‘ನನ್ನ ತಮ್ಮನಿಗೆ ನನ್ನದೇ ದೃಷ್ಟಿ ಬಿತ್ತೇನೋ ಅನಿಸುತ್ತಿದೆ’; ‘ಪುನೀತ ನಮನ’ದಲ್ಲಿ ಅಳುತ್ತಲೇ ಮಾತನಾಡಿದ ಶಿವಣ್ಣ | Shivarajkumar Emotional Speech About Puneeth Rajkumar In Puneeth Namana


‘ನನ್ನ ತಮ್ಮನಿಗೆ ನನ್ನದೇ ದೃಷ್ಟಿ ಬಿತ್ತೇನೋ ಅನಿಸುತ್ತಿದೆ’; ‘ಪುನೀತ ನಮನ’ದಲ್ಲಿ ಅಳುತ್ತಲೇ ಮಾತನಾಡಿದ ಶಿವಣ್ಣ

ಪುನೀತ್​ ರಾಜ್​ಕುಮಾರ್​ ಹಾಗೂ ಶಿವರಾಜ್​ಕುಮಾರ್​ ತುಂಬಾನೇ ಅನ್ಯೋನ್ಯವಾಗಿದ್ದರು. ಯಾವುದೇ ವೇದಿಕೆ ಏರಿದರೂ ಪುನೀತ್​ ಅವರನ್ನು ಹೊಗಳುವ ಕೆಲಸವನ್ನು ಶಿವರಾಜ್​ಕುಮಾರ್​ ಅವರು ಮಾಡುತ್ತಿದ್ದರು. ಈಗ ಪುನೀತ್​ ಕಳೆದುಕೊಂಡಿದ್ದು ಶಿವರಾಜ್​ಕುಮಾರ್​ಗೆ ತುಂಬಾನೇ ನೋವು ತಂದಿದೆ. ಈ ನೋವನ್ನು ಅವರು ಸಾಕಷ್ಟು ಬಾರಿ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಅತ್ತಿದ್ದಾರೆ. ಆದಾಗ್ಯೂ ಅವರ ನೋವು ಮಾತ್ರ ಕೊಂಚವೂ ಕಡಿಮೆ ಆಗಿಲ್ಲ. ಇಂದು (ನವೆಂಬರ್​ 16) ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್ ಕಣ್ಣೀರು ಹಾಕಿದ್ದಾರೆ. ಮಾತನಾಡುತ್ತಲೇ ಭಾವುಕರಾಗಿದ್ದಾರೆ.

‘ಮಾತನಾಡೋಕೆ ತುಂಬಾನೇ ಕಷ್ಟ ಆಗುತ್ತಿದೆ. ಎಲ್ಲರೂ ಅವನ ಬಗ್ಗೆ ಮಾತನಾಡುತ್ತಿದ್ದಾರೆ. ಅವನ ಬಗ್ಗೆ ಮಾತನಾಡೋಕೆ ಏನೂ ಉಳಿದಿಲ್ಲ. ಅವನ ಬಗ್ಗೆ ಮಾತನಾಡಿ ಮಾತನಾಡಿ ನನ್ನ ದೃಷ್ಟಿಯೇ ಅವನಿಗೆ ಬಿದ್ದು ಹೋಯ್ತೇನೋ ಅನಿಸುತ್ತದೆ. ಎಲ್ಲರೂ ಯಾಕೆ ಅಷ್ಟೊಂದು ಹೊಗಳ್ತೀಯಾ ಎಂದು ಕೇಳುತ್ತಿದ್ದರು. ಅವನಿಗೆ ಹೊಗಳಿಸಿಕೊಳ್ಳುವ ಅರ್ಹತೆ ಇದೆ. ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಆದರೆ, ಪುನೀತ್​ನಿಂದ ಸ್ಫೂರ್ತಿ ತೆಗೆದುಕೊಂಡೆ. ಶಿವಣ್ಣ ನನ್ನ ಸ್ಫೂರ್ತಿ ಅಂತ ಅಪ್ಪು ಹೇಳ್ತಾನೆ. ಆದರೆ, ಹಾಗಲ್ಲ. ಹೀಗೆ ಹೇಳೋದು ಅವನ ದೊಡ್ಡ ಗುಣ ಅಷ್ಟೆ’ ಎಂದು ಭಾವುಕರಾದರು ಶಿವರಾಜ್​ಕುಮಾರ್​.

‘ಸಾಮಾಜಿಕ ಕೆಲಸವನ್ನು ಇಷ್ಟೊಂದು ಮಾಡಿದಾನೆ. ನನ್ನ ಹತ್ತಿರ ಕಾರು ತಗೋ ಅಂತಿದ್ದ. ನನ್ನ ತಮ್ಮ ರಾಯಲ್​ ಆಗಿ ಹುಟ್ಟಿದಾನೆ, ರಾಯಲ್​ ಆಗಿ ಇರ್ತಾನೆ ಎಂದು ಹೇಳ್ತಿದ್ದೆ. ದೇವರು ಅದಕ್ಕೆ ಅವಕಾಶ ನೀಡಲಿಲ್ಲ. ಇನ್ನುಮುಂದೆ ಅವನನ್ನು ಜೀವಂತವಾಗಿರಿಸಿಕೊಳ್ಳೋಕೆ ಪ್ರಯತ್ನ ಮಾಡಬೇಕು. ಅವನಿಗೆ ದೀಪ ಹಚ್ಚೋದು ನನಗೆ ಇಷ್ಟವಿಲ್ಲ. ಜಾಸ್ತಿ ಮಾತು ಬೇಡ. ನಾನು ಹಾಗೂ ರಾಘು ಅತ್ತಿದ್ದು ನೋಡಿದ್ರೆ ಅಪ್ಪು ತುಂಬಾನೇ ಬೇಸರ ವ್ಯಕ್ತಪಡಿಸುತ್ತಿದ್ದ. ಎಲ್ಲರೂ ಒಂದು ದಿನ ಹೋಗಬೇಕು. ಆದರೆ ಇಷ್ಟು ಬೇಗನೆ ಹೋಗಬೇಕಿತ್ತಾ? ಎಲ್ಲರೂ ನೀಡುತ್ತಿರುವ ಬೆಂಬಲ​ ನೋಡಿದ್ರೆ ಖುಷಿ ಆಗುತ್ತಿದೆ’ ಎಂದಿದ್ದಾರೆ ಶಿವಣ್ಣ.

ಪುನೀತ್​ ಅವರನ್ನು ಸಹೋದರನಂತೆ ಕಂಡಿದ್ದರು ತಮಿಳು ನಟ ವಿಶಾಲ್​. ವಿಶೇಷ ಎಂದರೆ, ವಿಶಾಲ್​ ನೋಡಿದಾಗೆಲ್ಲ ಶಿವರಾಜ್​ಕುಮಾರ್​ ಅವರಿಗೆ ಪುನೀತ್​ ನೆನಪು ಕಾಡುತ್ತದೆಯಂತೆ. ‘ವಿಶಾಲ್​ ನೋಡಿದಾಗ ನನ್ನ ತಮ್ಮನ್ನು ನೋಡಿದ ಹಾಗೆ ಆಗುತ್ತೆ ಎಂದು ಅವಾಗಲೇ ಹೇಳಿದ್ದೆ. ಇವತ್ತು ಹಾಗೆಯೇ ಅನಿಸಿತು’ ಎಂದರು ಶಿವರಾಜ್​ಕುಮಾರ್​.

ಇದನ್ನೂ ಓದಿ: Ashwini Puneeth: ನಿಂತಿಲ್ಲ ಅಶ್ವಿನಿ, ಶಿವಣ್ಣನ​ ಕಣ್ಣೀರು; ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅತ್ತ ಪುನೀತ್​ ಕುಟುಂಬ

‘ಪುನೀತ್ ವಿದಾಯದ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ’​;  ಮೊದಲ ಬಾರಿಗೆ ಮೌನ ಮುರಿದ ಅಶ್ವಿನಿ

TV9 Kannada


Leave a Reply

Your email address will not be published. Required fields are marked *