ದ.ಆಫ್ರಿಕಾದಿಂದ ಬಂದ ಹಲವು ಪ್ರಯಾಣಿಕರ ವಿಳಾಸ ಪತ್ತೆಹಚ್ಚಲು ಬಿಬಿಎಂಪಿ ವಿಫಲ, ಟಫ್ ರೂಲ್ಸ್ ಜಾರಿ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುಳಿವು | BBMP Fails to track passengers address who come from south Africa to bengaluru


ದ.ಆಫ್ರಿಕಾದಿಂದ ಬಂದ ಹಲವು ಪ್ರಯಾಣಿಕರ ವಿಳಾಸ ಪತ್ತೆಹಚ್ಚಲು ಬಿಬಿಎಂಪಿ ವಿಫಲ, ಟಫ್ ರೂಲ್ಸ್ ಜಾರಿ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುಳಿವು

ಗೌರವ್ ಗುಪ್ತಾ

ಬೆಂಗಳೂರು: ಮಹಾಮಾರಿ ಕೊರೊನಾ ಆತಂಕದಲ್ಲಿದ್ದ ಬೆಂಗಳೂರಿಗೆ ಸಿಡಿಲು ಬಡಿದಂತೆ ಮತ್ತೊಂದು ಶಾಕ್ ಅಪ್ಪಲಿಸಿದೆ. ನಿನ್ನೆ ನಗರದಲ್ಲಿ ಪತ್ತೆಯಾದ ಒಮಿಕ್ರಾನ್ ಎಲ್ಲರನ್ನೂ ನಡುಗಿಸಿದೆ. ಇದಲ್ಲದೆ ದಕ್ಷಿಣ ಆಫ್ರಿಕಾದಿಂದ ಬಂದ ಹಲವು ಪ್ರಯಾಣಿಕರ ಪತ್ತೆ ಹುಡುಕುವಲ್ಲಿ ಬಿಬಿಎಂಪಿ ಎಡವಿದೆ. ವಿದೇಶದಿಂದ ಬಂದವರ ವಿಳಾಸ ಪತ್ತೆಹಚ್ಚಲು ಬಿಬಿಎಂಪಿ ವಿಫಲವಾಗಿದೆ.

15 ದಿನದಲ್ಲಿ ದಕ್ಷಿಣ ಆಫ್ರಿಕಾದಿಂದ 57 ಜನರು ಆಗಮಿಸಿದ್ದಾರೆ. ಈ ಪೈಕಿ ಕೆಲವರ ವಿಳಾಸ ಪತ್ತೆ ಹಚ್ಚುವಲ್ಲಿ ಬಿಬಿಎಂಪಿ ವಿಫಲವಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದ 10 ಜನರ ವಿಳಾಸ ಪತ್ತೆ ಆಗಿಲ್ಲ. ಪಾಸ್‌ಪೋರ್ಟ್‌ನಲ್ಲಿರುವ ವಿಳಾಸಕ್ಕೆ ಹೋದ್ರೆ ಅಲ್ಲಿಯೂ ಇಲ್ಲ. ಫೋನ್ ಮಾಡಿದ್ರೆ ಸ್ವಿಚ್ಡ್ ಆಫ್, ನಾಟ್ ರೀಚಬಲ್ ಆಗಿದ್ದಾರೆ. ಈ ಪ್ರಯಾಣಿಕರನ್ನು ಪತ್ತೆ ಹಚ್ಚುವುದೇ ಪಾಲಿಕೆ, ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಸದ್ಯ ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಹುಡುಕಾಟ ಮುಂದುವರೆಸಿದ್ದಾರೆ.

ಸೌತ್‌ ಆಫ್ರಿಕಾ ಸೇರಿ 29 ರಾಷ್ಟ್ರಗಳಲ್ಲಿ ಒಮಿಕ್ರಾನ್ ರಣಕೇಕೆ ಹಾಕ್ತಿದೆ. ಇಂತಹ ಡೇಂಜರಸ್ ಒಮಿಕ್ರಾನ್ ಈಗ ಬೆಂಗಳೂರಿಗೂ ಕಾಲಿಟ್ಟಿದ್ದು, ನಡುಗುವಂತೆ ಮಾಡಿದೆ. ಯಾಕಂದ್ರೆ, ಸೋಂಕಿತರ ಟ್ರಾವಲ್ ಹಿಸ್ಟರಿ ಭಯಾನಕವಾಗಿದ್ದು, ಸೋಂಕಿತರು ಇಟ್ಟಿರೋ ಪ್ರತಿ ಹೆಜ್ಜೆಯೂ ಭೀತಿ ಹುಟ್ಟಿಸ್ತಿದೆ.

ಪ್ರತಿನಿತ್ಯ 10ರಿಂದ 15 ಸ್ಯಾಂಪಲ್ಸ್ ಟೆಸ್ಟ್‌ಗೆ ಕಳಿಸುತ್ತಿದ್ದೇವೆ
ಇನ್ನು ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿಗೆ ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಮನವಿ ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಕೊರೊನಾ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆ ವಿದೇಶದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಲಾಗುವುದು. ಟೆಸ್ಟ್ ಹೆಚ್ಚು ಮಾಡುವುದು, ಸಂಪರ್ಕಿತರ ಪತ್ತೆ ಕಾರ್ಯಕ್ಕೆ ಮೊದಲಿನಂತೆ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿನೋಮಿಕ್ ಸೀಕ್ವೆನ್ಸಿಂಗ್ ವರದಿ ತಡವಾಗಿ ಬರುತ್ತಿತ್ತು. ಈಗ ವರದಿ ಬರುವ ಸಮಯದ ಅಂತರ ಕಡಿಮೆಯಾಗಿದೆ. ಪ್ರತಿನಿತ್ಯ 10ರಿಂದ 15 ಸ್ಯಾಂಪಲ್ಸ್ ಟೆಸ್ಟ್‌ಗೆ ಕಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಬಂದವರು ನಾಪತ್ತೆಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಾಪತ್ತೆಯಾದವರನ್ನು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ. ಕೊರೊನಾ ತಡೆಗೆ ಕೆಲವು ಮಾರ್ಗಸೂಚಿ ಅನಿವಾರ್ಯವಾಗಿದೆ. ಕೆಲ ದಿನಗಳಿಂದ ಕೆಲ ಮಾರ್ಗಸೂಚಿ ಹಿಂಪಡೆಯಲಾಗಿತ್ತು. ಇದೀಗ ಅದೇ ಮಾರ್ಗಸೂಚಿ ಮತ್ತೆ ಜಾರಿ ಮಾಡಬೇಕಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಜನತೆ ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಎಲ್ಲರೂ 2 ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲವಾದ್ರೆ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *