ನಕಲಿ ಖಾತೆ ಬಗ್ಗೆ ದೂರು ಕೊಡಲು ಬಂದ ಕನ್ನಡಿಗ ಸೌದಿಯಲ್ಲಿ ಜೈಲು ಪಾಲು


ಮಂಗಳೂರು: ಫೇಸ್ಬುಕ್, ವಾಟ್ಸಪ್ ಜಾಲತಾಣಗಳು ಗಲ್ಫ್ ರಾಷ್ಟ್ರದಲ್ಲಿ ಇನ್ಯಾರನ್ನೋ ಹಣಿಯುವ ಅಸ್ತ್ರವಾಗಿ ಪರಿಣಮಿಸುತ್ತಿವೆ. ತಮಗೆ ಆಗದವರನ್ನು ಜೈಲಿಗೆ ತಳ್ಳಬೇಕಂದ್ರೆ, ಕೆಲವು ದುರುಳರಿಗೆ ಫೇಸ್ಬುಕ್ ನಕಲಿ ಖಾತೆಗಳೇ ಸುಲಭದ ದಾಳವಾಗುತ್ತಿವೆ.

ಹೌದು ಇತ್ತೀಚೆಗೆ ಹರೀಶ್ ಬಂಗೇರ ಎನ್ನುವ ಕುಂದಾಪುರ ಮೂಲದ ಯುವಕ ಇದೇ ರೀತಿ ಫೇಸ್ಬುಕ್ ದಾಳಕ್ಕೆ ಸಿಲುಕಿ ಜೈಲುಪಾಲಾಗಿ ಕಡೆಗೂ ಬಿಡುಗಡೆಯಾಗಿ ಬಂದಿದ್ದರು. ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಮಂಗಳೂರಿನ ವ್ಯಕ್ತಿಯೊಬ್ಬ ಸೌದಿಯಲ್ಲಿ ಜೈಲು ಪಾಲಾಗಿದ್ದಾನೆ.

ಯಾರದೋ ತಪ್ಪಿಗೆ ಮಂಗಳೂರಿನ ಯುವಕನೊಬ್ಬ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿ, ಶೈಲೇಶ್ ಕೊಟ್ಟಾರಿ ಕಳೆದ 25 ವರ್ಷಗಳಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ಶೈಲೇಶ್ ಹೆಸರಲ್ಲಿ ಯಾರೋ ಕಿಡಿಗೇಡಿಗಳು ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಸೌದಿ ದೊರೆ ಮತ್ತು ಇಸ್ಲಾಂ ಬಗ್ಗೆ ಅವಹೇಳನಕಾರಿ ಪೋಸ್ಟ್​​ಗಳನ್ನು ಮಾಡಿದ್ದರು. ಇದರ ಬಗ್ಗೆ ಅಲ್ಲಿನ ಪೊಲೀಸರಿಗೆ ದೂರು ನೀಡಲು ಹೋಗಿದ್ದ ಶೈಲೇಶ್ ಕೊಟ್ಟಾರಿ ಅವರನ್ನೇ ಈಗ ಸೌದಿ ಪೊಲೀಸರು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ.

ಹಲವು ವರ್ಷಗಳಿಂದ ಸೌದಿಯ ಕಂಪನಿ ಒಂದರಲ್ಲಿ ಕೆಲಸಕ್ಕಿದ್ದ ಶೈಲೇಶ್ ಕೊಟ್ಟಾರಿ ಯಾರದ್ದೇ ತಂಟೆಗೆ ಹೋದವರಲ್ಲ. ಆದರೆ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿದ್ದ ಸಿಎಎ ಮತ್ತು ಎನ್​ಆರ್​ಸಿ ಯೋಜನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶೈಲೇಶ್​​ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ನಿನ್ನ ಫೇಸ್ಬುಕ್ ಖಾತೆಯನ್ನು ಕೂಡಲೇ ಅಳಿಸಿ ಹಾಕಬೇಕು. ಇಲ್ಲವಾದಲ್ಲಿ ನಿನ್ನನ್ನು ಸೌದಿಯಲ್ಲೇ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ.

 

ಇದರಿಂದ ಬೆದರಿದ್ದ ಶೈಲೇಶ್ ಕೊಟ್ಟಾರಿ ತನ್ನ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು. ಆದರೆ ಕೆಲವು ದಿನಗಳ ನಂತರ ಶೈಲೇಶ್ ಕುಮಾರ್​​ಗೆ ಗೊತ್ತೇ ಆಗದಂತೆ ಆವರ ಹೆಸರಲ್ಲೇ ಮತ್ತೊಂದು ಖಾತೆಯನ್ನು ತೆರೆದು, ಅದರಲ್ಲಿ ಉದ್ದೇಶಪೂರ್ವಕವಾಗಿ ಇಸ್ಲಾಂ ಬಗ್ಗೆ ಮತ್ತು ಸೌದಿ ದೊರೆಯ ಬಗ್ಗೆ ಅವಹೇಳನಕಾರಿ ಬರೆಯಲಾಗಿತ್ತು. ಇದರಿಂದ ಭಯಗೊಂಡ ಶೈಲೇಶ್ ಕೂಡಲೇ ತಾನು ಕೆಲಸ ಮಾಡುವ ಕಂಪನಿಯ ಹೆಚ್​ಆರ್ ಬಳಿ ಹೇಳಿಕೊಂಡಿದ್ದಾರೆ.

ಬಳಿಕ ಕಂಪನಿ ಎಚ್ಆರ್ ಸೂಚನೆಯಂತೆ ಪೊಲೀಸರಿಗೆ ದೂರು ನೀಡಲು ತೆರಳಿದ್ದರು. ಆದರೆ, ಪೊಲೀಸರು ದೂರು ಪಡೆಯುವುದು ಬಿಟ್ಟು ಏಕಾಏಕಿ ಮಂಗಳೂರು ಮೂಲದ ಶೈಲೇಶ್ ಕೊಟ್ಟಾರಿ ಅವರನ್ನು ಬಂಧಿಸಿದ್ದಾರೆ.ಇಲ್ಲಿ ಶೈಲೇಶ್ ತಪ್ಪು ಮಾಡದೇ ಇದ್ದರೂ, ವಿದೇಶಿ ವ್ಯಕ್ತಿಯಾಗಿದ್ದರಿಂದ ಅದನ್ನು ತನಿಖೆ ಮಾಡಲು ಪೊಲೀಸರು ಮುಂದಾಗಿಲ್ಲ. ಈ ಬಗ್ಗೆ ಶೈಲೇಶ್ ಸಂಬಂಧಿಕರು ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಆಗಿಲ್ಲ.

ಯಾರದೋ ತಪ್ಪಿಗೆ ಕರಾವಳಿ ಮೂಲದ ಎರಡನೇ ವ್ಯಕ್ತಿ ಸೌದಿಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದ ಹೆಸರಲ್ಲಿ ಅಮಾಯಕ ವ್ಯಕ್ತಿಯೊಬ್ಬ ಜೈಲು ಪಾಲಾಗಿದ್ದಾನೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೈಲೇಶ್ ಅವರ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸೌದಿ ಸರಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಶೈಲೇಶ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ವಿಶೇಷ ವರದಿ: ಕಿರಣ್, ನ್ಯೂಸ್ ಫಸ್ಟ್, ಮಂಗಳೂರು

News First Live Kannada


Leave a Reply

Your email address will not be published. Required fields are marked *