ನನಗಿಂತ ಚಿಕ್ಕವರ ಜೀವ ಮುಖ್ಯ.. ಬೆಡ್ ತ್ಯಾಗ ಮಾಡಿ ಪ್ರಾಣ ಚೆಲ್ಲಿದ RSS ಹಿರಿಯ ಕಾರ್ಯಕರ್ತ

ನನಗಿಂತ ಚಿಕ್ಕವರ ಜೀವ ಮುಖ್ಯ.. ಬೆಡ್ ತ್ಯಾಗ ಮಾಡಿ ಪ್ರಾಣ ಚೆಲ್ಲಿದ RSS ಹಿರಿಯ ಕಾರ್ಯಕರ್ತ

85 ವರ್ಷದ ಹಿರಿಯ ಆರ್​ಎಸ್​ಎಸ್​ ಕಾರ್ಯಕರ್ತರೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬೆಡ್​ ಇಲ್ಲದೇ ತನ್ನ ಮಕ್ಕಳೊಂದಿಗೆ ಕಣ್ಣೀರಿಡುತ್ತಿದ್ದ ಮಹಿಳೆಯ ಪತಿಗೆ ತಮಗೆ ಮೀಸಲಾಗಿದ್ದ ಬೆಡ್ ಬಿಟ್ಟುಕೊಡುವ ಮೂಲಕ ತ್ಯಾಗ ಮೆರೆದಿದ್ದಾರೆ. ಬೆಡ್ ಬಿಟ್ಟುಕೊಟ್ಟು ಮನೆಗೆ ತೆರಳಿ ಮನೆಯಲ್ಲೇ ಚಿಕಿತ್ಸೆ ಪಡೆದ ಅವರು ಮೂರು ದಿನಗಳಲ್ಲೇ ಪ್ರಾಣ ಬಿಟ್ಟಿದ್ದಾರೆ. ಹೀಗೆ ಮತ್ತೊಬ್ಬರಿಗೆ ಬೆಡ್​ ಬಿಟ್ಟುಕೊಟ್ಟು ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ, ಹಿರಿಯ ಆರ್​ಎಸ್​ಎಸ್​ ಕಾರ್ಯಕರ್ತರಾಗಿದ್ದ ನಾರಾಯಣ್ ದಭಾದ್ಕರ್.

ನಾರಾಯಣ್ ದಭಾದ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರನ್ನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲೆಂದು ಅವರ ಮಗಳ ಓಡೋಡಿ ಬಂದಿದ್ದಾರೆ. ಎಲ್ಲಾ ಫಾರ್ಮಾಲಿಟಿಗಳೂ ಮುಗಿದು ಇನ್ನೇನು ಅವರ ತಂದೆಯನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕು ಎನ್ನುವಷ್ಟರಲ್ಲಿತ್ತು. ಈ ವೇಳೆ ನಾರಾಯಣ್ ದಭಾದ್ಕರ್ ಅವರ ಕಣ್ಣಿಗೆ ಅದೇ ಆಸ್ಪತ್ರೆಯಲ್ಲಿ 40 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ತನ್ನ ಪತಿಗೆ ಬೆಡ್ ಸಿಗದಿರುವುದಕ್ಕೆ ಮಕ್ಕಳ ಜೊತೆಗೆ ಕಣ್ಣೀರಿಡುತ್ತಿದ್ದದ್ದು ಕಂಡಿದೆ. ಇದನ್ನ ಗಮನಿಸಿದ 85 ವರ್ಷದ ಹಿರಿ ಜೀವ ನಾರಾಯಣ್ ಅವರು.. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ಗಂಡನಿಗಾಗಿ ತಮಗೆ ಮೀಸಲಿದ್ದ ಬೆಡ್​ನ್ನು ತ್ಯಾಗ ಮಾಡಿದ್ದಾರೆ.

“ನನಗೆ 85 ವರ್ಷವಾಗಿದೆ. ನನ್ನ ಜೀವನವನ್ನು ನಾನು ಬದುಕಿದ್ದೇನೆ, ನೀವು ಈ ಬೆಡ್​ನ್ನು ನನ್ನ ಬದಲಿಗೆ ಅವರಿಗೇ ಕೊಟ್ಟುಬಿಡಿ.. ಅವರ ಮಕ್ಕಳಿಗೆ ಅಪ್ಪನ ಅಗತ್ಯವಿದೆ” ಎಂದು ಆಸ್ಪತ್ರೆಯ ಸಿಬ್ಬಂದಿಗೆ ಮನವಿ ಮಾಡಿ ಬೆಡ್​ ಬಿಟ್ಟುಕೊಟ್ಟಿದ್ದಾರೆ.

ಈ ವೇಳೆ ನಾರಾಯಣ್ ಅವರ ಕುಟುಂಬದವರು ಮತ್ತು ವೈದ್ಯರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಮುಂದುವರೆಸಿ ಎಂದು ಎಷ್ಟೇ ಒತ್ತಾಯ ಮಾಡಿದ್ರೂ ಸಹ ನಾರಾಯಣ್ ತಮಗೆ ಬೆಡ್ ಬೇಡ ಅವರಿಗೇ ನೀಡಿ ಎಂದು ಹಠ ಹಿಡಿದಿದ್ದಾರೆ. ಇದೆಲ್ಲ ಮುಗಿದು ನಾರಾಯಣ್ ಅವರು ಮನೆಗೆ ತೆರಳಿ ಮನೆಯಲ್ಲೇ ಮೂರು ದಿನಗಳ ಕಾಲ ಕೊರೊನಾ ವೈರಸ್​ ಜೊತೆಗೆ ಬಡಿದಾಡಿ ತಮ್ಮ ಪ್ರಾಣ ಚೆಲ್ಲಿದ್ದಾರೆ.

ಈ ವಿಚಾರವನ್ನ ಮತ್ತೋರ್ವ ಆರ್​ಎಸ್​ಎಸ್​ ಕಾರ್ಯಕರ್ತರಾದ ಶಿವಾನಿ ವಖಾರೆ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ಜೀವದ ತ್ಯಾಗದ ಕಥೆಗೆ ಸಾಮಾಜಿಕ ಜಾಲತಾಣದ ಜನರು ಭಾವುಕರಾಗಿ ಹ್ಯಾಟ್ಸ್​​ಆಫ್ ಹೇಳಿದ್ದಾರೆ. ಅಲ್ಲದೇ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

The post ನನಗಿಂತ ಚಿಕ್ಕವರ ಜೀವ ಮುಖ್ಯ.. ಬೆಡ್ ತ್ಯಾಗ ಮಾಡಿ ಪ್ರಾಣ ಚೆಲ್ಲಿದ RSS ಹಿರಿಯ ಕಾರ್ಯಕರ್ತ appeared first on News First Kannada.

Source: newsfirstlive.com

Source link