ಕನ್ನಡದ ಖ್ಯಾತ ನಟ ಶಿವರಾಂ ನಮ್ಮನ್ನಗಲಿದ್ದಾರೆ. ಇಡೀ ಕನ್ನಡ ಚಿತ್ರರಂಗವೇ ಶಿವರಾಂ ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ. ಈ ಸಂಬಂಧ ಮಾತಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ತನ್ನ ಪತಿ ವಿಷ್ಣುವರ್ಧನ್ ಅವರೊಂದಿಗೆ ಶಿವರಾಂ ಸಂಬಂಧ ಹೇಗಿತ್ತು ಎಂಬುದರ ಬಗ್ಗೆ ನೆನೆಪುಗಳು ಬಿಚ್ಚಿಟ್ಟಿದ್ದಾರೆ.
ನಾನು ಚಿತ್ರರಂಗಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ನನಗೆ ಚೆನ್ನೈನಲ್ಲಿ ಶಿವರಾಂ ಪರಿಚಯವಾದರು. ನನಗೆ ಶಿವರಾಂ 55 ವರ್ಷದಿಂದ ಪರಿಚಯ. ನಾನು ಚಿತ್ರರಂಗಕ್ಕೆ ಆಗ ಹೊಸಬಳು. ಅಂದು ನನ್ನೊಂದಿಗೆ ಹಲವಾರು ವಿಚಾರಗಳನ್ನು ಚರ್ಚಿಸಿ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಪತಿ ವಿಷ್ಣುವರ್ಧನ್ ಅವರಿಗೆ ಶಿವರಾಂ ಆಪ್ತ ಸ್ನೇಹಿತರು ಎಂದರು.
ಶಿವರಾಂ ಅವರು ನನ್ನ ತಂದೆಯ ಸ್ಥಾನದಲ್ಲಿದ್ದರು. ನಮ್ಮ ಯಜಮಾನರಿಗೆ ಕಾಲೇಜು ದಿನಗಳಿಂದಲೂ ಶಿವರಾಂ ಪರಿಚಯ. ಇವರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ ಬಹಳಷ್ಟು ಆಸಕ್ತಿ ಇತ್ತು. ಅಯ್ಯಪ್ಪಸ್ವಾಮಿ ಭಕ್ತರು ಕೂಡ ಆಗಿದ್ದರು. ಯಾರಿಗೂ ಕೆಡುಕು ಬಯಸದ ಇಂಥಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಇದರಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳುತ್ತಾ ಕಂಬನಿ ಮಿಡಿದರು. ಯಾವಾಗಲೇ ಸಿಕ್ಕರೂ ತುಂಬಾ ಪ್ರೀತಿಯಿಂದ ಮಾತಾಡುತ್ತಿದ್ದರು ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.