ಉತ್ತರ ಕನ್ನಡ: ಸಾಮಾನ್ಯವಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದ್ರಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಈಗಿನ ಉದ್ಯೋಗ ಕ್ಷೇತ್ರದಲ್ಲಿ ಬೇಸ್ ಅಂತಾನೆ ಪರಿಗಣಿಸಲ್ಪಟ್ಟಿದೆ. ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ರದ್ದಾದ ಖುಷಿಯಲ್ಲಿರುತ್ತಾರೆ. ಆದ್ರೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಅಂತಾನೆ ಊಟ, ನಿದ್ದೆ ಬಿಟ್ಟು ಓದೋ ಉದಾಹರಣೆಗಳು ಕೂಡ ಇವೆ.

ಅದ್ರಲ್ಲೂ ಈ ಕೋವಿಡ್ ಅನ್ನೋದು ಬಂದಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಧೋಗತಿಯಾಗಿದೆ. ಸರ್ಕಾರಗಳೂ ಕೂಡ ಪದೇ ಪದೇ ನಿರ್ಣಯಗಳನ್ನ ಬದಲಿಸುತ್ತಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ವಿದ್ಯಾರ್ಥಿಗಳು ಸರ್ಕಾರದ ಈಗಿನ ನಿರ್ಧಾರಕ್ಕೆ ತಲೆಕೆಡಿಸಿಕೊಂಡಿದ್ದಂತೂ ಹೌದು. ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆ ಒಂದು ತಾಜಾ ಉದಾಹರಣೆಯಾಗಿದೆ.

ಹೌದು.. ದ್ವಿತಿಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ತಾನು ವರ್ಷ ಪೂರ್ತಿ ಓದಿರೋದು ವ್ಯರ್ಥವಾಯಿತು ಅನ್ನೋದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಯಡಳ್ಳಿ ಸಮೀಪದ ಸಹಸ್ರಳ್ಳಿಯ ಧನ್ಯಾ ಆಚಾರಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಶಿರಸಿ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದುತ್ತಿದ್ದಳು. ಕಾಲೇಜಿಗೆ ಪ್ರಥಮ ರ್ಯಾಂಕ್ ಬರಬೇಕು ಅನ್ನೋ ಆಶಯವನ್ನು ಹೊಂದಿದ್ದಳು. ಆದರೆ ಒಮ್ಮೆಲೆ ಕೊರೊನಾ ಕಾರಣದಿಂದ ಪರೀಕ್ಷೆ ರದ್ದಾಗಿ, ಪ್ರಥಮ ಪಿಯುಸಿ ಆಧಾರದ ಮೇಲೆ ಅಂಕ ನೀಡೋ ಘೋಷಣೆಯಿಂದ ಚಿಂತೆಯಲ್ಲಿದ್ದಳು ಎನ್ನಲಾಗಿದೆ.

ಪರೀಕ್ಷೆ ರದ್ದಾದ ಕಾರಣ ವರ್ಷಪೂರ್ತಿ ಓದಿದ್ದು ವ್ಯರ್ಥವಾಯಿತು ಅಂತ ಮನಸ್ಸಿಗೆ ಹಚ್ಚಿಕೊಂಡು ಜೂನ್ 11 ರಂದು ಮಧ್ಯಾಹ್ನದ ವೇಳೆಗೆ ಮನೆಯ ಜಂತಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

The post ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ appeared first on News First Kannada.

Source: newsfirstlive.com

Source link