ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್


ಬೆಂಗಳೂರು ಏರ್​ಪೋರ್ಟ್​ನಲ್ಲಿ ಹೈ-ಅಲರ್ಟ್
ಕೊರೊನಾ ರೂಪಾಂತರಿ ಒಮಿಕ್ರಾನ್​​ ವೈರಸ್​ ಭೀತಿ ಹಿನ್ನೆಲೆ ರಾಜ್ಯದಲ್ಲೂ ಹೈ-ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ವಿದೇಶಗಳಿಂದ ಬರುವ ಪ್ರಯಾಣಿಕರನ್ನು ತೀವ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೊರಗಿನಿಂದ ಬರುವ ಪ್ರವಾಸಿಗರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚಿಸಿದ್ದು, ಸರ್ಕಾರ ಹೊಸ ಗೈಡ್​ಲೈನ್​ ಜಾರಿಗೆ ತಯಾರಿ ನಡೆಸಿದೆ ಎನ್ನಲಾಗ್ತಿದೆ.

ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ
ರಾಜ್ಯದಲ್ಲಿ ಕೊರೊನಾ ರೂಪಾಂತರಿ ಆತಂಕ ಶುರುವಾಗಿರೋ ಬೆನ್ನಲ್ಲಿ ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್​ ಎದುರಾಗಿದೆ. ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರು ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ ಕಂಡುಬಂದಿರುವ ವೈರಸ್​ ಹೊಸ ರೂಪಾಂತರಿಯೇ ಅನ್ನೋ ಬಗ್ಗೆ ತಪಾಸಣೆ ನಡೆಸಲಾಗ್ತಿದೆ. ಸದ್ಯ ಇಬ್ಬರು ಪ್ರಯಾಣಿಕರ ಗಂಟಲು ದ್ರವವನ್ನ ಟೆಸ್ಟ್​ಗೆ ಕಳುಹಿಸಲಾಗಿದ್ದು, ಇಬ್ಬರನ್ನು ಕ್ವಾರಂಟೀನ್​​ಗೆ ಒಳಪಡಿಸಲಾಗಿದೆ.

ಹುಡುಗಿ ವಿಷಯಕ್ಕೆ ಯುವಕರ ಮಾರಾಮಾರಿ
ಹುಡುಗಿ ವಿಚಾರಕ್ಕೆ ಎರಡು ಯುವಕರ ಗುಂಪು ಪರಸ್ಪರ ಹೊಡೆದಾಡಿಕೊಂಡ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ. ಹುಡುಗಿಯೊಬ್ಬಳನ್ನ ಪ್ರೀತಿಸುವ ವಿಷಯವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಈ ವಿಚಾರ ತಾರಕಕ್ಕೇರಿ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಮೂವರು ಯುವಕರಿಗೆ ಗಾಯಗಳಾಗಿದ್ದು, ಇಬ್ಬರು ಯುವಕರು ನರಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ.

ಇಂದು 83ನೇ ಮನದ ಮಾತು
ಇಂದು ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 83ನೇ ಸಂಚಿಕೆಯಾಗಿದೆ. ಇದು ALL INDIA RADIO ಮತ್ತು ದೂರದರ್ಶನ, ನ್ಯೂಸ್ ವೆಬ್‌ಸೈಟ್ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗುತ್ತದೆ.

ಮೊದಲ ದಿನವೇ ಕೃಷಿಕಾಯ್ದೆ ರದ್ದು ಮಸೂದೆ ಮಂಡನೆ
ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಮೊದಲ ದಿನವೇ ಕೃಷಿ ಕಾಯ್ದೆ ರದ್ದು ಮಸೂದೆ ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಕೃಷಿ ಕಾಯ್ದೆ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಅನೇಕ ವಿಷಯಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಹರಿಹಾಯಲು ವಿಪಕ್ಷಗಳು ಸಿದ್ಧಗೊಂಡಿವೆ. ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ್ದ ವಿವಾದಿತ ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವುದಾಗಿ ಈಗಾಗಲೇ ಮೋದಿ ಘೋಷಣೆ ಮಾಡಿದ್ದಾರೆ. ಇದೀಗ ಅಧಿವೇಶನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಲ್​ ಮಂಡಿಸಲಿದ್ದಾರೆ.

‘ಒಮಿರಾನ್​ ಭಾರತಕ್ಕೆ ಎಚ್ಚರಿಕೆ ಕರೆಗಂಟೆಯಾಗಿದೆ’
ಕೊರೊನಾ ವೈರಸ್‌ ರೂಪಾಂತರ ತಳಿ ಒಮಿಕ್ರಾನ್‌, ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್‌ ತಿಳಿಸಿದ್ದಾರೆ. ಕೋವಿಡ್‌ ವಿಚಾರವಾಗಿ ಭಾರತದ ನಡಾವಳಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು, ಮಾಸ್ಕ್‌ ಧರಿಸುವುದನ್ನು ಮರೆಯಬಾರದು. ಮಾಸ್ಕ್‌ ನಿಮ್ಮ ಪಾಕೆಟ್‌ನಲ್ಲಿರುವ ಲಸಿಕೆಯಂತೆ. ಕೋವಿಡ್‌ ತಡೆಗಟ್ಟುವಲ್ಲಿ ಮಾಸ್ಕ್‌ ಪಾತ್ರವೂ ಪರಿಣಾಮಕಾರಿಯಾಗಿದೆ ಅಂತಾ ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ.

‘ಸರ್ಕಾರವನ್ನು ಬಿಸಿಸಿಐ ಸಂಪರ್ಕಿಸಬೇಕು’
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ರೂಪಾಂತರಿ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಕ್ರಿಕೆಟ್ ತಂಡ ಕಳುಹಿಸುವ ಮೊದಲು ಬಿಸಿಸಿಐ ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೂಚಿಸಿದ್ದಾರೆ. ಬಿಸಿಸಿಐ ಮಾತ್ರವಲ್ಲ, ಎಲ್ಲಾ ಕ್ರೀಡಾ ಸಮಿತಿಗಳು ರೂಪಾಂತರಿ ತಳಿ ಪತ್ತೆಯಾಗಿರುವ ದೇಶಕ್ಕೆ ತಂಡಗಳನ್ನು ಕಳುಹಿಸುವ ಮುನ್ನ ಕೇಂದ್ರ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕೆಂದು ಠಾಕೂರ್ ತಿಳಿಸಿದ್ದಾರೆ.

ಪಂಚಾಯತ್​ ಚುನಾವಣೆ ಗೆದ್ದ ಮೃತಪಟ್ಟ ವ್ಯಕ್ತಿ..!
ಮೃತ ವ್ಯಕ್ತಿಯೊಬ್ಬ ಪಂಚಾಯತ್ ಚುನಾವಣೆಯಲ್ಲಿ ತನ್ನ ಸಾವಿನಿಂದ ಉಂಟಾದ ಅನುಕಂಪದ ಅಲೆಯಲ್ಲೇ ಗೆಲುವು ಸಾಧಿಸಿದ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿದೆ. ರಾಜ್ಯ ರಾಜಧಾನಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಹಿಂದುಳಿದಿರುವ ಜಿಲ್ಲೆಯಲ್ಲಿ, ನವೆಂಬರ್ 24 ರಂದು ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ಹಸ್ತಾಂತರಿಸುವಾಗ ಈ ವಿಚಾರ ಬಯಲಾಗಿದೆ. ವಾರ್ಡ್ ನಂ.2, ಖೈರಾ ಬ್ಲಾಕ್ ವ್ಯಾಪ್ತಿಗೆ ಬರುವ ದೀಪ ಕರ್ಹರ್ ಗ್ರಾಮದ ಗೆಲುವು ಸಾಧಿಸಿದ ಸೋಹನ್ ಮುರ್ಮು ಎಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಚುನಾವಣೆ ನಡೆಯುವ ಹದಿನೈದು ದಿನಗಳಿಗಿಂತ ಮುಂಚೆಯೇ ಮುರ್ಮು ಸಾವನ್ನಪ್ಪಿದ್ದಾನೆ ಅಂತಾ ತಿಳಿದುಬಂದಿದೆ.

ಹಸುವಿನ ಜೊತೆ ಮದುವೆಯಾದ ವೃದ್ಧೆ..!
ತನ್ನ ಪತಿಯ ಗುಣಲಕ್ಷಣಗಳೇ ಹಸುವಿನಲ್ಲಿದೆ ಎಂದು ಅದನ್ನೇ ವೃದ್ಧೆಯೊಬ್ಬಳು ವರಿಸಿರುವ ವಿಚಿತ್ರ ಘಟನೆ ನಡೆದಿದೆ. ಕಾಂಬೋಡಿಯಾದ ಕ್ರಾತಿ ಪ್ರಾಂತ್ಯದಲ್ಲಿ ವಾಸಿಸುವ 74 ವರ್ಷದ ಖಿಮ್ ಹ್ಯಾಂಗ್ ಹೆಸರಿನ ವೃದ್ಧೆ, ಮೃತಪಟ್ಟ ತನ್ನ ಪತಿಯ ಎಲ್ಲಾ ಗುಣಲಕ್ಷಣಗಳನ್ನು ಒಂದು ಹಸುವಿನಲ್ಲಿ ಕಂಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ನಂತರ ಆ ಹಸುವನ್ನು ಮದುವೆಯಾಗಿದ್ದಾಳೆ. ಈಕೆ ವಿವಾಹವಾಗಿರುವುದಕ್ಕೆ ಯಾವುದೇ ವಿಡಿಯೋ ಸಾಕ್ಷಿಗಳಿಲ್ಲ. ಆದರೆ ಗ್ರಾಮದ ಅನೇಕ ಜನರು ಮದುವೆಯನ್ನು ನೋಡಿದ್ದೇವೆ, ಮದುವೆಯಲ್ಲಿ ಭಾಗವಹಿಸಿದ್ದೇವೆ ಎಂದಿದ್ದಾರೆ.

ಮಲೇಷಿಯನ್ ಓಪನ್ ಗೆದ್ದ ಸೌರವ್ ಘೋಸಲ್
ಸ್ಕ್ವ್ಯಾಷ್ ತಾರೆ ಸೌರವ್ ಘೋಸಲ್ ಶನಿವಾರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮಿಗುಯೆಲ್ ರೊಡ್ರಿಗಸ್ ಅವರನ್ನು ಸೋಲಿಸಿ ಮಲೇಷ್ಯಾ ಓಪನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎರಡನೇ ಶ್ರೇಯಾಂಕದ ಘೋಸಲ್, ಕೊಲಂಬಿಯಾದ ಅಗ್ರ ಶ್ರೇಯಾಂಕದ ರೊಡ್ರಿಗಸ್ ಅವರನ್ನು 55 ನಿಮಿಷಗಳಲ್ಲಿ 11-7, 11-8 ಮತ್ತು 13-11 ರಿಂದ ಸೋಲಿಸಿದರು ಮತ್ತು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಚಾಂಪಿಯನ್ ಕಿರೀಟವನ್ನು ಧರಿಸಿದ ಭಾರತದ ಮೊದಲಿಗರಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *