ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ತಂಡಕ್ಕೆ ಮಾರ್ಗದರ್ಶನ ನೀಡುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆಯೇ ಹಲವು ಬಾರಿ ತಾತ್ಕಾಲಿಕವಾಗಿ ಟೀಮ್ ಇಂಡಿಯಾ ಕೋಚ್ ಆಗಿ ಕೆಲಸ ಮಾಡಿದ್ದ ರಾಹುಲ್ ದ್ರಾವಿಡ್, ಈಗ ಪೂರ್ಣ ಪ್ರಮಾಣದಲ್ಲಿ ಕೋಚ್ ಹುದ್ದೆ ಅಲಂಕರಿಸಿದ್ದಾರೆ.
ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿರುವ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಕೂಡ ಸಂತಸ ಹೊರಹಾಕಿದ್ದು, ಜೊತೆಗೆ ಬಿಸಿಸಿಐಗೆ ವಿಶೇಷ ಕಿವಿಮಾತೊಂದು ಹೇಳಿದ್ದಾರೆ.
ಶಿಸ್ತು ಮತ್ತು ಬದ್ಧತೆಗೆ ಯಾರಾದರೂ ರೋಲ್ ಮಾಡೆಲ್‌ನಂತ್ತಿದ್ದರೆ ಅದು ರಾಹುಲ್ ದ್ರಾವಿಡ್. ಕೋಚ್‌ನಿಂದ ಹಲವು ಸಂಗತಿಗಳನ್ನು ನಿರೀಕ್ಷಿಸಲಾಗುತ್ತದೆ. ಅದರಲ್ಲಿ ಶಿಸ್ತು ಮತ್ತು ಬದ್ಧತೆ ಅತ್ಯಂತ ಪ್ರಮುಖ ಸಂಗತಿಗಳು ಎಂದರು.
ಇದನ್ನೂ ಓದಿ: ರವಿಶಾಸ್ತ್ರಿಗೆ ಗೇಟ್ ಪಾಸ್; ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್
ಈಗ ಭಾರತ ತಂಡದ ಮುಂದಿನ ಕ್ಯಾಪ್ಟನ್‌ನ ಆಯ್ಕೆಯನ್ನು ದ್ರಾವಿಡ್ ಮಾಡುತ್ತಾರೆಯೇ ಅಥವಾ ಆಯ್ಕೆ ಸಮಿತಿಯೇ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತ ತಂಡದ ಕೋಚ್ ಆಗಿರುವ ವ್ಯಕ್ತಿಗೆ ಆತನ ದೃಷ್ಟಿಕೋನದಂತೆ ತಂಡವನ್ನು ನಡೆಸುವ ಅವಕಾಶ ಮಾಡಿಕೊಡಬೇಕು. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬ ಪಾಠ ಮಾಡಲು ಹೋಗಬೇಡಿ ಎಂದಿದ್ದಾರೆ ಜಡೇಜಾ.