ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಉದ್ಯೋಗ; 91 ಉದ್ಯೋಗಿಗಳ ಮೇಲೆ ಖಾಕಿ ಕಣ್ಣು, ತನಿಖೆಯಿಂದ ಬಯಲಾಗುತ್ತಿದೆ ಸ್ಫೋಟಕ ಮಾಹಿತಿ | Cops file fir against 91 ITI trainees for using fake documents to get job


ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಉದ್ಯೋಗ; 91 ಉದ್ಯೋಗಿಗಳ ಮೇಲೆ ಖಾಕಿ ಕಣ್ಣು, ತನಿಖೆಯಿಂದ ಬಯಲಾಗುತ್ತಿದೆ ಸ್ಫೋಟಕ ಮಾಹಿತಿ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಕಲಿ ಮಾರ್ಕ್ಸ್ ಕಾರ್ಡ್ ಸಲ್ಲಿಸಿ ಉದ್ಯೋಗಗಳಿಸಿಕೊಂಡ 91 ಉದ್ಯೋಗಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ. 2017ರಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನೇಮಕಾತಿ ಪ್ರಾಧಿಕಾರಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಪರೀಕ್ಷಾ ವಿಭಾಗಕ್ಕೆ ದೂರು ನೀಡಿದ್ದವು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ನಕಲಿ ಮಾರ್ಕ್ಸ್ ಕಾರ್ಡ್ ಸಲ್ಲಿಸಿ ಉದ್ಯೋಗಗಳಿಸಿಕೊಂಡ 91 ಉದ್ಯೋಗಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ.

2017ರಲ್ಲಿ ವಿವಿಧ ಸಂಸ್ಥೆಗಳು ನಮ್ಮಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ಉದ್ಯೋಗಿಗಳ ಮಾರ್ಕ್ಸ್ ಕಾರ್ಡ್ ನೈಜತೆ ಬಗ್ಗೆ ಖಚಿತಪಡಿಸಿ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಪರೀಕ್ಷಾ ವಿಭಾಗಕ್ಕೆ ದೂರು ನೀಡಿದ್ದವು. ಬಳಿಕ ದೂರನ್ನು ಗಂಭೀರವಾಗಿ ಪರಿಗಣಿಸಿ ಉದ್ಯೋಗ ಮತ್ತು ತರಬೇತಿ ಇಲಾಖೆ ಮೂರು ಕಮಿಟಿಗಳನ್ನು ರಚಿಸಿತ್ತು. ಈಗ ಇದೇ ಕಮಿಟಿಗಳಿಂದ ಸ್ಫೋಟಕ ತನಿಖಾ ವರದಿ ಹೊರ ಬಂದಿದೆ. 2017ರ ಸೆಪ್ಟೆಂಬರ್, 2018ರ ಜನವರಿ ಹಾಗೂ ಜೂನ್ ನಲ್ಲಿ ರಚಿಸಲಾಗಿದ್ದ ಕಮಿಟಿಗಳಿಂದ ರಿಪೋರ್ಟ್ ಸಲ್ಲಿಕೆಯಾಗಿದ್ದು ಕಮಿಟಿ ರಿಪೋರ್ಟ್ ಪ್ರಕಾರ 91 ಅಭ್ಯರ್ಥಿಗಳು ಐಟಿಐ ತರಬೇತಿ ಸಂಸ್ಥೆಗಳಲ್ಲಿ ಉತೀರ್ಣರಾದವರೇ ಅಲ್ಲ. ಆ ಅಭ್ಯರ್ಥಿಗಳು ನಕಲಿ ಮಾರ್ಕ್ಸ್ ಕಾರ್ಡ್ ಸಲ್ಲಿಸಿ ಉದ್ಯೋಗಗಿಟ್ಟಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಆಯಾ ಇಲಾಖೆ ಮಟ್ಟದಲ್ಲೇ ನಡೆದಿದ್ದ ಕಮಿಟಿಗಳ ತನಿಖೆ ವೇಳೆ 91 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ ಎಂದು ಸಾಬೀತಾಗಿದೆ.

91 ಅಭ್ಯರ್ಥಿಗಳಿಗೆ ಕೆಲಸಗಿಟ್ಟಿಸಿಕೊಳ್ಳಲು ನಕಲಿ ಐಟಿಐ ಮಾರ್ಕ್ಸ್ ಕಾರ್ಡ್ಗಳು ಸಿಕ್ಕಿದ್ದು ಹೇಗೆ?
ಕೆಲವು ಅಭ್ಯರ್ಥಿಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಿಬ್ಬಂದಿ ಮೂಲಕವೇ ನಕಲಿ ಅಂಕಪಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನೂ ಕೆಲವು ಅಭ್ಯರ್ಥಿಗಳು ಬೇರೆ ಕಡೆಗಳಲ್ಲಿ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಂಡು ಉದ್ಯೋಗಗಿಟ್ಟಿಸಿಕೊಂಡಿದ್ದಾರೆಂದು ಕೂಡ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ ಕಮಿಟಿ ರಿಪೋರ್ಟ್ನಲ್ಲಿ ಬಯಲಾಗಿರುವ 91 ಅಭ್ಯರ್ಥಿಗಳೂ ನಕಲಿ ಮಾರ್ಕ್ಸ್ ಕಾರ್ಡ್ ಕೊಟ್ಟು ಕೆಲಸಗಿಟ್ಟಿಸಿಕೊಂಡು ಸರ್ಕಾರಕ್ಕೇ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ತರಬೇತಿ ಮತ್ತು ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್ ದೂರು ಆಧಾರದಲ್ಲಿ 2021ರ ಡಿಸೆಂಬರ್ 23ರಂದೇ ಎಫ್ಐಆರ್ ದಾಖಲಾಗಿದೆ. ಅನುಮಾನವಿರುವ 91 ಅಭ್ಯರ್ಥಿಗಳನ್ನು ಎಫ್ಐಆರ್ ನಲ್ಲಿ ಹೆಸರಿಸಿ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಐಪಿಸಿ ಸೆಕ್ಷನ್ 34, 419, 420, 468, 471ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಪೊಲೀಸ್ ಟೀಮ್ ತನಿಖೆ ನಡೆಸುತ್ತಿದೆ.

ಫೇಕ್ ಮಾರ್ಕ್ಸ್ ಕಾರ್ಡ್ ಕೊಟ್ಟು ಕೆಲಸಗಿಟ್ಟಿಸಿಕೊಂಡಿರುವ ಆ 91 ನಕಲಿ ನೌಕರರು ಎಲ್ಲಿನವರು?
91 ಅಭ್ಯರ್ಥಿಗಳು ಬಹುತೇಕರು ವಿಜಯಪುರ ಜಿಲ್ಲೆ ಸೇರಿದವರು. ಚನ್ನಪಟ್ಟಣ ಹಾಗೂ ಕೆ.ಆರ್.ಪೇಟೆಯ ತಲಾ ಒಬ್ಬರು, ಸುರಪುರ ಹಾಗೂ ಚಿತ್ರದುರ್ಗ ಮೂಲದವರಾಗಿದ್ದಾರೆ. ನಕಲಿ ಮಾರ್ಕ್ಸ್ ಕಾರ್ಡ್ ಆರೋಪವಿರುವ 91 ಅಭ್ಯರ್ಥಿಗಳ ವಂಚನೆ ಕಹಾನಿ ಬಗ್ಗೆ ಪೊಲೀಸರು ತಲಾಷ್ ಶುರು ಮಾಡಿದ್ದಾರೆ. ಅಭ್ಯರ್ಥಿಗೂ ಬಾಯ್ಬಿಡುವ ಮಾಹಿತಿ ಆಧರಿಸಿ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಿಬ್ಬಂದಿ ಶಾಮೀಲಿನ ಬಗ್ಗೆ ತನಿಖೆ ನಡೆಸಲಾಗುತ್ತೆ. ಸುಮಾರು 20 ದಿನಗಳಿಂದ ನಕಲಿ ಮಾರ್ಕ್ಸ್ ಕಾರ್ಡ್ ಮಾಫಿಯಾ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

IPC ಸೆಕ್ಷನ್ ಮಾಹಿತಿ
IPC ಸೆಕ್ಷನ್ 34 -ಒಂದೇ ದುರುದ್ದೇಶದಿಂದ ಹಲವು ಜನ ಸೇರಿ ಮಾಡಿರುವ ವಂಚಕ ಕೃತ್ಯ
IPC ಸೆಕ್ಷನ್ 419 -ವಂಚಕ ಕೃತ್ಯದ ಅಪರಾಧಿಕಗಳಿಗೆ ಮೂರುವರ್ಷದವರೆಗೂ ಶಿಕ್ಷೆ ವಿಧಿಸುವ ಅವಕಾಶ
IPC ಸೆಕ್ಷನ್ 420 -ವಂಚನೆ ಕೃತ್ಯ – IPC ಸೆಕ್ಷನ್ 468 -ವಂಚನೆ ಮಾಡುವ ದುರುದ್ದೇಶದಿಂದಲೇ ನಕಲಿ ದಾಖಲಾತಿ ಸೃಷ್ಟಿ
IPC ಸೆಕ್ಷನ್ 471 -ವಂಚಿಸುವ ದಷ್ಟಿಯಿಂದ ನಕಲಿ ದಾಖಲೆಯನ್ನು ಅಸಲಿ ಎಂದು ಬಿಂಬಿಸುವ ಕೃತ್ಯ

TV9 Kannada


Leave a Reply

Your email address will not be published. Required fields are marked *