ಬಾಗಲಕೋಟೆ: ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಬಹುಪಾಲು ಅನ್ನದಾತರ ಒಡಲಿಗೆ ಬೆಂಕಿ ಇಟ್ಟಿದೆ. ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ಫಸಲು ಇನ್ನೇನು ಕೈಗೆ ಬಂದು ಬಾಳು ಹಸನಾಗುವಷ್ಟರಲ್ಲಿ ವರುಣನ ವಕ್ರದೃಷ್ಟಿ ಅನ್ನದಾತನತ್ತ ನೆಟ್ಟಿದೆ.
ನಗರದಲ್ಲಿ ಸುರಿದ ಅಬ್ಬರದ ಮಳೆಗೆ 10 ಎಕರೆಯಲ್ಲಿ ಬೆಳೆದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾದ ಘಟನೆ ನಡೆದಿದೆ. ನಗರದ ಹೊರವಲಯದಲ್ಲಿರುವ ಶ್ರೀಶೈಲ್ ಯಳ್ಳಿಗುತ್ತಿ ಎಂಬುವವರ ಜಮೀನಿನನಲ್ಲಿ ಹೂ ಕಟ್ಟಲು ಶುರು ಮಾಡಿದ್ದ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಹೂ ಉದುರಿ ಬೆಳೆ ನಾಶಗೊಂಡಿದೆ.
ಸುಮಾರು 10 ಎಕರೆಗೆ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳದೆದಿದ್ದ ಬೆಳೆ ವರುಣಾರ್ಭಟಕ್ಕೆ ಬಲಿಯಾಗಿದ್ದು ಬೇಸತ್ತ ಅನ್ನದಾತ ದ್ರಾಕ್ಷಿಯ ಗಿಡಗಳನ್ನು ಕೊಡಲಿಯಿಂದು ಕತ್ತರಿಸಿ ಹಾಕಿ ಆಕ್ರೋಶ ಹೊರಹಾಕಿದ್ದಾನೆ.