ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ಹೆಸರಿನ ಟ್ವಿಟರ್ ಖಾತೆಯಲ್ಲಿ ಪ್ರಕಟಗೊಂಡಂತಿರುವ ನಕಲಿ ಟ್ವಿಟ್‍ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವವರು ಗೋವುಗಳು ಬಾಯಿಗೆ ಬಾಯಿ ಹಚ್ಚಿ. ಗೋವುಗಳು ಆಮ್ಲಜನಕವನ್ನು ಹೊರಬಿಡುತ್ತವೆ. ಜೈ ಶ್ರೀರಾಮ’ ಎಂದು ಈ ಟ್ವಿಟ್‍ನಲ್ಲಿ ಬರೆಯಲಾಗಿದೆ. ಹಾಗೂ ವ್ಯಕ್ತಿಯೊಬ್ಬರು ಗೋವಿನ ಬಾಯಿಗೆ ತನ್ನ ಬಾಯಿ ತಾಗಿಸಿರುವ ಫೋಟೊವೊಂದನ್ನು ಈ ಟ್ವಿಟ್‍ ಜೊತೆಗೆ ಅಂಟಿಸಲಾಗಿದೆ.

ಬಿಟೌನ್ ಬೋಲ್ಡ್ ಹುಡುಗಿ ಕಂಗನಾ ಅವರು ಟ್ವಿಟ್ ಮಾಡಿದ್ದಾರೆ ಎನ್ನಲಾದ ಈ ಫೇಕ್ ಸಂದೇಶ ವಾಟ್ಸಾಪ್ ಹಾಗೂ ಟ್ವಿಟರಿನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಟ್ವಿಟ್ ಹಂಚಿಕೊಂಡಿರುವ ನೆಟ್ಟಿಜನ್ ಒಬ್ಬರು, ಕಂಗನಾ ಹಾಗೂ ಹಿಂದೂ ಧರ್ಮದ ಅವಹೇಳನಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಫೇಕ್ ಸಂದೇಶದ ಕುರಿತು ಗುಡುಗಿರುವ ಕಂಗನಾ, ನನ್ನಂತಹ ಒಂಟಿ ಮಹಿಳೆಯನ್ನು ಸೋಲಿಸಲು ಪಪ್ಪು ಪಕ್ಷ ಹಾಗೂ ಸಿನಿಮಾ ರಂಗದ ಕೆಲವರು ಇಂತಹ ಸಾಕಷ್ಟು ಪಿತೂರಿ ಮಾಡುತ್ತಿದ್ದಾರೆ. ಇದಕ್ಕಾಗಿ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಿದ್ದಾರೆ. ಆದರೆ, ಇದರಿಂದ ನನಗೇನು ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದಿದ್ದಾರೆ.

ಇನ್ನು ಕಂಗನಾ ಅವರು ಹಿಂದೂ ಪರವಾಗಿ ಇದ್ದಾರೆ ಎನ್ನುವ ಕೂಗು ಕೇಳಿ ಬರುತ್ತಿದೆ. ಇತ್ತೀಚಿಗೆ ಅವರು ರಂಜಾನ್ ಹಬ್ಬದಂದು ಜನ ಸೇರುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದು ಸಾಕಷ್ಟು ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.

ಸಿನೆಮಾ – Udayavani – ಉದಯವಾಣಿ
Read More