ಬಾಗಲಕೋಟೆ: ನಾನು ಸಿಎಂ ಸ್ಥಾನದ ಆಕಾಂಕ್ಷಿಯಾಗಿರೋದು ನಿಜ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಸಚಿವ ಉಮೇಶ್ ಕತ್ತಿ, ನಾನು ಆರು ಬಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಸಿಎಂ ಆಗಲು ಬೇಕಾದ ಅರ್ಹತೆ ಎಲ್ಲವೂ ನನಗಿದೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲದ ಕಾರಣ ಸಿಎಂ ಬದಲಾವಣೆ ಆದಾಗ ನೋಡೋಣ ಎಂದರು.

ರಾಜ್ಯ ಸಿಎಂ ಬದಲಾವಣೆಯಾಗಲೀ, ಮುಂದಿನ ಚುನಾವಣೆ ಬರಲಿ. ಆಗ ನಾನು ಸಿಎಂ ಆಗುವ ಬಗ್ಗೆ ನೋಡೋಣ. ನನಗಿನ್ನೂ ವಯಸ್ಸಿದೆ, ಈಗ ಕೇವಲ 60 ವರ್ಷ ಮಾತ್ರ. ಇನ್ನು 15 ವರ್ಷದಲ್ಲಿ ಸಿಎಂ ಆಗಬಹುದು. ಹೀಗಾಗಿ ಮುಂದೆ ಅವಕಾಶ ಬಂದಾಗ ನೋಡೋಣ. ನಮ್ಮ ನಿಮ್ಮ ಕೈಯಲ್ಲೇನಿಲ್ಲ, ಅದು ಹಣೆಬರಹ ಎಂದರು ಉಮೇಶ್ ಕತ್ತಿ.

ನೀವು ಮುಖ್ಯಮಂತ್ರಿಯಾಗುತ್ತೀರಾ ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರಿಸಿದ ಉಮೇಶ್ ಕತ್ತಿ, ರಾಜಕೀಯ ಅಂದ ಮೇಲೆ ಶಾಸಕನಾಗಬೇಕು, ಮಂತ್ರಿಯಾಗಬೇಕು, ಸಿಎಂ ಆಗಬೇಕು. ಎಲ್ಲವೂ ಸರಿಯಾದಲ್ಲಿ ಅವಕಾಶ ಸಿಕ್ಕರೆ ದೇಶದ ಪ್ರಧಾನಿಯಾಗಬೇಕು ಎಂಬ ಆಸೆಯೂ ಇದೆ ಎಂದು ತಮಗಿರುವ ಇಂಗಿತ ವ್ಯಕ್ತಪಡಿಸಿದರು.

ಅದೃಷ್ಟವಶಾತ್ ಸಿಎಂ ಆಗುವ ಅವಕಾಶ ಸಿಕ್ಕರೆ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಬಹುದು. ಜನಕ್ಕೆ ಒಳ್ಳೆಯ ಸರ್ಕಾರ ಕೊಟ್ಟು ತೋರಿಸುತ್ತೇನೆ. ಆಶಾಭಾವನೆ ಇರಲೇಬೇಕು, ನಾನೇನು ಮಠಾಧೀಶನಲ್ಲ. ನಾನು ಯಾವ ಹೈಕಮಾಂಡ್ ಅನ್ನು ಭೇಟಿ ಮಾಡಿಲ್ಲ. ನನ್ನ ಗಮನಕ್ಕೆ ಯಾರೂ ತಂದಿಲ್ಲ, ನನಗ್ಯಾರು ಕೇಳಿಲ್ಲ, ನಾನಾರುಗೂ ಹೇಳಲು ಹೋಗಿಲ್ಲ ಎಂದು ನುಣುಚಿಕೊಂಡರು.

ಸಿಎಂ ಆಗುವ ಅವಕಾಶ ಬಂದ್ರ ಬಿಡೋಲ್ಲ, ಕಿತ್ತಾಡಿ ತೆಗೆದುಕೊಳ್ಳಲು ಆಗೋದಿಲ್ಲ. ಸಿಎಂ ಆದಾಗ ಒಳ್ಳೆಯ ರೀತಿ ಸರ್ಕಾರ ಕೊಡ್ತೀವಿ. ಶಾಸಕರಾಗಿ 224 ಜನ ಆಯ್ಕೆಯಾಗಿದ್ದಾರೆ, ಎಲ್ಲರಿಗೂ ಸಿಎಂ ಆಗುವ ಸಾಮರ್ಥ್ಯ ಇದೆ. ನಾನೇ ಮುಂದಿನ ಸಿಎಂ ಎಂದು ಹೇಳುವುದರಲ್ಲಿ ವಿಶೇಷವೇನಿಲ್ಲ. ಅದೆಲ್ಲವೂ ನಮ್ಮ ಹಣೆಬರಹ ಎಂದು ಸಮರ್ಥಿಸಿಕೊಂಡರು.

ಬಿಜೆಪಿಗೆ ಬಂದವರನ್ನು ಕಾಂಗ್ರೆಸ್ಗೆ ಸೆಳೆಯಲು ಪ್ಲಾನ್ ಮಾಡುತ್ತಿರುವ ಡಿಕೆಶಿಯದ್ದು ತಿರುಕನ ಕನಸು. ಡಿ.ಕೆ ಶಿವಕುಮಾರ್ ಕನಸು ನನಸಾಗಲ್ಲ. ಇದು ಪಂಚಾಯಿತಿ ಚುನಾವಣೆ ಅಲ್ಲ, ರಾಜ್ಯ ರಾಜಕಾರಣ. ಯಾವ ಕಾಂಗ್ರೆಸ್ ರಿವರ್ಸ್ ಆಪರೇಷನ್ಗೂ ನಾವು ಬಗ್ಗಲ್ಲ. ಕಾಂಗ್ರೆಸ್ ಮುಗಿದು ಹೋದ ಕಥೆ. ಡಿ.ಕೆ ಶಿವಕುಮಾರ್ ಆಗಲೀ, ಸಿದ್ದರಾಮಯ್ಯರಾಗಲೀ ಇಬ್ಬರಿಗೂ ಮಾಡಲು ಯಾವುದೇ ಕೆಲಸ ಇಲ್ಲ. ಹೀಗಾಗಿ ಮಾತಾಡುತ್ತಾರೆ, ಇದರಿಂದ ನಮಗೇನು ತೊಂದರೆಯಿಲ್ಲ ಎಂದು ಕಾಲೆಳೆದರು.

The post ನನಗೂ ಸಿಎಂ ಆಗಬೇಕೆಂಬ ಆಸೆ ಇದೆ –ಸಚಿವ ಉಮೇಶ್ ಕತ್ತಿ appeared first on News First Kannada.

Source: newsfirstlive.com

Source link