ಸಾಂಕೇತಿಕ ಚಿತ್ರ
ನಕಲಿ ದಾಖಲೆ ಸೃಷ್ಟಿ ಮಾಡಿ, ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡುತ್ತಿದ್ದ ಗ್ಯಾಂಗ್ನ್ನು ಕೆ.ಆರ್.ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರು ಪುಟ್ಟಸ್ವಾಮಿ, ನಸ್ರೀನ್, ರಾಜಣ್ಣ, ಮಂಜುನಾಥ್, ಆಂಜಿನಪ್ಪ, ಕುಮಾರ್, ಚಂದ್ರಗೌಡ, ಸೊಣ್ಣೆಗೌಡ ಮತ್ತು ಟಿ.ಎಂ. ರಾಜಪ್ಪ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಜೈಲಿನಲ್ಲಿರುವ ಯಾವುದೇ ಆರೋಪಿಗೆ ಬೇಕಾದರೂ ಇವರು ಜಾಮೀನು ಕೊಡಿಸಲು ಸಿದ್ಧರಿರುತ್ತಿದ್ದರು. ಅದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದರು. ರೈತರ ಹೆಸರಿನಲ್ಲಿ ಇರುವ ಆಸ್ತಿಗಳ ದಾಖಲೆಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸುವ ಜತೆ, ಪ್ರತಿಷ್ಠಿತ ಕಂಪನಿಗಳ ಹೆಸರಲ್ಲೂ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು.
ಎಲ್ಲ ನಕಲಿ ದಾಖಲೆಗಳನ್ನೂ ನಾಜೂಕಾಗಿ ತಯಾರಿಸಿ, ಆರೋಪಿಗಳನ್ನು ಜೈಲಿನಿಂದ ಕರೆದುಕೊಂಡು ಬಂದ ಬಳಿಕ, ಅವರಿಂದ ಇಂತಿಷ್ಟು ಎಂದು ಹಣ ಪಡೆಯುತ್ತಿದ್ದರು. 9 ಮಂದಿಯನ್ನು ಬಂಧಿಸಿರುವ ಪೊಲೀಸರು ಅವರಿಂದ ನಾಲ್ಕು ಸರ್ಕಾರಿ ಸೀಲುಗಳು, ನಕಲಿ ಆಧಾರ್, ಪಹಣಿ, ಸಲ್ವೆನ್ಸಿ ಸರ್ಟಿಫಿಕೇಟ್ಗಳನ್ನೂ ವಶಪಡಿಸಿಕೊಂಡಿದ್ದಾರೆ. ಹಲವು ಕಂಪನಿಗಳಿಗೆ ಸೇರಿದ 100ಕ್ಕೂ ಹೆಚ್ಚು ಪಹಣಿಗಳು ಈ ಆರೋಪಿಗಳ ಬಳಿ ಇದ್ದವು. ಇವರು ಚಿಕ್ಕಬಳ್ಳಾಪುರದ ಹರಿ ಗ್ರಾಫಿಕ್ಸ್ ಅಂಗಡಿಯಲ್ಲಿ ನಕಲಿ ದಾಖಲೆಗಳ ತಯಾರು ಮಾಡುತ್ತಿದ್ದರು. ಈ ಬಗ್ಗೆ ಕೆ.ಆರ್.ಮಾರ್ಕೆಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.