ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಇದರ ನಡುವೆಯೇ ಸಿಎಂ ಬದಲಾವಣೆಯ ಚರ್ಚೆ ಜೋರಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯೋಗೇಶ್ವರ್​​, ನನಗೆ ಸಿಎಂ ಬದಲಾವಣೆ ಮಾಡುವಷ್ಟು ಶಕ್ತಿ ಇಲ್ಲ ಎಂದು ಹೇಳಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್ವರ್​​​, ನನ್ನ ನೋವುಗಳನ್ನ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇನೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿರೋದು ನನ್ನ ಗಮನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಹೈಕಮಾಂಡ್ ಭೇಟಿ ಮಾಡಿ ಚರ್ಚೆ ಮಾಡ್ತೇನೆ. ನಾನು ಬೇರೆಯವರ ಮೇಲೆ ಯಾವುದೇ ಆರೋಪ ಮಾಡಿಲ್ಲ ಎಂದು ಹೇಳಿದರು.

ನನಗೆ ನಮ್ಮ ಪಕ್ಷ ಎಂಎಲ್​​ಸಿ ಮಾಡಿ ಮಂತ್ರಿ ಸ್ಥಾನ ನೀಡಿದೆ. ಆ ಬಗ್ಗೆ ನನಗೆ ಗೌರವ ಇದೆ. ಆದರೆ ಮುಂದಿನ ಚುನಾವಣೆಯಲ್ಲಿ ನಾನು ಗೆಲ್ಲಬೇಕು ಎಂದಿದ್ದೇನೆ ಅದಕ್ಕಾಗಿ ದೆಹಲಿಗೆ ಹೋಗ್ತಾ ಇರ್ತಿನಿ, ಬರ್ತಾ ಇರ್ತೀನಿ. ಎಲ್ಲಾ ಮಾಧ್ಯಮ ಮುಂದೆ ಹೇಳೋಕೆ ಆಗೋದಿಲ್ಲ. ಆದರೆ ನನಗೆ ನಾಯಕತ್ವ ಬದಲಾವಣೆ ಚರ್ಚೆ ಯಾಕೆ ಹುಟ್ಟಿತು ಅಂತ ಗೊತ್ತಿಲ್ಲ. ನನಗೆ ವೈಯಕ್ತಿಕ ಸಮಸ್ಯೆ ಇರುತ್ತೆ. ಅದಕ್ಕಾಗಿ ಹೋಗಿ ಬರ್ತೀನಿ. ಕಳೆದ ವಾರ ಕೂಡಾ ದೆಹಲಿಗೆ ಹೋಗಿದ್ದೆ. ಅದನ್ನು ಯಾಕೆ ಕೇಳ್ತಿದ್ದೀರಾ ಎಂದು ಪ್ರಶ್ನಿಸಿದರು.

ಬಿ.ವೈ. ವಿಜಯೇಂದ್ರ ವಿರುದ್ಧ ಸಿಪಿವೈ ಪರೋಕ್ಷ ಕಿಡಿ
ಇದೇ ವೇಳೆ ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಅಸಮಾಧಾನ ಹೊರಹಾಕಿದ ಯೋಗೇಶ್ವರ್​, ನನ್ನ ಅಧಿಕಾರದಲ್ಲಿ ನನ್ ಮಗ ಮೂಗು ತೂರಿಸಿದ್ರೆ ಸರಿಯಲ್ಲ. ಆದರೆ ರಾಜ್ಯದಲ್ಲಿ ಇದೇ ನಡೆಯುತ್ತಿದೆ. ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಆಗಲ್ಲ. ನಾನೊಬ್ಬ ಸಚಿವ ಇವತ್ತು. ನನ್ನ ಸಚಿವಗಿರಿಯನ್ನು ನನ್ ಮಗ ಚಲಾಯಿಸಿದ್ರೆ ನಾನು ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸೋದು ಇಷ್ಟವಿಲ್ಲ. ಇದನ್ನು ನಾನು ಸೂಕ್ಷ್ಮವಾಗಿ ಹೇಳಿದ್ದೀನಿ, ಅರ್ಥ ಮಾಡ್ಕೊಳ್ಳಿ ಎಂದರು.

ನಮ್ಮ ಸರ್ಕಾರ ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ
ಸದ್ಯ ರಾಜ್ಯದಲ್ಲಿ ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದೆ. ನಮ್ಮ ಸರ್ಕಾರ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತಾಡ್ತಿರೋದು ಗೊತ್ತು. ಅದನ್ನ ಯಾರು ಮಾತಾಡಿಸ್ತಿರೋದು ಅಂತಲೂ ಗೊತ್ತು. ಯಾರ ಕುಮ್ಮಕ್ಕು ಇದೆ ಅಂತಲೂ ಗೊತ್ತು. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಕ್ಕಾಗಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಮುಖ್ಯಮಂತ್ರಿಗಳ ಬದಲಾವಣೆ ನನ್ನ ಮೂಲ ಉದ್ದೇಶ ಅಲ್ಲ. ಅಷ್ಟೊಂದು ಶಕ್ತಿ ನನಗೆ ಇಲ್ಲ. ಆ ಅಭಿಪ್ರಾಯವೂ ನನಗೆ ಇಲ್ಲ. ನಾನು ದೆಹಲಿಗೆ ಬೆಳಗ್ಗೆ ಹೋದೆ, ಸಂಜೆ ಬಂದೆ. ನನ್ನ ದೆಹಲಿ ಭೇಟಿ ಯಾಕೆ ಇಷ್ಟೊಂದು ಸುದ್ದಿಯಾಯ್ತೋ ಗೊತ್ತಿಲ್ಲ. ನನ್ನ ವಿಚಾರ ಎಲ್ಲಿ ಹೇಳ್ಬೇಕೋ ಅಲ್ಲಿ ಹೇಳ್ತೀನಿ. ಅರವಿಂದ ಬೆಲ್ಲದ ಯಾಕೆ ದೆಹಲಿಗೆ ಹೋಗಿದ್ರೋ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

The post ‘ನನ್ನ ಅಧಿಕಾರದಲ್ಲಿ ನನ್ ​​​​ಮಗ ಮೂಗು ತೂರಿಸೋದು ಸರಿಯಲ್ಲ’ ಯೋಗೇಶ್ವರ್ ಕಿಡಿ appeared first on News First Kannada.

Source: newsfirstlive.com

Source link