ಕಾಂಗ್ರೆಸ್ ಪಕ್ಷದ ಇಬ್ಬರು ಹಿರಿಯ ನಾಯಕರ ನಡುವೆ ಕೋಳಿ ಜಗಳ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಮಾರಾಯ್ರೇ. ಒಬ್ಬರು ಇನ್ನೊಬ್ಬರ ವಿರುದ್ಧ ವಾಗ್ದಾಳಿ ನಡೆಸುತ್ತಾ ಕನ್ನಡಿಗರಿಗೆ ಪುಕ್ಕಟೆ ಮರರಂಜನೆ ನೀಡುತ್ತಿದ್ದಾರೆ. ಹೌದು, ನೀವು ಊಹಿಸುತ್ತಿರೋದು ನಿಜ. ನಾವಿಲ್ಲಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ (MLC) ಮತ್ತು ಸಿ ಎಂ ಇಬ್ರಾಹಿಂ (CM Ibrahim) ಹಾಗೂ ಮಾಜಿ ಸಂಸದ ವಿ ಎಸ್ ಉಗ್ರಪ್ಪ (VS Ugrappa) ಬಗ್ಗೆಯೇ ಮಾತಾಡುತ್ತಿದ್ದೇವೆ. ಮಂಗಳವಾರ ಉಗ್ರಪ್ಪನವರು ಇಬ್ರಾಹಿಂ ವಕ್ಫ್ ಆಸ್ತಿ ಕಬಳಿಸಿದ್ದಾರೆಂದು ಆರೋಪ ಮಾಡಿದ ಬಳಿಕ ಅವರ ವಿರುದ್ಧ ಒಂದು ಕೋಟಿ ರೂಪಾಯಿ ಮಾನನಷ್ಟ ಕಟ್ಲೆ (defamation case) ಹೂಡುತ್ತೇನೆ ಅಂತ ವಿಧಾನ ಪರಿಷತ್ ಸದಸ್ಯ ಹೇಳಿದ್ದರು. ಇದಕ್ಕೆ ಉಗ್ರಪ್ಪ ಪ್ರತಿಕ್ರಿಯೆ ನಿರೀಕ್ಷಿಸಲಾಗಿತ್ತು ಮತ್ತು ಖುದ್ದು ಒಬ್ಬ ವಕೀಲರೂ ಆಗಿರುವ ಉಗ್ರಪ್ಪ ಬುಧವಾರ ವಿಧಾನ ಸೌಧದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದರು.
ಉಗ್ರಪ್ಪ ಎಲ್ಲಿದ್ದಾರೆ, ಅವರ ಆರ್ಟಿಕಲ್ ಮತ್ತು ಸೆಕ್ಷನ್ಗಳು ಎಲ್ಲಿ, ಅವರದ್ದು ಆ ಕಡೆಯೊಂದು ಕಾಲು, ಈ ಕಡೆಗೊಂದು ಅಂತೆಲ್ಲ ಇಬ್ರಾಹಿ ಮಾತಾಡಿದ್ದಾರೆ. ಇವು ಸಹ ಮಾನಕ್ಕೆ ಹಾನಿ ಉಂಟುಮಾಡುವ ಮಾತುಗಳೇ. ಅವರು ಮೊನ್ನೆ ತನ್ನನ್ನು ಒಂದು ನಾಯಿಗೆ ಹೋಲಿಕೆ ಮಾಡಿದ್ದಾರೆ. ನಿಷ್ಠೆಯ ಬಗ್ಗೆ ಮಾತಾಡುವ ಇಬ್ರಾಹಿಂ ಅವರು ಸಿದ್ದರಾಮಯ್ಯ, ಡಿಕೆ ಶಿವಕುಮಾರ ಮತ್ತು ಸೋನಿಯಾ ಗಾಂಧಿ ಅವರಿಗೆ ಆ ನಿಷ್ಠೆಯನ್ನು ತೋರಿದ್ದಾರೆಯೇ? ಎಂದು ಉಗ್ರಪ್ಪ ಪ್ರಶ್ನಿಸಿದರು.
ಇಬ್ರಾಹಿಂ ಅವರನ್ನು ಸಿದ್ದರಾಮಯ್ಯ, ಶಿವಕುಮಾರ ದೆಹಲಿಗೆ ಕರೆದುಕೊಂಡು ಹೋಗಿ ಸೋನಿಯಾ ಗಾಂಧಿಯವರನ್ನು ಬೇಟಿ ಮಾಡಿಸಿ ವಿಧಾನ ಪರಿಷತ್ ಸದಸ್ಯ ಮಾಡಿದರು. ಅದಕ್ಕೆ ಇಬ್ರಾಹಿ ಕೃತಜ್ಞತೆ ಉಳ್ಳರಾಗಿರಬೇಕಿತ್ತು, ಆದರೆ ಅದನ್ನು ಬಿಟ್ಟು ಅವರು ಬೇರೇನೇನೋ ಮಾಡುತ್ತಿದ್ದಾರೆ, ಅವರ ನಿಷ್ಠೆ ಎಲ್ಲಿ ಎಂದು ಉಗ್ರಪ್ಪ ಕೇಳಿದರು.