ಟೀಮ್ ಇಂಡಿಯಾದ ಸಹ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಅವರಲ್ಲಿನ ಅತಿಯಾದ ಶಾಂತ ಸ್ವಭಾವ ನನಗೆ ಇಷ್ಟವಾಗುವುದಿಲ್ಲ ಎಂದು ಮಯಾಂಕ್ ಅಗರ್ವಾಲ್ ಹೇಳಿಕೊಂಡಿದ್ದಾರೆ.
ಇತ್ತೀಚಿಗೆ ಸಂದರ್ಶನದಲ್ಲಿ ಭಾಗವಹಿಸಿದ್ದ ಮಯಾಂಕ್ ಅಗರ್ವಾಲ್ಗೆ ಜೀವನ ಶೈಲಿ ಹಾಗೂ ವೃತ್ತಿ ಬದುಕಿನ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಕೆ.ಎಲ್ ರಾಹುಲ್ ಅವರಲ್ಲಿ ನಿಮಗೆ ಇಷ್ಟವಾಗುವ ಗುಣ ಯಾವುದು ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮಯಾಂಕ್, ‘ಶಾಂತ ಸ್ವಭಾವ’ ಎಂದು ಹೇಳಿದ್ದಾರೆ. ಇದಾದ ಬೆನ್ನಲ್ಲೆ ರಾಹುಲ್ ಅವರಲ್ಲಿ ನೀವು ಇಷ್ಟಪಡದೆ ಇರುವ ಗುಣ ಯಾವುದು ಎಂದು ಕೇಳಲಾಯಿತು. ಇದಕ್ಕೆ ಮರು ಕ್ಷಣವೇ ಉತ್ತರಿಸಿದ ಮಯಾಂಕ್ ಅಗರ್ವಾಲ್, ‘ಕೆಲವೊಮ್ಮೆ ಅವರ ಅತಿಯಾದ ಶಾಂತ ಸ್ವಭಾವ ‘ ಇಷ್ಟ ಆಗೋದಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ನೀವು ಪಂಜಾಬ್ ಕಿಂಗ್ಸ್ ತಂಡದಲ್ಲಿ ಇಲ್ಲವಾದರೆ, ಬೇರೆ ಯಾವ ಫ್ರಾಂಚೈಸಿ ಪರ IPLನಲ್ಲಿ ಆಡಲು ಬಯಸುತ್ತೀರಿ? ಎಂದು ಕೇಳಲಾಯಿತು. ಇದಕ್ಕೆ ಅವರು, ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಪರ ಆಡಲು ಇಷ್ಟಪಡುತ್ತೇನೆಂದು ತಿಳಿಸಿದರು. 2022ರ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ.