮತ್ತು ವಿರೊಧ ಪಕ್ಷಗಳ ನಡುವೆ ಜಟಾಪಟಿ, ಈ ಮಧ್ಯೆ ಕೊರೊನಾ ಲಸಿಕೆಯನ್ನ ಉಚಿತವಾಗಿ ಹಾಕ್ತೀವಿ ಅಂದ್ರು ಜನ ಹಾಕಿಸಿಕೊಳ್ಳದಂತ ಪರಿಸ್ಥಿತಿ.

ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ವ್ಯಾಪ್ತಿಯ ದೌಲ್ ಮಲಿಕ್ ಅನ್ನೋ 18 ನೇ ವಾರ್ಡ್ ನಲ್ಲಿ ವ್ಯಾಕ್ಸಿನ್ ಯಾಕೆ ಹಾಕಿಸಿಕೊಳ್ತಿಲ್ಲ ಅನ್ನೋ ವಿಚಾರ ಕೇಳಿದರೆ ಗಾಬ್ರಿ ಆಗ್ತಿರ. ಇಲ್ಲಿನ ಜನ ವ್ಯಾಕ್ಸಿನೇಷನ್​​ಗೆ ಹಿಂದೇಟು ಹಾಕ್ತಿರೋದಕ್ಕೆ ಕಾರಣ ವ್ಯಾಕ್ಸಿನೇಷನ್ ಮೇಲಿನ ಅಪನಂಬಿಕೆ ಹಾಗೂ ಆ ಗ್ರಾಮದಲ್ಲಿ ಇರುವ ಆರಾಧ್ಯದೈವ ದೌಲ್ ಮಲಿಕ್ ದರ್ಗಾದ ಮೇಲಿನ ನಂಬಿಕೆ.

ಈ ವಾರ್ಡ್​​ನಲ್ಲಿ ಸುಮಾರು 80 ಕುಟುಂಬಗಳು ವಾಸವಾಗಿವೆ. ಎಲ್ಲರೂ ಅಲ್ಪಸಂಖ್ಯಾತ ಕುಟುಂಬಗಳು. ಅಧಿಕಾರಿಗಳು ಅವರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತ ಎಷ್ಟೇ ಕೇಳಿಕೊಂಡ್ರು ಆರೋಗ್ಯ ಅಧಿಕಾರಿಗಳ ಮನವಿಗೆ ಕಿವಿಗೊಡುತ್ತಿಲ್ಲ ಇಲ್ಲಿನ ಜನ. ಇಲ್ಲಿನ 80 ಕುಟುಂಬಗಳಲ್ಲಿ ಕೇವಲ 6 ಜನ ಮಾತ್ರ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರಂತೆ. ಉಳಿದವರು ದೌಲ್ ಮಲಿಕ್ ನಮ್ಮನ್ನ ಕಾಪಾಡ್ತಾನೆ. ನಮ್ಮಲ್ಲಿ ಕೊರೊನಾ ಭಯವಿಲ್ಲ, ವ್ಯಾಕ್ಸಿನ್ ಹಾಕಿಸಿಕೊಂಡರೆ ನಮಗೆ ಇಲ್ಲದ ರೋಗಗಳು ಬರ್ತಾವೆ. ಒಂದು ವೇಳೆ ನೀವು ವ್ಯಾಕ್ಸಿನ್ ಹಾಕೋದಾದರೆ ನಮ್ಮ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸಿ ಅಂತ ಪಟ್ಟು ಹಿಡಿದ್ದಾರೆ. ಅಷ್ಟೇ ಅಲ್ಲ ಎಷ್ಟರ ಮಟ್ಟಿಗೆ ಅಂದ್ರೆ ಈ ವ್ಯಾಕ್ಸಿನ್ ನಾವು ಹಾಕಿಸಿಕೊಂಡ್ರೆ ಪ್ರಧಾನಿ ಮೋದಿಗೆ ದುಡ್ಡು ಸಿಗುತ್ತೆ ಅಂತಾನೂ ಯಾರೋ ಇವರಿಗೆ ಹೇಳಿ ಬಿಟ್ಟಿದ್ದಾರೆ.

ನೋಡಿ ಹೇಗಿದೆ ಕಥೆ.. ಎಷ್ಟೋ ಕಡೆ ವ್ಯಾಕ್ಸಿನ್ ಸಿಕ್ತಿಲ್ಲ. ಆದ್ರೆ ಇಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದ್ರೆ ಜನ ಬೇರೆನೇ ಮಾತನಾಡ್ತಿದ್ದಾರೆ. ಅದಕ್ಕೆ ನಾವು ಮೊದಲು ನಿಮ್ಗೆ ಹೇಳಿದ್ದು ಈ ಪ್ರಪಂಚ ನಂಬಿಕೆ ಮತ್ತು ಅಪನಂಬಿಕೆಯ ಮೇಲೆ ನಿಂತಿದೆ. ದೇವರ ಮೇಲೆ ನಂಬಿಕೆ ಇಡೋದು ತಪ್ಪಲ್ಲ. ಆದ್ರೆ ವ್ಯಾಕ್ಸಿನ್ ಮೇಲೆ ಅಪನಂಬಿಕೆ ಇಟ್ಟುಕೊಳ್ಳೋದು ಕೂಡ ಸರಿಯಲ್ಲ. ಎಷ್ಟು ದಿನ ಅಂತ ನಾವು ಈ ಮಾಸ್ಕ್ ಮುಸುಕಿನಲ್ಲಿ ಅಡಗಿರಬೇಕು ಹೇಳಿ. ಕೊರೊನಾ ಒಂಥರ ಯುದ್ಧ ಇದ್ದಹಾಗೆ. ಇಷ್ಟು ದಿನ ಸೈನಿಕರು ದೇಶಕ್ಕಾಗಿ ಯುದ್ಧ ಮಾಡ್ತಿದ್ರು, ಈಗ ನಾವುಗಳೇ ನಮಗಾಗಿ ನಮ್ಮವರಿಗಾಗಿ ಹಾಗೂ ನಮ್ಮ ದೇಶಕ್ಕಾಗಿ ಹೋರಾಡಬೇಕಿದೆ. ಹೋರಾಟ ಅಂದ್ರೆ ಕತ್ತಿ ಹಿಡಿದು ಹೊಡೆದಾಡೋದಲ್ಲ. ಆರೋಗ್ಯವಾಗಿ ಬದುಕಿ ಬಾಳೋದು ಎಂದರ್ಥ. ಈಗಾಗಲೇ ಅಮೆರಿಕಾ, ಇಸ್ರೆಲ್ ದೇಶಗಳ ಜನರು ವ್ಯಾಕ್ಸಿನ್ ಹಾಕಿಸಿಕೊಂಡು ಮಾಸ್ಕ್ ಇಲ್ಲದೆ ನೆಮ್ಮದಿಯ ಲೈಫ್ ಲೀಡ್ ಮಾಡ್ತಿದ್ದಾರೆ. ಅವರಂತೆ ನಾವು ಯಾವಾಗ ಆಗೋದು? ಈ ಪ್ರಶ್ನೆಗೆ ಉತ್ತರ ಎಲ್ಲರು ವ್ಯಾಕ್ಸಿನ್ ಹಾಕಿಸಿಕೊಂಡಾಗ ಮಾತ್ರ. ಇದು ನಮ್ಮೊಬ್ಬರದೇ ಅಭಿಪ್ರಾಯವಲ್ಲ, ಆರೋಗ್ಯ ತಜ್ಞರ ಅಭಿಪ್ರಾಯ.

ಕೊರೊನಾ ವಿರುದ್ಧ ಹೋರಾಡಬಲ್ಲ ವ್ಯಾಕ್ಸಿನ್​ ಹಾಕಿಸಿಕೊಂಡ್ರೆ ಕೊರೊನಾ ಹೋಗೆ ಬಿಡುತ್ತೆ ಅಥವಾ ಬರೋದೆ ಇಲ್ಲ ಅಂತ ಏನ್ ಇಲ್ಲ. ಆದ್ರೆ ನಮ್ಮಲಿ ಕೊರೊನಾ ವಿರುದ್ಧ ಹೊರಾಡುವ ಶಕ್ತಿ ಅಂತು ಖಂಡಿತ ವೃದ್ಧಿಯಾಗುತ್ತದೆ. ನಮ್ಮಿಂದ ಬೇರೆಯವರಿಗೂ ರೋಗ ರುಜಿನಗಳು ಬರದ ಹಾಗೆ ಆಗತ್ತೆ.

The post ದೌಲ್ ಮಲ್ಲಿಕ್ ಕಾಪಾಡ್ತಾನೆ, ಲಸಿಕೆ ಬೇಡ.. ಹಾಕೋದಾದ್ರೆ ಒಂದು ಕಂಡೀಷನ್ ಎಂದ ಗ್ರಾಮಸ್ಥರು appeared first on News First Kannada.

Source: newsfirstlive.com

Source link