ರಾಜ್ಯದಲ್ಲಿ ಕ್ಲೋಸ್ ಡೌನ್ ಮಾಡ್ತಾ ಇದ್ದಂತೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಇದು ಮುಂದಿನ ದಿನಗಳಲ್ಲಿ ಕಂಟಕವೂ ಆಗಬಹುದು. ಕ್ಲೋಸ್ ಡೌನ್ ಮಾಡಿದ ಪರಿಣಾಮ ನಗರಗಳಿಂದ ಲಕ್ಷಾಂತರ ಜನರು ಗ್ರಾಮೀಣ ಪ್ರದೇಶಗಳಿಗೆ ಹೋಗಿದ್ರರಿಂದ ಮುಂದೆ ಹಳ್ಳಿಗಳೇ ಕೊರೊನಾ ಹಾಟ್ ಸ್ಪಾಟ್ ಗಳಾಗಿ ಬಿಡ್ತಾವಾ ಅನ್ನೋ ಆತಂಕ ಶುರುವಾಗಿದೆ.

ಜನರ ಜೊತೆಗೆ ಹಳ್ಳಿ ಹಳ್ಳಿಗೂ ಸೋಂಕಿನ ವಲಸೆ?!
ಯಾರ್ಯಾರಿಗೆ ಕೊರೊನಾ ಬಂದಿದ್ಯೊ ಗೊತ್ತೇ ಇಲ್ಲ
ಈವರೆಗೆ ಸುರಕ್ಷಿತವಾಗಿದ್ದ ರಾಜ್ಯದ ಬಹುತೇಕ ಹಳ್ಳಿಗಳು

ಹೀಗೆ ಸಹಸ್ರ ಸಹಸ್ರ ಜನ ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗಿ ಬಿಟ್ಟಿದ್ದಾರೆ.ಬಸ್ ಗಳ ಮೂಲಕ, ಟ್ರೇನ್ ಗಳ ಮೂಲಕ,ಖಾಸಗಿ ವಾಹನಗಳ ಮೂಲಕ ಗಂಟು ಮೂಟೆ ಸಮೇತ್ ಬೆಂಗಳೂರು ತೊರೆದಿದ್ದಾರೆ. ಬೆಂಗಳೂರು ಮಹಾನಗರ ಒಂದರಿಂದಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ತಮ್ಮ ತಮ್ಮ ಹಳ್ಳಿಗಳಿಗೆ ವಾಪಸ್ ಹೋಗಿದ್ದಾರೆ. ಕನಿಷ್ಠ 14 ದಿನ ಇಲ್ಲಿ ಏನೂ ಮಾಡುವಂತಿಲ್ಲ, ಕಚೇರಿ ರಜೆ, ಶಾಲಾ-ಕಾಲೇಜು ರಜೆ ಅಂತ ಹಲವರು ಹೋಗಿದ್ರೆ, ಇನ್ನು ದಿನಗೂಲಿ ಮಾಡೋರು, ಗಾರ್ಮೆಂಟ್ ಗಳಲ್ಲಿ ಕೆಲಸ ಮಾಡೋರು ಕೆಲಸಾನೇ ಬಂದ್ ಆಗಿದ್ರಿಂದ ಬೆಂಗಳೂರು ತೊರೆದಿದ್ದಾರೆ. ಇವರ ಪ್ರಯಾಣಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ಹಾಗಂತ ಇವರೇನು ಈಗಲೇ ತಮ್ಮೂರಿಗೆ ಹೋಗಲೇಬೇಕೆಂದು ಹೋಗಿಲ್ಲ. ಬದುಕಿನ ಅನಿವಾರ್ಯತೆಯೇ ಇವರನ್ನು ಗಂಟು ಮೂಟೆ ಕಟ್ಟಿಕೊಂಡು ಹೋಗುವಂತೆ ಮಾಡಿ ಬಿಟ್ಟಿದೆ. ಬೆಂಗಳೂರಿನಲ್ಲಿದ್ದರೆ ತುತ್ತು ಅನ್ನಕ್ಕೂ ಪರದಾಡಬೇಕಾಗಬಹುದು ಅಂತ ಸಹಸ್ರಾರು ಜನ ಆತಂಕದಿಂದ ಹೋಗಿದ್ದಾರೆ. ಆದ್ರೆ ಹೀಗೆ ಹೋದ ಲಕ್ಷಾಂತರ ಜನರಿಂದ ಈಗ ಮತ್ತೊಂದು ದೊಡ್ಡ ಸಮಸ್ಯೆ ಸೃಷ್ಟಿಯಾಗುವ ಆತಂಕ ಶುರುವಾಗಿದೆ.

ಬೆಂಗಳೂರಿನಿಂದ ಹೋಗಬೇಕಾದರೂ ಪರೀಕ್ಷೆ ಇಲ್ಲ
ಹಳ್ಳಿಗಳಲ್ಲಂತೂ ಯಾವ ಪರಿಶೀಲನೆಯೂ ಈಗ ಇಲ್ಲ

ಈ ಮಹಾ ಮರುವಲಸೆ ರಾಜ್ಯದ ಹಳ್ಳಿಗಳಲ್ಲಿ ಆತಂಕ ತಂದು ಬಿಟ್ಟಿದೆ. ಕಾರಣ ಬೆಂಗಳೂರಿನಲ್ಲೇ ಈಗ ನಿತ್ಯ ಅತಿ ಹೆಚ್ಚು ಹೊಸ ಕೇಸ್ ಗಳು ಬರ್ತಾ ಇರೋದು. ಬೆಂಗಳೂರು ನಗರ ಕೊರೊನಾ ಹಾಟ್ ಸ್ಪಾಟ್ ಆಗಿ ಬಿಟ್ಟಿದೆ. ಸಾವಿರಾರು ಜನ ಮನೆಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ತಾ ಇರೋದ್ರಿಂದ ಯಾರು ಎಲ್ಲಿದ್ದಾರೆ ,ಯಾರು ರೋಗಿಳು ಅನ್ನೋದೇ ಗೊತ್ತಾಗ್ತಾ ಇಲ್ಲ. ಇಷ್ಟು ದಿನ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದವರು ಈಗ ದಿಢೀರ್ ಹಳ್ಳಿಗಳತ್ತ ಹೋಗಿ ಬಿಟ್ಟರೆ ಇದೇ ಅಪಾಯಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಜನರ ಜೊತೆಗೆ ಹಳ್ಳಿ ಹಳ್ಳಿಗೂ ಸೋಂಕಿನ ವಲಸೆ?  
ಯಾರ್ಯಾರಿಗೆ ಕೊರೊನಾ ಬಂದಿದ್ಯೊ ಗೊತ್ತೇ ಇಲ್ಲ

ಕಳೆದ ಒಂದು ವಾರಗಳ ಅವಧಿಯಲ್ಲಿ ಹಂತ ಹಂತವಾಗಿ ಸಾವಿರಾರು ಜನ ಹಳ್ಳಿಗಳಿಗೆ ಹೋಗಿದ್ದಾರೆ. ನಿನ್ನೆ ರಾತ್ರಿವರೆಗೂ ಮರು ವಲಸೆ ಮುಂದುವರೆದೇ ಇತ್ತು. ಸಾವಿರ ಸಾವಿರ ಬಸ್ ಗಳಲ್ಲಿ ಜನ ತುಂಬಿಕೊಂಡು ಹೋದ್ರು. ಮಹಿಳೆಯರು,ಮಕ್ಕಳು,ವೃದ್ಧರಾದಿಯಾಗಿ ಎಲ್ಲರೂ ಬೆಂಗಳೂರು ಬಿಟ್ರು. ಇವರೆಲ್ಲ ಬೆಳಗಿನ ಹೊತ್ತಿಗೆ ಹಳ್ಳಿಗೆ ಹೋಗಿ ಇಳಿದಿದ್ದಾರೆ. ಹೆಚ್ಚು ಕಡಿಮೆ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡಿದ್ದಾರೆ. ಆದರೆ,ಹೋದವರಲ್ಲಿ ಯಾರಿಗೆ ಸೋಂಕು ತಗುಲಿದ್ಯೋ ಗೊತ್ತಿಲ್ಲ. ಯಾರಾದರೂ ಸೋಂಕಿತರ ಸಂಪರ್ಕಕ್ಕೆ ಬಂದು ಯಾರು ವೈರಸ್ ತಗುಲಿಸಿಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಹೀಗಾಗಿ ಹಳ್ಳಿ ಹಳ್ಳಿಗೂ ಜನರ ಜೊತೆಗೆ ಕೊರೊನಾ ಸೋಂಕು ಕೂಡ ವಲಸೆ ಹೊರಟು ಬಿಟ್ಟಿದ್ಯಾ ಅನ್ನೋ ಅನುಮಾನವೇ ದಂಗು ಬಡಿಸುವ ಹಾಗಿದೆ.

ಬೆಂಗಳೂರಿನಿಂದ ಹೋಗಬೇಕಾದರೂ ಟೆಸ್ಟ್ ಮಾಡಿಸಿಲ್ಲ
ಆಯಾ ಹಳ್ಳಿಗಳಲ್ಲಂತೂ ಯಾವ ಪರಿಶೀಲನೆಯೂ ಇಲ್ಲ

ಬೆಂಗಳೂರಿನಿಂದ ಹೋಗಬೇಕಾದರೆ ಸಹಸ್ರಾರು ಜನರು ಯಾವುದೇ ಟೆಸ್ಟ್ ಮಾಡಿಸಿರಲಿಲ್ಲ. ಸಣ್ಣ ಪುಟ್ಟ ಅನಾರೋಗ್ಯ ಇದ್ದವರೂ ಹೋಗಿ ಬಿಟ್ಟಿದ್ದಾರೆ. ಹೀಗಾಗಿ ಹೋದ ಲಕ್ಷಾಂತರ ಜನರಲ್ಲಿ ಕೆಲವೇ ಸಾವಿರ ಜನರಲ್ಲಿ ಸೋಂಕಿದ್ದರೂ ಅದು ಹಳ್ಳಿಗಳಿಗೆ ಸ್ಪ್ಟೆಡ್ ಆಗಿ ಬಿಡುತ್ತದೆ. ಇಷ್ಟು ದಿನ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ಕೇಸ್ ಹೆಚ್ಚಾಗ್ತಾ ಇತ್ತು. ಆದ್ರೆ ಈಗ ಲಕ್ಷಾಂತರ ಜನ ಹಳ್ಳಿಗಳಿಗೆ ಸೇರಿದ್ದರಿಂದ ಮುಂದೆ ಹಳ್ಳಿಗಳ ಕಥೆ ಏನಾಗುತ್ತೋ ಅನ್ನುವ ಭೀತಿ ಶುರುವಾಗಿ ಬಿಟ್ಟಿದೆ. ಬೆಂಗಳೂರನ್ನಂತೂ ಬಿಟ್ಟು ನೆಮ್ಮದಿಯಾಗಿ ಊರು ಸೇರಿಕೊಂಡಿದ್ದೇವೆ ಅನ್ನೋ ಭಾವನೆ ಜನರಲ್ಲಿ ಇರಬಹುದು. ಆದ್ರೆ ಹಳ್ಳಿಯಲ್ಲೇ ಇಷ್ಟು ದಿನ ಸುರಕ್ಷಿತವಾಗಿ ಯಾರ ಸಂಪರ್ಕವೂ ಇಲ್ಲದೆ ಇದ್ದವರಿಗೆ ಆತಂಕ ಹೆಚ್ಚಾಗಿದೆ.

ಇಷ್ಟು ದಿನ ಸುರಕ್ಷಿತವಾಗಿದ್ದ ರಾಜ್ಯದ ಬಹುತೇಕ ಹಳ್ಳಿಗಳು
ಈಗ ಮರು ವಲಸೆ ಹೋದವರಿಂದ ಎಲ್ಲೆಡೆ ಹೆಚ್ಚಿದ ಆತಂಕ

ಸಾಮಾನ್ಯವಾಗಿ ಎರಡನೇ ಅಲೆ ಬಂದಾಗಿನಿಂದ ಬೆಂಗಳೂರು,ಮೈಸೂರು,ಮಂಗಳೂರು, ಬೆಳಗಾವಿ, ಕಲಬುರಗಿ ಎಲ್ಲೇ ನೋಡಿದರೂ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಈ ಬಾರಿ ಹಳ್ಳಿಯಲ್ಲಿದ್ದ ಜನ ಈವರೆಗೂ ಸುರಕ್ಷಿತವಾಗಿಯೇ ಇದ್ದರು. ಆದರೆ ಕಳೆದ ವರ್ಷ ಕಲಿತ ಪಾಠ ಸರ್ಕಾರಕ್ಕೂ ಮರೆತು ಹೋಗಿದೆ. ಜನರಿಗೆ ನೆನಪಿದ್ದರೂ ತಮ್ಮ ತಮ್ಮ ಅನಿವಾರ್ಯತೆಗಳಿಂದಾಗಿ ಅವರೆಲ್ಲ ಊರು ತಲುಪಿದ್ದಾರೆ. ಊರಿಗೆ ಹೋದವರನ್ನೆಲ್ಲ ಟೆಸ್ಟ್ ಮಾಡೋರು ಯಾರು, ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಾ ಅಂತ ನೋಡಿದ್ರೆ ಇವ್ಯಾವ ನಿಯಮಗಳೂ ಈ ಬಾರಿ ಇಲ್ಲ. ಹೀಗಾಗಿ ನಗರಗಳಿಂದ ಹೊರಟವರು ಯಾವುದೇ ಟೆಸ್ಟ್,ಕ್ವಾರಂಟೈನ್ ನಿಯಮ ಪಾಲಿಸದೇ ನೇರವಾಗಿ ತಮ್ಮ ತಮ್ಮ ಮನೆ ಸೇರಿಕೊಂಡಿದ್ದಾರೆ. ಮನೆಯಲ್ಲಿದ್ದವರೂ ಬರೋದು ಬೇಡ ಅಂತ ಹೇಳಕಾಗಲ್ಲ, ಸರ್ಕಾರವೂ ಈ ಮರುವಲಸೆ ಹೊರಟ ಜನರನ್ನು ನಿಯಂತ್ರಿಸಲ್ಲ. ಆದ್ರೆ ಕೊರೊನಾಗೆ ಇವೆಲ್ಲ ಗೊತ್ತಾಗುತ್ತಾ, ಅದು ಸಿಕ್ಕಿದ ಕಡೆ ಹರಡಿ ಬಿಡುತ್ತೆ.

ಕೊರೊನಾ ಹಾಟ್ ಸ್ಪಾಟ್ ಆಗಿಬಿಡುತ್ತವಾ ಹಳ್ಳಿಗಳು?
ಹಳ್ಳಿಗಳಲ್ಲಿ ಬಂದರೆ ವೈದ್ಯಕೀಯ ಸೌಲಭ್ಯ ತೀರಾ ಕಷ್ಟ

ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ಹೆಚ್ಚು ವೇಗ ಪಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಿರುವಾಗ ಸೋಂಕು ತಗುಲಿದ್ದರೆ ಬೆಂಗಳೂರಿನಿಂದ ಹೋದವರಿಂದ ಅವರವರ ಹಳ್ಳಿಗಳಲ್ಲಿ ಅಪಾಯ ತಪ್ಪಿದ್ದಲ್ಲ. ಯಾರಿಗಾದರೂ ಒಬ್ಬರಿಗೆ ಬಂದ್ರೆ ಸಾಕು ,ಈ ರೂಪಾಂತರಿ ತಳಿಯ ವೈರಸ್ ಶರವೇಗದಲ್ಲಿ ಹರಡಿ ಬಿಡುತ್ತೆ. ಬೆಂಗಳೂರಿನಲ್ಲೇ ಆಸ್ಪತ್ರೆ ಸಿಗದೇ,ಆಂಬ್ಯುಲೆನ್ಸ್ ಸಿಗದೇ ಜನ ಪರದಾಡುತ್ತಿರೋದನ್ನು ಕಾಣಬಹುದು. ಇನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ಒಂದೊಂದು ಹಳ್ಳಿಗೂ ಕಿಲೋ ಮೀಟರ್ ಗಟ್ಟಲೇ ಅಂತರ ಇರುತ್ತೆ. ಹೀಗಾದಾಗ ಸೋಂಕು ಹರಡಿದರೆ ಸೋಂಕಿತರಿಗೆ ಚಿಕಿತ್ಸೆ ನೀಡೋದೂ ಕಷ್ಟ, ಅವರನ್ನು ಆಸ್ಪತ್ರೆಗೆ ಕರೆದೊಯ್ಯೋದು ಕಷ್ಟ.
ತಾಲೂಕು,ಜಿಲ್ಲಾ ಆಸ್ಪತ್ರೆಗಳೂ ಕೂಡ ಈಗಾಗಲೇ ರಷ್ ಆಗಿದ್ದು ಇನ್ನು ಬೆಂಗಳೂರಿನಿಂದ ಹೋದವರು ಸೇರಿಕೊಂಡು ಬಿಟ್ಟರೆ ಅಲ್ಲಿಯೂ ಜಾಗವೇ ಸಿಗಲ್ಲ. ಇನ್ನು ಆಂಬ್ಯುಲೆನ್ಸ್ ಗಳು ಎಲ್ಲಿ ಅಂತ ಹೋಗುತ್ತೆ,ಯಾರನ್ನಾ ಅಂತ ಕರೆದುಕೊಂಡು ಬರುತ್ತೆ. ಹೀಗಾಗಿ ಹಳ್ಳಿಗಳು ಕೊರೊನಾ ಹಾಟ್ ಸ್ಪಾಟ್ ಗಳಾಗಿ ಬಿಟ್ಟರೆ ನಿಯಂತ್ರಣ ಮಾಡೋದು ತೀರಾ ಕಷ್ಟ. ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಸುಲಭವಾದರೂ ಸೋಂಕು ತಗುಲಿದವನು ಮೊದಲೇ ಟೆಸ್ಟ್ ಮಾಡಿಸಿಕೊಳ್ಳದಿದ್ದರೆ ಎಲ್ಲರ ಜೊತೆಗೂ ಓಡಾಡಿಕೊಂಡು ಬಂದಿರ್ತಾನೆ. ದೃಢಪಟ್ಟ ಮೇಲೆ ಉಳಿದವರು ಕಂಗಾಲಾಗುವುದು ಬಿಟ್ಟರೆ ಬೇರೆ ದಾರಿ ಇರಲ್ಲ. ಜಿಲ್ಲೆಗಳಲ್ಲಿ ಟೆಸ್ಟಿಂಗ್ ಎಷ್ಟು ಫಾಸ್ಟಾಗಿದೆ ಅಂತ ನೋಡೋದಾದ್ರೆ ಏಳೆಂಟು ದಿನಗಳಾದ್ರೂ ರಿಪೋರ್ಟ್ ಬರ್ತಾ ಇಲ್ಲ. ಹೀಗಿರುವಾಗ ಕೊರೊನಾ ಕಂಟ್ರೋಲ್ ಆಗೋದು ತೀರಾ ಕಷ್ಟ.

ನಗರಗಳಿಂದ ಊರಿಗೆ ಹೋದವರು ಪ್ರತ್ಯೇಕವಾಗಿರಿ
ಏಳೆಂಟು ದಿನಗಳ ಕಾಲ ಮನೆಯವರಿಂದ ದೂರವಿರಿ

ಬೆಂಗಳೂರು ಅಥವಾ ಇತರ ನಗರಗಳಿಂದ ಯಾರೇ ಹಳ್ಳಿಗೆ ಹೋಗಿರಲಿ ಅಂಥವರು ಒಂದಿಷ್ಟು ದಿನ ಹಳ್ಳಿಯಲ್ಲೇ ಇದ್ದ ಕುಟುಂಬದವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಒಂದಿಷ್ಟು ದಿನ ಪ್ರತ್ಯೇಕವಾಗಿಯೇ ಇದ್ದು ಮುಂದೆ ಯಾವ ಲಕ್ಷಣಗಳೂ ಇಲ್ಲವಾದರೆ ಅರಾಮಾಗಿ ಇರಬಹುದು. ಇಲ್ಲವಾದರೆ ಊರಿಗೆ ಹೋಗಿ ಎಲ್ಲರ ಜೊತೆ ಸೇರಿದ ಮೇಲೆ ನಿಮಗೆ ಕೊರೊನಾ ದೃಢಪಟ್ಟರೆ ಅದು ಕುಟುಂಬದ ಇತರ ಸದಸ್ಯರಿಗೂ ಅಪಾಯ ತರುತ್ತದೆ. ಹೀಗಾಗಿ ಏಳೆಂಟು ದಿನಗಳ ಕಾಲ ಪ್ರತ್ಯೇಕವಾಗಿ ಇರಿ. ಇನ್ನು ಸಾಧ್ಯವಾದರೆ ಏನಾದರೂ ಲಕ್ಷಣ ಇದ್ದರೆ ತಕ್ಷಣ ಹತ್ತಿರದ ಟೆಸ್ಟಿಂಗ್ ಸೆಂಟರ್ ಗೆ ಹೋಗಿ ಟೆಸ್ಟ್ ಮಾಡಿಸಿಕೊಳ್ಳಿ. ರಿಪೋರ್ಟ್ ಬರೋವರೆಗೂ ಮನೆಯಿವರಿಂದ ದೂರವೇ ಇರಿ.ಇದು ತಜ್ಞರು ನೀಡುವ ಸಲಹೆ.ವಯಸ್ಸಾದವರು,ಮಕ್ಕಳು ಇರುವ ಮನೆಯಲ್ಲಂತೂ ಇನ್ನಷ್ಟು ಎಚ್ಚರಿಕೆ ಅಗತ್ಯ. ಗರ್ಭಿಣಿಯರಿದ್ದರೆ ಅಂಥವರು ಆದಷ್ಟು ದೂರ ಇರೋದು ಸೂಕ್ತ. ಇನ್ನು ಇನ್ನು ಮೇಲೆ ಊರಿಗೆ ಹೋಗುವವರು ಇಲ್ಲೇ ಟೆಸ್ಟ್ ಮಾಡಿಸಿಕೊಂಡು ಹೋಗಬಹುದು. ಟ್ರೇನ್ ಸೌಲಭ್ಯ ಮುಂದುವರೆದಿರೋದ್ರಿಂದ ಹೋಗೋಕೆ ಏನೂ ಸಿಗಲ್ಲ ಅಂತ ಚಿಂತೆ ಮಾಡೋ ಅಗತ್ಯ ಇಲ್ಲ. ಹಳ್ಳಿಗಳಿಗೆ ಹೋದವರು ನೀವು ತೆಗೆದುಕೊಂಡು ಹೋಗಿರುವ ವಸ್ತು,ಬಟ್ಟೆ ಬರೆಗಳನ್ನೂ ಮನೆಯಲ್ಲಿ ಪ್ರತ್ಯೇಕವಾಗಿಯೇ ಇರಿಸಿ. ನೀವು ಊರಿಗೆ ಬಂದಿದ್ದೇ ತಪ್ಪಾಯ್ತು ಅಂತ ಹಳ್ಳಿ ಜನ ಶಾಪ ಹಾಕುವಂತೆ ಮಾಡಿಕೊಳ್ಳಬೇಡಿ.

ಜಿಲ್ಲಾಡಳಿತ,ತಾಲೂಕು ಆಡಳಿತ ಸನ್ನದ್ಧವಾಗಬೇಕು
ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯೂ ಈಗ ಹೆಚ್ಚು
ಮರು ವಲಸೆ ಹೋದವರಿಂದ ಎಲ್ಲೆಡೆ ಹೆಚ್ಚಿದ ಆತಂಕ

ಬೆಂಗಳೂರು ಮಾತ್ರವಲ್ಲದೆ ಹಲವು ಜಿಲ್ಲೆಗಳೂ ಈಗಾಗಲೇ ಕೊರೊನಾದಿಂದ ತತ್ತರಿಸಿವೆ. ನಿತ್ಯ ನೂರಾರು ಹೊಸ ಕೇಸ್ ಗಳು ಬರ್ತಾ ಇರೋದ್ರಿಂದ ಆಸ್ಪತ್ರೆಗಳು ಸಾಕಾಗ್ತಾ ಇಲ್ಲ. ಇನ್ನು ವೈದ್ಯಕೀಯ ಸೌಲಭ್ಯ ಹೆಚ್ಚಿಸಬೇಕಾದ ಅನಿವಾರ್ಯತೆ ಕಂಡು ಬರ್ತಾ ಇದೆ. ಸಹಾಯವಾಣಿ, ಕರೆಯಿಂದ ಮಾತ್ರ ಪ್ರಯೋಜನ ಆಗಲ್ಲ. ಸೌಕರ್ಯ ಇಲ್ಲದಿದ್ರೆ ಸಹಾಯವಾಣಿಗೆ ಕರೆ ಮಾಡಿದ್ರೂ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಡಳಿತ ಎಷ್ಟರ ಮಟ್ಟಿಗೆ ಮುಂದಿನ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಅನ್ನೋದು ಕೂಡ ಮುಖ್ಯವಾಗುತ್ತದೆ. ಆಯಾ ಗ್ರಾಮ ಪಂಚಾಯಿತಿಗಳಿಗಂತೂ ಈಗ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ತಮ್ಮ ವ್ಯಾಪ್ತಿಯಲ್ಲಿ ಯಾರಿಗಾದರೂ ಲಕ್ಷಣ ಅಥವಾ ಕೊರೊನಾ ಬಂದಿದ್ದರೆ ಅಂಥವರನ್ನು ಹೋಮ್ ಐಸೋಲೇನ್ ಅಥವಾ ಆಸ್ಪತ್ರೆಗೆ ದಾಖಲಿಸುವಂತಹ ವ್ಯವಸ್ಥೆ ಮಾಡಬೇಕು. ಹೊರಗಡೆಯಿಂದ ಹೋಗಿದ್ದವರಿಗೆ ಕ್ವಾರಂಟೈನ್ ನಲ್ಲಿರುವಂತೆ ತಿಳುವಳಿಕೆ ಮೂಡಿಸಬೇಕು. ಹಳ್ಳಿ ಹಳ್ಳಿಗಳಲ್ಲೂ ಇಂತಹ ಕೆಲಸ ಆಗದೇ ಇದ್ರೆ ಮುಂದೆ ಅಪಾಯ ಬಂದೊದಗಿದ ಮೇಲೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ.

ಬಹುತೇಕ ಜಿಲ್ಲಾ ಗಡಿಗಳಲ್ಲೂ ಪರಿಶೀಲನೆ ಮಾಡುತ್ತಿಲ್ಲ
ಕಳೆದ ಬಾರಿಯಂತೆ ಯಾವ ಸರ್ಟಿಫಿಕೇಟು ಬೇಕಾಗಿಲ್ಲ
ಕೊರೊನಾ ಹಾಟ್ ಸ್ಪಾಟ್ ಆಗಿಬಿಡುತ್ತವಾ ಹಳ್ಳಿಗಳು?

ರಾಜ್ಯವೆಲ್ಲ ಕ್ಲೋಸ್ ಡೌನ್ ಆಗಿದ್ದರೂ ಜನ ತಮ್ಮ ತಮ್ಮ ಖಾಸಗಿ ವಾಹನಗಳಲ್ಲಿ ಹೋಗ್ತಾನೇ ಇದಾರೆ. ಈಗಾಗಲೇ ಹೋದವರನ್ನೂ ಯಾರೂ ಕೇಳಿಲ್ಲ. ಸಾರ್ವಜನಿಕ ಸಾರಿಗೆಗಳಲ್ಲೂ ಪ್ರಯಾಣ ಮಾಡಿದವರನ್ನೂ ಕೇಳಿಲ್ಲ. ಬಹುತೇಕ ಜಿಲ್ಲಾ ಗಡಿಗಳಲ್ಲಿ ಯಾವುದೇ ಪರಿಶೀಲನೆ ಮಾಡ್ತಾ ಇಲ್ಲ. ಕನಿಷ್ಠ ಥರ್ಮಲ್ ಸ್ಕ್ಯಾನಿಂಗ್ ಕೂಡ ಮಾಡ್ತಾ ಇಲ್ಲ. ಕಳೆದ ಬಾರಿ ಹೊರಗಡೆಯಿಂದ ಹೋಗಿರೋರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಅಂಥ ಯಾವುದೇ ವ್ಯವಸ್ಥೆಯೂ ಇಲ್ಲ. ಹೀಗಾಗಿ ಜಿಲ್ಲಾ ಗಡಿಗಳು ಮುಕ್ತವಾಗಿರೋದ್ರಿಂದ ಸೋಂಕು ಹೊತ್ತು ಸಾಗಿದವರು ಹಳ್ಳಿಗಳಿಗೆ ತಲುಪಿಬಿಟ್ಟಿದ್ದಾರೆ. ಇದೇ ಈಗ ಆತಂಕ ಹೆಚ್ಚಾಗೋಕೆ ಕಾರಣವಾಗಿದೆ. ಹೀಗಾಗಿ ಜಿಲ್ಲಾಡಳಿತ, ಸ್ಥಳೀಯ ಆಡಳಿತದ ಮೂಲಕ, ಜನಪ್ರತಿನಿಧಿಗಳ ಸಹಕಾರದೊಂದಿಗೆ ಹಳ್ಳಿಗಳ ಬಗ್ಗೆ ಹೆಚ್ಚಿನ ಗಮನ ಇಡಲೇಬೇಕು. ಇನ್ನು ಆಯಾ ಹಳ್ಳಿಯವರೂ ಕೂಡ ಎಚ್ಚರಿಕೆಯಿಂದ ಇರಬೇಕು.ಯಾರಾದರೂ ಹೊರಗಿನಿಂದ ಬಂದರೇ ಅವರ ಜೊತೆ ಒಂದಿಷ್ಟು ದಿನ ಅಂತರ ಕಾಯ್ದುಕೊಳ್ಳುವುದೇ ಸೂಕ್ತ. ಇಲ್ಲವಾದರೆ ಯಾರಿಗೆ ಸೋಂಕಿದೆ,ಯಾರಿಗೆ ಇಲ್ಲ ಅನ್ನೋದು ಗೊತ್ತಿಲ್ಲದೇ ಇರೋದ್ರಿಂದ ಸುಲಭವಾಗಿ ಸೋಂಕು ಹರಡಬಹುದು.

ಮಹಾರಾಷ್ಟ್ರದಲ್ಲಿ ಹಳ್ಳಿಗಳಿಗೆ ಹೋದವರಿಂದ ತೊಂದರೆ
ಮುಂಬೈ ನಲ್ಲಿ ಕೇಸ್ ಕಡಿಮೆ,ಜಿಲ್ಲೆಗಳಲ್ಲೂ ಹೆಚ್ಚು ಕೇಸ್!!

ನೆರೆಯ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೇಸ್ ಗಳು ದಾಖಲಾಗ್ತಾ ಇದ್ವು. ಹೀಗಾಗಿ ಮುಂಬೈ ಸೇರಿದಂತೆ ಎಲ್ಲೆಡೆ ಕರ್ಫ್ಯೂ ವಿಧಿಸಲಾಯ್ತು. ಹೆಚ್ಚು ಕಡಿಮೆ ಕ್ಲೋಸ್ ಡೌನ್ ಆಗಿದ್ದರಿಂದ ಮುಂಬೈನಿಂದಲೂ ಲಕ್ಷಾಂತರ ಜನ ಮಹಾರಾಷ್ಟ್ರದ ಹಳ್ಳಿಗಳಿಗೆ ಹೋಗಿದ್ದರು. ಅದರ ಪರಿಣಾಮ ಈಗ ಮುಂಬೈನಲ್ಲಿ ಕೇಸ್ ಕಡಿಮೆ ಬರ್ತಾ ಇದ್ರೆ, ಮಹಾರಾಷ್ಟ್ರದ ಉಳಿದ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗ್ತಾ ಇದೆ. ಈ ಬೆಳವಣಿಗೆ ಕರ್ನಾಟಕದಲ್ಲೂ ಆಗಬಾರದು ಅಂತೇನಿಲ್ಲ.

ಹಳ್ಳಿಗಳಲ್ಲಿ ಬಂದರೆ ವೈದ್ಯಕೀಯ ಸೌಲಭ್ಯ ತೀರಾ ಕಷ್ಟ
ನಗರಗಳಿಂದ ಊರಿಗೆ ಹೋದವರು ಪ್ರತ್ಯೇಕವಾಗಿರಿ
ಏಳೆಂಟು ದಿನಗಳ ಕಾಲ ಮನೆಯವರಿಂದ ದೂರವಿರಿ

ಸೇಫ್ಟಿ ದೃಷ್ಟಿಯಿಂದ ,ಬದುಕಿನ ದೃಷ್ಟಿಯಿಂದ ತಮ್ಮ ತಮ್ಮ ಹಳ್ಳಿಗೆ ಹೋಗೋದು ತಪ್ಪಲ್ಲ. ಆದ್ರೆ ಬೇರೆಯವರಿಗೆ ತೊಂದರೆ ಆಗದಂತೆ,ನಗರದಿಂದ ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ವೈಯಕ್ತಿಕವಾಗಿ ಜವಾಬ್ದಾರಿಯಿಂದ ನಡೆದುಕೊಂಡರೆ ಯಾರಿಗೂ ಅಪಾಯ ಆಗಲ್ಲ. ಇಲ್ಲವಾದರೆ ಆತಂಕ ತಪ್ಪಿದ್ದಲ್ಲ.

The post ನಗರವಾಸಿಗಳು ಭೀಕರ ಕೊರೊನಾನ ನಿಮ್ಮ ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಅದನ್ನೂ ನರಕ ಮಾಡ್ತಿದ್ದೀರಾ? appeared first on News First Kannada.

Source: newsfirstlive.com

Source link