ಬೆಂಗಳೂರು: ನಟಿ ಶಾಂತಿಯವರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಸಚಿವ ಮಣಿಕಂದನ್ ಅವರಿಗಾಗಿ ತಮಿಳುನಾಡು ಪೊಲೀಸರು ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸುತ್ತಿದ್ದರು. ಇಂದು ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಸಮೀಪದ ಹಸಿರು ವ್ಯಾಲಿ ರೆಸಾರ್ಟ್ ನಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ತಮಿಳುನಾಡು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಮಣಿಕಂದನ್ ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದು, ಇಂದು ಬೆಳಗ್ಗೆ ತಮಿಳುನಾಡು ಪೊಲೀಸರು ಬಂಧಿಸಿ, ನಂತರ ಸ್ಥಳೀಯ ಆನೇಕಲ್ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೆ ಮಾಹಿತಿ ನೀಡಿ ಚೆನ್ನೈಗೆ ಕರೆದುಕೊಂಡು ಹೋಗಿದ್ದಾರೆ.

ಕೆಲದಿನಗಳ ಹಿಂದೆ ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ 4 ವರ್ಷಗಳ ಕಾಲ ರಹಸ್ಯ ಜೀವನ ನಡೆಸಿ, ಈಗ ವಂಚಿಸಿದ್ದಾರೆ ಎಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ನಟಿಯೊಬ್ಬರು ದೂರು ನೀಡಿದ್ದರು. ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ನಂತರ ಮಾತನಾಡಿದ ನಟಿ, ಮಣಿಕಂದನ್ ನಾಲ್ಕು ವರ್ಷಗಳ ಕಾಲ ನನ್ನ ಜೊತೆ ರಹಸ್ಯ ಜೀವನ ನಡೆಸಿದ್ದರು. ಮದುವೆಯಾಗುವುದಾಗಿ ನಂಬಿಸಿದರು, ಮದುವೆಯಾಗುವಂತೆ ಕೇಳಿದಾಗ ನನಗೆ ಬೆದರಿಕೆ ಒಡ್ಡಿದ್ದಾರೆ. ನನಗೆ ಜೀವ ಬೆದರಿಕೆ ಹಾಕುವುದರ ಜೊತೆಗೆ ಬಲವಂತವಾಗಿ ನನಗೆ ಗರ್ಭಪಾತ ಮಾಡಿಸಿದ್ದಾರೆ ಎಂದು ಶಾಂತಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ ಭರ್ತಿಗೂ ಮುನ್ನ ತಮಿಳುನಾಡಿಗೆ ನೀರು – ರೈತರಿಂದ ಆಕ್ರೋಶ

ಆದ್ಯಾರ್ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಸೆಕ್ಷನ್ 376 (ಅತ್ಯಾಚಾರದ ಶಿಕ್ಷೆ), ಸೆಕ್ಷನ್ 506 (ಐ) (ಕ್ರಿಮಿನಲ್ ಬೆದರಿಕೆ), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತ), ಮತ್ತು ಐಪಿಸಿಯ 323 ಮತ್ತು ಸೆಕ್ಷನ್ 67ಎ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಬಳಿಕ ಇಂದು ತಲೆಮರೆಸಿಕೊಂಡಿದ್ದ ಮಣಿಕಂದನ್ ಅವರನ್ನು ತಮಿಳುನಾಡು ಪೋಲಿಸರು ಬಂಧಿಸಿ ಚೆನ್ನೈಗೆ ಕರೆದುಕೊಂಡು ಹೋಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.

The post ನಟಿ ಶಾಂತಿಗೆ ವಂಚನೆ – ನಾಪತ್ತೆಯಾಗಿದ್ದ ಮಾಜಿ ಸಚಿವ ಮಣಿಕಂದನ್ ಬಂಧನ appeared first on Public TV.

Source: publictv.in

Source link