ನನಗೆ, ನನ್ನ ಹೆಂಡತಿ ಮಕ್ಕಳಿಗೆ ದಯಾಮರಣ ಕೊಡಿ; ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಬಿಎಂಟಿಸಿ ಡ್ರೈವರ್ | BMTC driver wrote to the President and Prime Minister asking me to euthanize


ನನಗೆ, ನನ್ನ ಹೆಂಡತಿ ಮಕ್ಕಳಿಗೆ ದಯಾಮರಣ ಕೊಡಿ; ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಬಿಎಂಟಿಸಿ ಡ್ರೈವರ್

ಬಿಎಂಟಿಸಿ ( ಸಾಂದರ್ಭಿಕ ಚಿತ್ರ)

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲುಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು: ದಯಾಮರಣ ಕೋರಿ ರಾಷ್ಟ್ರಪತಿ ಮತ್ತು ದೇಶದ ಪ್ರಧಾನಿಗೆ ಬಿಎಂಟಿಸಿ (BMTC) ನೌಕರ ಶಂಬುಲಿಂಗಯ್ಯ ಚಿಕ್ಕಮಠ ಎಂಬುವವರು ಪತ್ರ ಬರೆದಿದ್ದಾರೆ. ತಿನ್ನಲು ಅನ್ನವಿಲ್ಲ. ನಮ್ಮ ಕುಟುಂಬ (Family) ಬೀದಿಗೆ ಬಿದ್ದಿದೆ. ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ನಾನು ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ, ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರೂ ನನಗೆ ನ್ಯಾಯ ಕೊಡಿಸಲಿಲ್ಲ. ಹಾಗಾಗಿ ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ದಯಾಮರಣ ಕೊಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲುಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ವಜಾಗೊಂಡ ಐದರಿಂದ ಹತ್ತು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರ ವಜಾಗೊಂಡ ನೌಕರರಿಗೆ ಮತ್ತೆ ಕೆಲಸ ನೀಡುತ್ತಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರಿಗೆ ಮಾತ್ರ ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ನನಗೆ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಬಿಎಂಟಿಸಿ ಬಸ್ ಚಾಲಕ ಉಲ್ಲೇಖಿಸಿದ್ದಾರೆ.

24 ಗಂಟೆ ಹೋಟೆಲ್ ತೆರೆಯಲು ಬಿಗಿಪಟ್ಟು:
ಬೆಂಗಳೂರಿನಲ್ಲಿ ವಾರದ ಏಳೂ ದಿನ, 24 ಗಂಟೆ ಹೋಟೆಲ್ ತೆರೆಯಲು ಮಾಲೀಕರು ಬಿಗಿಪಟ್ಟು ಹಿಡಿದಿದ್ದಾರೆ. ಈಗಾಗಲೇ ಹೋಟೆಲ್ ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಆದರೆ ಈವರೆಗೆ ಅವಕಾಶ ಸಿಗಲಿಲ್ಲ. ಕಳೆದ ವರ್ಷವೇ ಸರ್ಕಾರಕ್ಕೆ ಅನುಮತಿ ನೀಡಿದ್ದರೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಕೊವಿಡ್ ಹಿನ್ನೆಲೆ ಪೊಲೀಸ್ ಇಲಾಖೆ ಅವಕಾಶ ನಿರಾಕರಿಸಿತ್ತು.

ಮೇ 10ರವರೆಗೆ ಪೊಲೀಸ್ ಇಲಾಖೆಗೆ‌ ಹೋಟೆಲ್ ಮಾಲೀಕರು ಡೆಡ್ ಲೈನ್ ನೀಡಿದ್ದಾರೆ. ಹೋಟೆಲ್ ಓಪನ್​ಗೆ ಅನುಮತಿ ನೀಡದಿದ್ದರೆ, ಗೃಹ ಮಂತ್ರಿಗಳ ಭೇಟಿಗೆ ಮುಂದಾಗುತ್ತಾರೆ. ಸರ್ಕಾರ ಸೂಚಿಸಿದ ಮಾರ್ಗಸೂಚಿಯನ್ನ ಪಾಲಿಸುತ್ತೇವೆ. ಸರ್ಕಾರವೇ ಅನುಮತಿ ಕೊಟ್ಟಿರುವಾಗ ಪೊಲೀಸರು ಯಾಕೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿರುವ ಮಾಲೀಕರು, ಅಂತಿಮವಾಗಿ ಪೊಲೀಸ್ ಇಲಾಖೆ ಹಾಗೂ ಗೃಹ ಮಂತ್ರಿಗಳನ್ನ ಭೇಟಿ ಮಾಡುತ್ತೇವೆ ಎಂದಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ ಸಿಎಂ ಬೊಮ್ಮಾಯಿರನ್ನ ಭೇಟಿ ಮಾಡುತ್ತೇವೆ ಅಂತ  ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *