ಧಾರವಾಡ: ಸಾಲ ಮಾಡಿ ಆದ್ರು ತುಪ್ಪ ತಿನ್ನು ಅನ್ನೋ ಮಾತಿದೆ. ಹಾಗಾಂತ ಇರೋರೆಲ್ಲಾ ಸಾಲ ಮಾಡೋಕೆ ಆಗೋಲ್ಲಾ, ಹಾಗಂತ ಬ್ಯಾಂಕ್​ನಲ್ಲಿ ಸಿಕ್ಕ ಸಿಕ್ಕರೋಗೆಲ್ಲಾ ಲೋನ್ ಕೂಡ ಕೋಡೋದಿಲ್ಲಾ. ಅದಾಗಿಯೂ ಲೋನ್ ಬೇಕು ಅಂದ್ರೆ ಚಪ್ಪಲಿ ಸವೆಯೋವರೆಗೂ ಅಲೆಯಬೇಕು. ಆದ್ರೆ ಇಷ್ಟೆಲ್ಲಾ ರಿಸ್ಕೇ ಇಲ್ಲದೇ ಅಲ್ಲಿದ್ದ ಒಂದು ಬ್ಯಾಂಕ್​ನಲ್ಲಿ ಒಬ್ಬರಾದ ಮೇಲೆ ಒಬ್ಬರು ಸಾಲ ತೆಗೆದುಕೊಳ್ತಾಯಿದ್ರು. ಅದೇಗಪ್ಪ ಅಂತಾ ನೋಡಿದಾಗಲೇ ಗೊತ್ತಾಗಿದ್ದು ಅಲ್ಲಿ ಬೇರೆಯದ್ದೇ ನಡೆಯುತ್ತಿದೆ ಅಂತಾ. ಹಾಗಾದ್ರೆ ಆ ಬ್ಯಾಂಕ್​ನಲ್ಲಿ ನಡೆದಿದ್ದು ಏನು? ಬ್ಯಾಂಕ್ ಅಧಿಕಾರಿ ಮಾಡಿದ್ದ ಮಹಾಕೆಲಸವೇನು?

ಧಾರವಾಡದ ಗಾಂಧಿನಗರದಲ್ಲಿರುವ ಈ ಬ್ಯಾಂಕ್ ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ತಿಂಗಳಿಗೆ ಕೋಟ್ಯಂತರ ಹಣದ ವ್ಯವಹಾರ ಮಾಡುತ್ತಿರುವ ಬ್ಯಾಂಕ್ ಇದೀಗ ತಮ್ಮದೇ ನೌಕರಸ್ಥರಿಂದ ಕೋಟ್ಯಂತರ ಹಣ ಕಳೆದುಕೊಂಡಿದೆ. ಹೌದು ಗಾಂಧಿ ನಗರದ ಎಸ್.ಬಿ.ಐ ಬ್ಯಾಂಕ್ ನ ಮಾಜಿ ಮ್ಯಾನೇಜರ್​​ನ ಕರ್ಮಕಾಂಡದ ಸ್ಟೋರಿ ಇದು.. ಇದ್ದಿದ್ದು ಕೇವಲ ಎರಡೇ ತಿಂಗಳಾದ್ರೂ ಈ ಬ್ಯಾಂಕ್ ನ ಮಾಡಿದ್ದು ಮಾತ್ರ 2 ಕೋಟಿ ಗೂ ಅಧಿಕ ವಂಚನೆ. ಸಾಮಾನ್ಯವಾಗಿ ಬ್ಯಾಂಕ್ ಗಳಿಗೆ ಸೈಬರ್ ಕ್ರೈಮ್ ಖದೀಮರು ಈ ರೀತಿ ವಂಚನೆ ಮಾಡೋದನ್ನ ನೋಡಿದ್ದೀವಿ, ಆದ್ರೆ ಇಲ್ಲಿ ಮಾತ್ರ ಬ್ಯಾಂಕ್ ನ ಮ್ಯಾನೇಜರ್ ಇಬ್ಬರು ಖಾಯಂ ಪೌರ ಕಾರ್ಮಿಕರ ಜೊತೆಗೆ ಸೇರಿಕೊಂಡು ಬ್ಯಾಂಕ್ ಗೆ ವಂಚಿಸಿದ್ದಾರೆ.

ಮಲ್ಲಿಕಾರ್ಜುನ

2019ರ ಏಪ್ರಿಲ್ ನಿಂದ ಜೂನ್ ವರೆಗೂ ಕೇವಲ ಎರಡು ತಿಂಗಳು ಮಾತ್ರ ಕಾರ್ಯ ನಿರ್ವಹಿಸಿದ್ದ ಸಿ.ಪಿ ಸಂಧ್ಯಾ ಎನ್ನುವ ಮ್ಯಾನೇಜರ್ ತನ್ನದೇ ಬ್ಯಾಂಕ್ ಗೆ ವಂಚಿಸಿದ ಆರೋಪಿಯಾಗಿದ್ದಾರೆ. ಸಾಮಾನ್ಯವಾಗಿ ಸರ್ಕಾರಿ ನೌಕರರಸ್ಥರಿಗೆ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸಿಗೋದು ಕಾಮನ್.. ಅದನ್ನೇ ಬಂಡವಾಳ ಮಾಡಿಕೊಂಡ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಮ್ಯಾನೇಜನ್ ಸಂಧ್ಯಾರನ್ನ ಮೊದಲು ಭೇಟಿಯಾಗಿದ್ದಾರೆ.. ಫೇಕ್ ಪೇ ಸ್ಲಿಪ್ ಗಳನ್ನ ಕ್ರಿಯೇಟ್ ಮಾಡಿ ಸಾಲ ಪಡೆಯಲು ಅನುಮತಿಯನ್ನ ಪಡೆದಿದ್ದಾರೆ. ಮೂವರು ಸೇರಿ 41 ಕ್ಕೂ ಹೆಚ್ಚು ಜನರಿಗೆ ಸಾಲ ಕೊಡಿಸಿದ್ದಾರೆ. ಅದು ಕೂಡ ಒಬ್ಬರ ಪೇ ಸ್ಲಿಪ್ ಮೂಲಕ ಅನ್ನೋದೇ ಇದೀಗ ಹಗರಣದ ಪ್ರಮುಖ ಸಾಕ್ಷ್ಯವಾಗಿದೆ. ಪೇ ಸ್ಲೀಪ್ ನಲ್ಲಿ ಕೇವಲ ಹೆಸರನ್ನ ಬದಲಾವಣೆ ಮಾಡಿ ಇನ್ನುಳಿದ ಸಂಬಳವನ್ನ ಅದಕ್ಕೆ ಜೋಡಿಸಿ ಬ್ಯಾಂಕ್ ಗೆ ಮೋಸ ಮಾಡಿದ್ದಾರೆ.

ಹನುಮಂತಪ್ಪ

ಇನ್ನು ಈಕೆ ಮೂಲತಃ ಬೆಂಗಳೂರು ಆಗಿದ್ದರಿಂದ ಧಾರವಾಡದಲ್ಲಿ ಇದ್ದದ್ದು ಕೇವಲ 2 ತಿಂಗಳು ಮಾತ್ರ.. ಇದೇ ಎರಡು ತಿಂಗಳಲ್ಲಿ ತಮಗಿಷ್ಟ ಬಂದ ಹಾಗೆ ಕಾರ್ಯ ನಿರ್ವಹಿಸುವ ಮೂಲಕ ಅನ್ನ ನೀಡಿದ್ದ ಬ್ಯಾಂಕ್ ಗೆ ದೊಡ್ಡ ವಂಚನೆಯನ್ನೇ ಮಾಡಿದ್ದಾರೆ.. ಪೌರ ಕಾರ್ಮಿಕರಾದ ರವಿಕುಮಾರ ಮಾದರ ಮತ್ತು ಹನುಮಂತ ಬೆಟಗೇರಿ ಜೊತೆ ಸೇರಿ ಪೇ ಸ್ಲಿಪ್ ಗಳಿಗೆಲ್ಲ ಯಾವುದೇ ಶ್ಯುರೀಟಿ ಸಹ ಇಲ್ಲದೆ ಸಾಲ ನೀಡಲಾಗಿದೆ. ಒಟ್ಟು 41 ಜನರಿಗೆ 3 ರಿಂದ 5 ಲಕ್ಷದ ವರೆಗೆ ಸಾಲ ನೀಡಿದ್ದು ಅದರಲ್ಲಿ ಇವರೇ ಪಾಲೇ ಹೆಚ್ಚಾಗಿದೆ.

ಇನ್ನು ಇವರಿಗೆ ಬೇಕಾದವರನ್ನ ಕರೆ ತಂದು ಸಾಲ ಕೊಡಿಸುವ ಭರವಸೆ ಜೊತೆಗೆ ಅವರಿಂದಲೂ ಕಮಿಷನ್ ಪಡೆದಿದ್ದಾರೆ ಅಂತ ಹೇಳಲಾಗುತ್ತಿದೆ. ಈಗಾಗಲೇ ಈ ಇಬ್ಬರು ಪೌರ ಕಾರ್ಮಿಕರ ವಿರುದ್ಧ ಪಾಲಿಕೆ ಸಹ ಕ್ರಮಕ್ಕೆ ಮುಂದಾಗಿದ್ದು ರವಿಕುಮಾರ ಮತ್ತು ಹನುಮಂತನನ್ನ ಕೆಲಸದಿಂದ ವಜಾ ಮಾಡಲಾಗಿದೆ. ಇದರಲ್ಲಿ ಇನ್ನು ಯಾರ್ಯಾರು ಭಾಗಿದಾರರಾಗಿದ್ದಾರೆ ಅನ್ನೋ ತನಿಖೆ ಮುಂದುವರೆದಿದ್ದು, ತನಿಖೆಯ ನಂತರವೇ ಮತ್ತಷ್ಟು ಜನರ ನಿಜಬಣ್ಣ ಬಯಲಾಗಲಿದೆ.

ಗಾಂಧಿನಗರ ಬ್ರ್ಯಾಂಚ್ ನಲ್ಲಿ ಸರಕಾರಿ ನೌಕರರೆಂದು ನಕಲಿ ದಾಖಲಾತಿಗಳನ್ನ ಸೃಷ್ಟಿಸೋಕೆ ಇವರಿಗೆ ಹಲವರ ಸಹಾಯ ಸಹ ಸಿಕ್ಕಿದೆ ಅನ್ನೋ ಆರೋಪ ಸಹ ಇದೆ.. ಸಾಮಾನ್ಯ ಜನರು ವರ್ಷಪೂರ್ತಿ ಬ್ಯಾಂಕ್ ಗೆ ಅಲೆದಾಡಿದರು, ಎಲ್ಲ ದಾಖಲೆಗಳಿದ್ದರೂ ಸಹ ಬ್ಯಾಂಕ್ ನಲ್ಲಿ ಮಾತ್ರ ಸಾಲ ಸಿಗೋದಿಲ್ಲ.. ಆದ್ರೆ ಒಂದೇ ಒಂದು ಪೇ ಸ್ಲಿಪ್ ಗಳಿಗೆ ಹೇಗೆ ಸಾಲ ನೀಡಿದ್ರು ಅನ್ನೋದೇ ಸಾಮಾಜಿಕ ಕಾರ್ಯಕರ್ತರ ಪ್ರಶ್ನೆ.. ಇದರಲ್ಲಿ ಭಾಗಿಯಾದ ಎಲ್ಲರ ಮೇಲೂ ಸಹ ಸರಿಯಾದ ತನಿಖೆ ನಡೆಯಬೇಕು, ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಸರಿಯಾದ ಶಿಕ್ಷೆಯಾಗಬೇಕು ಅನ್ನೋ ಆಗ್ರಹ ಸಹ ಕೇಳಿಬಂದಿದೆ.

ರವಿಕುಮಾರ

ಸುಲಭವಾಗಿ ಸಾಲ ಸಿಕ್ಕತ್ತೆ ಅನ್ನೋದು ಜನಕ್ಕೆ ಗೊತ್ತಾಗ್ತಾ ಇದ್ದಂತೆನೆ ನಾ ಮುಂದು ತಾ ಮುಂದು ಎಂದು ಜನ ಕೂಡಾ ಸಾಲಕ್ಕಾಗಿ ಮುಗಿಬಿದ್ದಿದ್ದಾರೆ. ಎರಡೇ ತಿಂಗಳಲ್ಲಿ ಬರೊಬ್ಬರಿ 41 ಜನಕ್ಕೆ ಕೊಟ್ಯಾಂತರ ರೂಪಾಯಿ ಸಾಲ ನೀಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಠಿಸುವದಕ್ಕಾಗಿ ಧಾರವಾಡದ ಓಂ ಕಂಪ್ಯೂಟರ್ ಸೆಂಟರ್ ಬಳಕೆ ಮಾಡಿಕೊಂಡಿದ್ದಾರೆ ಖದೀಮರು.. ಕಂಪ್ಯೂಟರ್ ಸೆಂಟರ್ ಗೆ ತೆರಳಿ ಅಲ್ಲಿ ತಮಗೆ ಬೇಕಾದವರ ಹೆಸರನ್ನ ಪೇ ಸ್ಲಿಪ್ ಗಳಿಗೆ ಬದಲಿಸಿ ಸಿಕ್ಕ ಸಿಕ್ಕವರಿಗೆ ಸಾಲದ ರೂಪದಲ್ಲಿ ಹಣವನ್ನ ನೀಡಿದ್ದಾರೆ..
ಸದ್ಯ ಇದೆಲ್ಲ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಗೂ ಸಹ ಪೊಲೀಸರ ಆಹ್ವಾನ ಬರುತ್ತೆ ಅನ್ನೋದು ಗೊತ್ತಾಗಿದ್ದೆ ತಡ ನಿರೀಕ್ಷಣಾ ಜಾಮೀನು ಪಡೆದಿದ್ದಾಳೆ ಮ್ಯಾನೇಜರ್ ಸಂಧ್ಯಾ..ವಿದ್ಯಾಗಿರಿ ಪೊಲೀಸರು ಸಹ ಇದೀಗ ಈ ಪ್ರಕರಣದ ತನಿಖೆ ಕೈಗೆಟ್ಟಿಕೊಂಡಿದ್ದು ಸ್ವತಃ ನಗರ ಪೊಲೀಸ್ ಕಮೀಷನರ್ ಲಾಭುರಾಮ್ ಸಹ ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿಯನ್ನ ಪಡೆಯುತ್ತಿದ್ದು ಇದರಲ್ಲಿ ಯಾರ್ಯಾರು ಭಾವಿಯಾಗಿದ್ದಾರೋ ಅವರಿಗೆ ತಕ್ಕ ಶಿಕ್ಷೆಯಾಗಬೇಕಿದೆ.

ಬ್ಯಾಂಕ್​ ಅಧಿಕಾರಿ ಜೊತೆ ಸೇರಿಕೊಂಡ ಇಬ್ಬರು ಪೌರ ಕಾರ್ಮಿಕರು ಕೋಟಿ ಕೋಟಿ ಲೂಟಿ ಹೊಡೆದಿರೋದು ಮೇಲ್ನೋಟಕ್ಕೆ ಇಲ್ಲಿ ಸಾಬೀತಾಗಿದೆ. ಪೊಲೀಸರು ಕೂಡ ತನಿಖೆಯನ್ನ ಚುರುಕುಗೊಳಿಸಿದ್ದಾರೆ. ತನಿಖೆ ಮುಕ್ತಾಯವಾದ ಬಳಿಕವೇ ಸತ್ಯ ಬಹಿರಂಗಗೊಳ್ಳೋದು.

The post ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್​​​ಗೆ ಕೋಟಿ ಕೋಟಿ ವಂಚನೆ.. ಮ್ಯಾನೇಜರ್​ ಮಾಡಿದ ಮಹಾಮೋಸ appeared first on News First Kannada.

Source: newsfirstlive.com

Source link