ನಿನ್ನೆಯಷ್ಟೆ ನಟ-ನಿರ್ದೇಶಕ-ನಿರ್ಮಾಪಕ ಕ್ರೇಜಿ ಸ್ಟಾರ್​ ರವಿಚಂದ್ರನ್​ ತಮ್ಮ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ್ರು. ಮನೆಯಲ್ಲೇ ತಾಯಿ, ಪತ್ನಿ ಹಾಗೂ ಮಕ್ಕಳ ಜೊತೆ ಕಾಲ ಕಳೆಯುತ್ತಿರುವ ರವಿಚಂದ್ರನ್​, ಹುಟ್ಟುಹಬ್ಬವನ್ನೂ ಸರಳವಾಗಿಯೇ ಫ್ಯಾಮಿಲಿ ಜೊತೆಗೆ ಸೆಲೆಬ್ರೇಟ್​ ಮಾಡಿದ್ದಾರೆ. ಇದೇ ಸೆಲೆಬ್ರೇಷನ್​​ ಪ್ರಯುಕ್ತ ಮೀಡಿಯಾಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನನ್ನ ಕೈಗೆ ಒಂದು ರೂಪಾಯಿ ಸಿಕ್ಕಿದ್ರೂ ನಾಳೆಯೇ ಒಂದು ಸಿನಿಮಾದ ಶೂಟಿಂಗ್​ ಶುರು ಮಾಡ್ತೀನಿ’ ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಹೌದು.. ಸಿನಿಮಾವನ್ನ ಬಹಳ ಇಷ್ಟಪಡುವ ನಟ ರವಿಚಂದ್ರನ್​, ನಟನೆಗಿಂತ ನಿರ್ದೇಶನವನ್ನ ತುಂಬಾ ಪ್ರೀತಿಸುತ್ತಾರೆ ಅಂತ ಈ ಹಿಂದೆ ಹೇಳಿಕೊಂಡಿದ್ದರು. ಇದನ್ನ ಮತ್ತೆ ತಮ್ಮ ಈ ಮಾತುಗಳ ಮೂಲಕ ನಿರೂಪಿಸಿದ್ದಾರೆ. ಕೈಗೆ ಎಲ್ಲಿಂದಲೋ ಒಂದು ರೂಪಾಯಿ ಬಂದ್ರೂ ಕೂಡ ಅದನ್ನ ನಾಳೆಯೇ ಸಿನಿಮಾಗಾಗಿ ಖರ್ಚು ಮಾಡೋದಾಗಿ ತಿಳಿಸಿದ್ದಾರೆ.

ಇನ್ನು ನಿನ್ನೆ ತಮ್ಮ ಹುಟ್ಟುಹಬ್ಬವನ್ನ ಜೊತೆಯಾಗಿ ಆಚರಿಸದೇ ಬೇಜಾರಾಗಿದ್ದ ಅಭಿಮಾನಿಗಳಿಗೆ ಕ್ರೇಜಿ ಸ್ಟಾರ್​ ಗುಡ್​ ನ್ಯೂಸ್​ ನೀಡಿದ್ದಾರೆ. ಇತ್ತೀಚಿಗಷ್ಟೆ ಸೋಶಿಯಲ್​ ಮೀಡಿಯಾಗೆ ಎಂಟ್ರಿ ಕೊಟ್ಟಿರುವ ರವಿಚಂದ್ರನ್​, ನಿನ್ನೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸ್ಪೆಷಲ್​ ವೀಡಿಯೋವೊಂದನ್ನ ಯೂಟ್ಯೂಬ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮೂರು ಹೊಸ ಸಿನಿಮಾಗಳ ಬಗ್ಗೆ ತಮ್ಮದೇ ವಿಭಿನ್ನ ಶೈಲಿಯಲ್ಲಿ ಅನೌನ್ಸ್​​ಮೆಂಟ್​ ಕೂಡ ಮಾಡಿದ್ದಾರೆ. ಈ ವಿಡಿಯೋ ನೋಡಿದ ಕ್ರೇಜಿ ಸ್ಟಾರ್​ ಅಭಿಮಾನಿಗಳಿಗೆ ಖುಷಿಯೋ ಖುಷಿ.

‘ಸಿಕ್ಸ್​​​​ಟೀ’, ‘ಗಾಡ್​’​ ಹಾಗೂ ‘ಬ್ಯಾಡ್​ ಬಾಯ್ಸ್​​- 3 in 1’ ಅನ್ನೋ ಟೈಟಲ್​ಗಳಲ್ಲಿ ಮೂರು ಸಿನಿಮಾಗಳ ಬಗ್ಗೆ ನಟ ರವಿಚಂದ್ರನ್​​ ವಿಸ್ತಾರವಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಅಂದ್ಹಾಗೇ, ಈಗಾಗಲೇ ಸಿಕ್ಸ್​​ಟೀ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಮುಂದಿನ ಶೆಡ್ಯೂಲ್​​ ಶುಟ್​ ಆರಂಭವಾಗಲಿದೆ. ಇನ್ನು ಬ್ಯಾಡ್​ ಬಾಯ್ಸ್​​- 3 in 1 ಸಿನಿಮಾದಲ್ಲಿ ಮಕ್ಕಳಾದ ಮನುರಂಜನ್​ ಹಾಗೂ ವಿಕ್ರಂ, ಕ್ರೇಜಿ ಸ್ಟಾರ್​ ಜೊತೆ ಮಿಂಚಲಿದ್ದಾರೆ.

The post ‘ನನ್ನ ಕೈಗೆ ಒಂದು ರೂಪಾಯಿ ಸಿಕ್ಕಿದ್ರೂ ನಾಳೆಯೇ ಶೂಟಿಂಗ್​ ಶುರು’ appeared first on News First Kannada.

Source: newsfirstlive.com

Source link