ಕೊಡಗು: ಜಿಲ್ಲೆ ಪ್ರವಾಸಿಗರ ಸ್ವರ್ಗ ಅಂತಾನೇ ಖ್ಯಾತಿ ಪಡೆದುಕೊಂಡಿದೆ. ಪ್ರವಾಸಿ ಸ್ಥಳಗಳ ಜೊತೆ ಧಾರ್ಮಿಕ ಕ್ಷೇತ್ರಗಳು ಕೊಡಗಿನಲ್ಲಿವೆ. ಕರ್ನಾಟಕದ ಮೂಲೆ ಮೂಲೆಯಿಂದ ಮಂಜಿನ ನಗರಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಪ್ರವಾಸಿಗರ ಆಗಮನವೇ ಸದ್ಯ ಕೊಡಗಿನ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಕೊಡಗು ಪ್ರವಾಸಿ ಸ್ಥಳಗಳ ಜೊತೆಗೆ ಧಾರ್ಮಿಕ ಕ್ಷೇತ್ರಗಳ ತಾಣವೂ ಹೌದು. ನಾಡಿನ ಜೀವ ನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿ ವಿಶ್ವ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ತಲಕಾವೇರಿಯಿಂದ 8 ಕಿಲೋ ಮೀಟರ್ ದೂರದಲ್ಲಿರೋ ಭಾಗಮಂಡಲದ ತ್ರಿವೇಣಿ ಸಂಗಮ ಕೂಡ ಶ್ರದ್ಧಾ ಭಕ್ತಿಯ ತಾಣ. ಆದರೆ ಇಲ್ಲಿಗೆ ಆಗಮಿಸುತ್ತಿರೋ ಪ್ರವಾಸಿಗರು ಮಾಂಸ, ಮದ್ಯ ಸೇವನೆ ಮಾಡಿ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ ಅಂತಾ ಕೊಡಗಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗಿನ ತಲಕಾವೇರಿ, ಭಾಗಮಂಡಲ, ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನಗಳೆಲ್ಲವೂ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈ ಬಿಡಬೇಕು ಅನ್ನೋದು ಸ್ಥಳೀಯರ ಆಗ್ರಹ.
ಪ್ರವಾಸೋದ್ಯಮವನ್ನು ಉತ್ತೇಜನಗೊಳಿಸುವುದು ಸರ್ಕಾರದ ಕರ್ತವ್ಯ ನಿಜ. ಆದರೆ ಪ್ರವಾಸೋದ್ಯಮದ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡುವುದು ಕೂಡ ಸರ್ಕಾರದ ಜವಾಬ್ದಾರಿ. ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದ ರೀತಿ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ರೆ, ಜನರ ಆಕ್ರೋಶ, ಸರ್ಕಾರದ ವಿರುದ್ಧವೇ ತಿರುಗುವುದ್ರಲ್ಲಿ ಅಚ್ಚರಿ ಪಡಬೇಕಿಲ್ಲ.
ವಿಶೇಷ ವರದಿ: ಯುಗದೇವವ್ಯ ಕೊಡಗು, ನ್ಯೂಸ್ಫಸ್ಟ್.