ನಿನ್ನೆಯಷ್ಟೇ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 213 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರ ಸ್ಥಾಪಿಸಲು ಮುಂದಾಗಿದೆ. ಆದ್ರೆ ಬಂಗಾಳವನ್ನೇ ಗೆದ್ದ ಮಮತಾ ಬ್ಯಾನರ್ಜಿ, ತಮ್ಮದೇ ಪಕ್ಷ ತೊರೆದು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ವಿರುದ್ಧದ ಜಿದ್ದಿನಿಂದಾಗಿ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.

ಹಾಗಾದ್ರೆ ತಾವು ಸ್ಪರ್ಧಿಸಿದ ಕ್ಷೇತ್ರದಿಂದ ಸೋತು ಶಾಸಕರಾಗಿ ಚುನಾಯಿತರಾಗದ ಮಮತಾ ಬ್ಯಾನರ್ಜಿಯವರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರುವ ಅವಕಾಶ, ಅರ್ಹತೆ ಇದೆಯಾ..? ಹೌದು ಅನ್ನುತ್ತೆ ಸಂವಿಧಾನ. ಭಾರತದ ಸಂವಿಧಾನದಲ್ಲಿ ಶಾಸಕರಾಗಿ ಆಯ್ಕೆಯಾಗದಿದ್ದರೂ ಸಹ ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಅಥವಾ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಅವಕಾಶವಿದೆ. ಆದರೆ ಅಂಥ ವ್ಯಕ್ತಿ ನೇಮಕಗೊಂಡ 6 ತಿಂಗಳುಗಳಲ್ಲಿ ಜನರಿಂದ ಚುನಾಯಿತರಾಗಬೇಕಾಗುತ್ತದೆ.

ಈ ಕುರಿತು ಆರ್ಟಿಕಲ್​ 164(4) ಹೀಗೆ ಹೇಳುತ್ತದೆ..

ಯಾವುದೇ ಮಂತ್ರಿ ಸತತ ಆರು ತಿಂಗಳ ಅವಧಿಗೆ ರಾಜ್ಯದ ವಿಧಾನ ಮಂಡಲದ ಸದಸ್ಯರಾಗಿರದಿದ್ದರೆ, (ಆ ಅವಧಿಯು ಮುಕ್ತಾಯವಾಗುವ ಒಳಗೆ ಚುನಾಯಿತರಾಗದಿದ್ದರೆ) ಅವರು ಮಂತ್ರಿ ಸ್ಥಾನ ಅಂತ್ಯವಾಗುತ್ತದೆ.

ಈ ಹಿಂದೆಯೂ ನಡೆದಿವೆ ಇಂಥ ಉದಾಹರಣೆ

  • ದೇಶದಲ್ಲಿ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗದ ವ್ಯಕ್ತಿಯೂ ಸಹ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೀರಾ ಇತ್ತೀಚಿನ ಉದಾಹರಣೆ ಎಂದರೆ ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್.
  • ಇನ್ನು ಸ್ವತಃ ಮಮತಾ ಬ್ಯಾನರ್ಜಿ 2011ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರು ಶಾಸಕರಾಗಿ ಚುನಾಯಿತರಾಗಿರಲಿಲ್ಲ.
  • 1952ರಲ್ಲಿ ದೇಶದ ಮೊದಲ ವಿಧಾನಸಭಾ ಚುನಾವಣೆ ನಡೆದಿತ್ತು. ಆಗಿನ ಮಹಾರಾಷ್ಟ್ರ ಮತ್ತು ಗುಜರಾತ್​ ಜಂಟಿ ಪ್ರಾಂತ್ಯವನ್ನ ಬಾಂಬೆ ಎಂದು ಕರೆಯಲಾಗ್ತಿತ್ತು. ಕಾಂಗ್ರೆಸ್ ನಾಯಕ, 1977ರಲ್ಲಿ ಜನತಾ ಪಾರ್ಟಿಯಿಂದ ಪ್ರಧಾನಿ ಹುದ್ದೆಗೇರಿದ್ದ ಮೊರಾರ್ಜಿ ದೇಸಾಯಿ ಈ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಆದರೆ ಪಕ್ಷದಲ್ಲಿ ಅವರು ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಕಾಂಗ್ರೆಸ್ ಪಾರ್ಟಿ ಮೊರಾರ್ಜಿ ದೇಸಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತ್ತು.
  • ಅದೇ ವರ್ಷ ಸಿ. ರಾಜಗೋಪಾಲಚಾರಿ ಸೋಲುತ್ತೇನೆಂಬ ಭಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದ್ರೆ ಮದ್ರಾಸ್​ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸಿ. ರಾಜಗೋಪಾಲಚಾರಿ ದೇಶದ ಕೊನೆಯ ಗವರ್ನರ್​ ಜನರಲ್ ಆಗಿದ್ದವರು, ಅವರ ನಂತರ ಗವರ್ನರ್​ ಜನರಲ್​ ಸ್ಥಾನ ರಾಷ್ಟ್ರಪತಿ ಸ್ಥಾನವಾಗಿ ಬದಲಾಯ್ತು. ಇನ್ನು ರಾಜಗೋಪಾಚಾರಿಯವರು ಮುಖ್ಯಮಂತ್ರಿಯಾದ ನಂತರವೂ ಸಹ ಸೋಲಿನ ಭಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ವಿಧಾನ ಪರಿಷತ್​ನ ಮುಕ್ತ​ ಚುನಾವಣೆಗೂ ಹೋಗಲಿಲ್ಲ. ಕೊನೆಗೆ ಮದ್ರಾಸ್ ಚೇಂಬರ್ಸ್ ಆಫ್ ಕಾಮರ್ಸ್​ ಕೋಟಾದಲ್ಲಿ ಶಾಸಕಾಂಗ ಮಂಡಳಿಗೆ ಚುನಾಯಿತರಾದರು.
  • 2017ರಲ್ಲಿ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಗೆದ್ದಿತ್ತು. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಪ್ರೇಮ್​ಕುಮಾರ್ ಧುಮಾಲ್ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಆಗ ಬಿಜೆಪಿಯ ಹೊಸಮುಖ ಜೈರಾಮ್ ಥಾಕೂರ್​ ಅವರನ್ನ ಮುಖ್ಯಮಂತ್ರಿ ಮಾಡಿತ್ತು.

The post ನಂದಿಗ್ರಾಮದಲ್ಲಿ ಸೋತರೂ ಸಿಎಂ ಆಗಬಹುದಾ ಮಮತಾ..? ಈ ಬಗ್ಗೆ ಸಂವಿಧಾನ ಏನು ಹೇಳುತ್ತೆ? appeared first on News First Kannada.

Source: newsfirstlive.com

Source link