ನಾನು ಈಗಾಗಲೇ ಒಂದು ಕಾಲಲ್ಲ, ಬದಲಿಗೆ ಎರಡು ಕಾಲು ಹೊರಗಿಟ್ಟಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಜಿ.ಟಿ ದೇವೇಗೌಡ, ಕಾಂಗ್ರೆಸ್ನಿಂದ ನನಗೂ, ನನ್ನ ಮಗ ಹರೀಶ್ ಗೌಡಗೆ ಟಿಕೆಟ್ ಕೇಳಿದ್ದೇನೆ. ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದರೆ, ಕಾಂಗ್ರೆಸ್ ಸೇರುತ್ತೇನೆ ಎಂದರು.
ಇಬ್ಬರಿಗೆ ಟಿಕೆಟ್ ನೀಡದಿದ್ರೆ ಕಾಂಗ್ರೆಸ್ ಸೇರೋದಿಲ್ಲ, ಬದಲಿಗೆ ಪಕ್ಷೇತರರಾಗಿ ಸರ್ಧೆ ಮಾಡ್ತೀವಿ. ಯಾವ ಪಾರ್ಟಿ ಬೆಂಬಲವೂ ಇಲ್ಲದೇ ಪಕ್ಷೇತರರಾಗಿ ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದರು.
ಪರಿಷತ್ ಚುನಾವಣೆಗೆ ಜೆಡಿಎಸ್ ಪರ ಕೆಲಸ ಮಾಡಬೇಕೆಂಬುದನ್ನ ಇನ್ನೂ ನಿರ್ಧರಿಸಿಲ್ಲ. ಯಾವ ಪಕ್ಷ ನಮಗೆ ಬೇಕಾದವರಿಗೆ ಟಿಕೆಟ್ ನೀಡುತ್ತೋ ಅವರ ಪರ ಕೆಲಸ ಮಾಡುತ್ತೇವೆ. ನಾನು ಜೆಡಿಎಸ್ ಪಕ್ಷವನ್ನ ಗಟ್ಟಿಯಾಗಿ ಬೆಳೆಸಿದ್ದೇನೆ ಹೊರತು ತಿಂದು, ಉಂಡು ಹೋಗುವ ಕೆಲಸ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಜಿ.ಟಿ ದೇವೇಗೌಡ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ‘ಪಕ್ಷಕ್ಕೆ GTD ಸೇರಿ ಯಾರೇ ಬಂದರೂ ಸ್ವಾಗತ’ ಎಂದ ಮಾಜಿ ಸಿಎಂ -ಸಿದ್ದರಾಮಯ್ಯರ ಹಾಡಿ ಹೊಗಳಿದ ದೇವೇಗೌಡ
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾಕಷ್ಟು ಅಪಮಾನ ಮಾಡಿದ್ದಾರೆ. ಸಾ.ರಾ ಮಹೇಶ್ಗೆ ಯಡಿಯೂರಪ್ಪ ವಾಸವಿದ್ದ ದೊಡ್ಡ ಸರ್ಕಾರಿ ಬಂಗಲೆ ಕೊಟ್ಟಿದ್ದರು. ಆದರೆ, ನನಗೆ ಒಂದು ಸಣ್ಣ ನಿವಾಸ ಕೊಡೋದಕ್ಕೂ ಹಿಂದೂಮುಂದು ನೋಡಿದ್ರು. ನನಗೆ ಆಪ್ತ ಕಾರ್ಯದರ್ಶಿಯನ್ನೇ ಕೊಡಲಿಲ್ಲ. ಕೊನೆಗೆ ಡಿ.ಕೆ ಶಿವಕುಮಾರ್ ಹೇಳಿದ ಮೇಲೆ ಕೊಟ್ಟರು. ನನಗಿಂತ ಹದಿನೈದು ವರ್ಷದ ಕಿರಿಯರಿಗೆ ಬೇಕಾದ ಖಾತೆಗಳನ್ನ ಕೊಟ್ಟರು. ನಮಗೆ ಮಾತ್ರ ಬೇಡವಾದ ಖಾತೆ ಕೊಟ್ಟು ಅವಮಾನ ಮಾಡಿದ್ರು. ಇದನ್ನೆಲ್ಲಾ ಸಹಿಸಿಕೊಂಡು ಬಂದಿದ್ದೇನೆ. ನಿರಂತರವಾಗಿ ಅಪಮಾನ ಮಾಡಿದ್ರೆ ಪಕ್ಷದಲ್ಲಿ ಹೇಗೆ ಉಳಿಯಲು ಸಾಧ್ಯ. ಅದೇ ಕಾರಣಕ್ಕೆ ಎರಡೂ ಕಾಲನ್ನ ಹೊರಗೆ ಇಟ್ಟಿದ್ದೇನೆ ಎಂದು ಹೇಳಿದರು.
The post ‘ನಂಗೆ, ಮಗನಿಗೆ ಟಿಕೆಟ್ ಕೊಟ್ರೆ ಕಾಂಗ್ರೆಸ್, ಇಲ್ಲಂದ್ರೆ ಪಕ್ಷೇತರರಾಗಿ ಕಂಟೆಸ್ಟ್’- ಜಿಟಿಡಿ appeared first on News First Kannada.