ನಂಬರ್ ಪ್ಲೇಟ್​​ ಮೇಲೆ SEX ಪದ ಬಳಕೆ; ಯುವತಿ ಪರ ನಿಂತು, ಆರ್​ಟಿಒ ಕಚೇರಿಗೆ ನೋಟಿಸ್​ ನೀಡಿದ ಮಹಿಳಾ ಆಯೋಗ | DCW issued a notice to Delhi RTO Over vehicle’s registration number which contains the term SEX


ನಂಬರ್ ಪ್ಲೇಟ್​​ ಮೇಲೆ SEX ಪದ ಬಳಕೆ; ಯುವತಿ ಪರ ನಿಂತು, ಆರ್​ಟಿಒ ಕಚೇರಿಗೆ ನೋಟಿಸ್​ ನೀಡಿದ ಮಹಿಳಾ ಆಯೋಗ

ಸ್ಕೂಟರ್​​

ವಾಹನಗಳ ನಂಬರ್​ ಪ್ಲೇಟ್​​​ನಲ್ಲಿ ಇಂಗ್ಲಿಷ್​ ವರ್ಣಮಾಲೆ ಅಕ್ಷರಗಳೊಂದಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಸಂಯೋಜಿಸಲಾಗುತ್ತದೆ. ಎಷ್ಟೋ ಜನ ಈ ನಂಬರ್​ ಪ್ಲೇಟ್​ ಬರುವ ಹೊತ್ತಲ್ಲಿ, ತಮಗೆ ಆ ನಂಬರ್ ಬೇಕು..ಇದೇ ರಿಜಿಸ್ಟ್ರೇಶನ್​ ನಂಬರ್​ ಬೇಕು ಎಂದು ಕಷ್ಟಪಟ್ಟಾದರೂ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ದೆಹಲಿಯಲ್ಲೊಬ್ಬಳು ಯುವತಿ ತನ್ನ ಸ್ಕೂಟಿಯ ನಂಬರ್​ ಪ್ಲೇಟ್​ ಕಾರಣಕ್ಕೆ ಅದನ್ನು ಬದಿಗಿಟ್ಟ ಘಟನೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಅದಕ್ಕೆ ಕಾರಣ ಆಕೆಯ ನಂಬರ್​ ಪ್ಲೇಟ್​ ಮೇಲೆ SEX ಎಂದಿರುವುದು. ಅಂದರೆ ಆಕೆಗೆ DL 3SEX**** ಎಂಬ ಸರಣಿಯ ನಂಬರ್​ ಪ್ಲೇಟ್​ ಸಿಕ್ಕಿತ್ತು. ಆದರೆ ಈ SEX ಎಂಬ ಪದ ಸಿಕ್ಕಾಪಟೆ ಮುಜುಗರಕ್ಕೀಡಾಗಿತ್ತು. ಹಾಗಂತ ಇದು ಆರ್​ಟಿಒ ಕಚೇರಿಯ ತಪ್ಪು ಎಂದೂ ಹೇಳಲಾಗದು. ಇಲ್ಲಿ  ಡಿಎಲ್​ ಎಂದರೆ ದೆಹಲಿ, 3 ಎಂಬುದು ಜಿಲ್ಲೆಯನ್ನು ಸೂಚಿಸುವ ಅಂಕಿ S ಎಂಬುದು ದ್ವಿಚಕ್ರವಾಹನ​ (ಅದೇ ಇಲ್ಲಿ ಸಿ ಇದ್ದರೆ ಕಾರ್​ ಎಂದಾಗುತ್ತಿತ್ತು) ಮತ್ತು ನಂತರ ಬಂದ EX ಈಗ ನಡೆಯುತ್ತಿರುವ ಇಂಗ್ಲಿಷ್​ ವರ್ಣಮಾಲೆಯ ಸರಣಿ. ಅದರ ಮುಂದೆ ನಾಲ್ಕಂಕಿಯ ನಂಬರ್​ ಇತ್ತು. ಆದರೆ ಈ ಸ್ಕೂಟರ್​ ಗುರುತಿನ S ಮತ್ತು ಮುಂದಿನ EX  ಒಟ್ಟಿಗೇ ಬಂದು SEX ಎಂದಾಗಿತ್ತು.  

ಆದರೆ ಸ್ಕೂಟರ್​ ಮೇಲಿದ್ದ SEX ಪದದಿಂದ ಯುವತಿಗೆ ಸಿಕ್ಕಾಪಟೆ ಮುಜುಗರ ಉಂಟಾಗಿತ್ತು. ಆಕೆಯೊಬ್ಬ ಫ್ಯಾಷನ್​ ಡಿಸೈನರ್​ ಆಗಿದ್ದು, ಸ್ಕೂಟಿ ತೆಗೆದುಕೊಂಡು ಹೋದಲ್ಲೆಲ್ಲ ಎಲ್ಲರೂ ಗೇಲಿಮಾಡುತ್ತಿದ್ದರು ಎಂಬ ಕಾರಣಕ್ಕೆ ಗಾಡಿಯನ್ನು ಬದಿಗಿಟ್ಟಿದ್ದಳು. ಆಕೆಯ ಅಪ್ಪ ಈ ಸ್ಕೂಟಿಯನ್ನು ಪ್ರೀತಿಯಿಂದ ಉಡುಗೊರೆ ಕೊಟ್ಟಿದ್ದರು. ಆದರೆ ನಂಬರ್​ ಪ್ಲೇಟ್​​ ಕಾರಣಕ್ಕೆ ಬದಿಗಿಡುವಂತೆ ಆಗಿತ್ತು.  ಯುವತಿಯ ತಂದೆ ದೆಹಲಿ ಕಮಿಷನರ್​​ರನ್ನೂ ಕೂಡ ಭೇಟಿಯಾಗಿ ನಂಬರ್ ಬದಲಿಸಿಕೊಡುವಂತೆ ಕೇಳಿದ್ದರು. ಆದರೆ ಈ ಸರಣಿ ಮೊದಲೇ ನಿರ್ಧರಿತವಾಗಿರುತ್ತದೆ. ಹಾಗಾಗಿ ಅದನ್ನು ಬದಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇದೀಗ ದೆಹಲಿ ಮಹಿಳಾ ಆಯೋಗ (DCW) ಇದಕ್ಕೆ ಸಂಬಂಧಪಟ್ಟಂತೆ ಆರ್​ಟಿಒ ಅಧಿಕಾರಿಗೆ ನೋಟಿಸ್​ ನೀಡಿದೆ. SEX ಎಂಬ ಸರಣಿಯಿಂದ ಮುಜುಗರ ಉಂಟಾಗುತ್ತಿದ್ದು, ಅದನ್ನು ಬದಲಿಸುವಂತೆ ಒತ್ತಾಯಿಸಿದೆ. ಯುವತಿ ತನಗಾಗುತ್ತಿರುವ ಸಮಸ್ಯೆ, ದೌರ್ಜನ್ಯದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಳು. ಸ್ಕೂಟಿ ನೋಡಿ ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಹಾಗಾಗಿ ಸ್ಕೂ ಟಿ ತಗೆದುಕೊಂಡರೂ ಅದನ್ನು ಬದಿಗೆ ಇಡುವಂತೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಳು. ಅದರ ಬೆನ್ನಲ್ಲೇ ಮಹಿಳಾ ಆಯೋಗ ಈ ಪ್ರಕರಣವನ್ನು ಸುಮೊಟೊವಾಗಿ ಕೈಗೆತ್ತಿಕೊಂಡಿದೆ.  ರಿಜಿಸ್ಟ್ರೇಶನ್​ ಸಂಖ್ಯೆಯನ್ನು ಬದಲಿಸುವಂತೆ ಒತ್ತಾಯ ಮಾಡಿದೆ.  ಈ ಸರಣಿಯಲ್ಲಿ ಆಗಿರುವ ನೋಂದಣಿಯನ್ನು ರದ್ದುಗೊಳಿಸಿ, ಅಂಥ ವಾಹನಗಳಿಗೆ ಬೇರೆ ರಿಜಿಸ್ಟರ್​ ನಂಬರ್ ಕೊಡಬೇಕು ಎಂದು ಮಹಿಳಾ ಆಯೋಗ ಸಾರಿಗೆ ಇಲಾಖೆಯನ್ನು ಕೇಳಿದೆ.

TV9 Kannada


Leave a Reply

Your email address will not be published. Required fields are marked *