ಬೆಂಗಳೂರು: ಇಷ್ಟು ದಿನ ಕೋವಿಡ್ ಸಂಕಷ್ಟಕ್ಕೀಡಾಗಿ ಜನಸಾಮಾನ್ಯರು ತಮ್ಮ ಸಂಕಷ್ಟವನ್ನು ಹೇಳಿಕೊಂಡು ಕಣ್ಣೀರಿಡುತ್ತಿರುವುದನ್ನ ಕಂಡು ಮರುಗಿದ್ರಿ. ಆದರೆ ಇಂದು ಶಾಸಕಿಯೊಬ್ಬರು ತಮ್ಮ ತಾಯಿಯನ್ನು ಉಳಿಸಿಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಎದುರೇ ಕಣ್ಣೀರಿಟ್ಟು ಗೋಳಾಡಿರುವ ಘಟನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿದೆ.

ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾ ಶಿವಳ್ಳಿ ಕಣ್ಣೀರಿಟ್ಟ ಶಾಸಕಿಯಾಗಿದ್ದು, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಡಿಯೋ ಕಾನ್ಪರೆನ್ಸ್​ ಮೂಲಕ ನಡೆದ ಸಭೆಯಲ್ಲಿ ಎಲ್ಲಾ ಶಾಸಕರ ಎದುರೇ ಗೋಳಾಡಿದ್ದಾರೆ. ಶಾಸಕಿ ಕಣ್ಣೀರಿಟ್ಟು ಗೋಳಾಡಿದ ದೃಶ್ಯ ನ್ಯೂಸ್​​ಫಸ್ಟ್​​ಗೆ ಲಭ್ಯವಾಗಿದೆ.

ನನ್ನ ತಾಯಿಯ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ, ದಯಮಾಡಿ ನನ್ನ ಹೆತ್ತವಳನ್ನ ಉಳಿಸಿಕೊಡಿ. ನನಗೆ ಕಿಮ್ಸ್​ನ ನಿರ್ದೇಶಕ ರಾಮಲಿಂಗಪ್ಪ ಎಂಬುವರು ಬೆಡ್​ ಕೊಡುತ್ತಿಲ್ಲ ಎಂದು ಕುಸುಮಾ ಶಿವಳ್ಳಿ ಅಳಲು ತೋಡಿಕೊಂಡಿದ್ದಾರೆ.

ಶಾಸಕಿ ಕುಸುಮಾ ಶಿವಳ್ಳಿ ಅವರ ಮನವಿಗೆ ಕೂಡಲೇ ಧಾರವಾಡದ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿದ್ದ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಓರ್ವ ಶಾಸಕಿಯ ತಾಯಿಗೇ ಸೂಕ್ತ ಚಿಕಿತ್ಸೆ ಇಲ್ಲವೆಂದರೆ ಜನಸಾಮಾನ್ಯರ ಕತೆ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರ ಸೂಚನೆ ಬಳಿಕ ಅಧಿಕಾರಿಗಳು ಶಾಸಕಿಯವರ ತಾಯಿಗೆ ಬೆಡ್​ ವ್ಯವಸ್ಥೆ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎನ್ನಲಾಗಿದೆ.

The post ‘ನನ್ನ ತಾಯಿಯನ್ನ ಉಳಿಸಿಕೊಡಿ’ -ಸಿದ್ದರಾಮಯ್ಯ, ಡಿಕೆಎಸ್​​ ಎದುರೇ ಬಿಕ್ಕಿ ಬಿಕ್ಕಿ ಅತ್ತ ಶಾಸಕಿ appeared first on News First Kannada.

Source: newsfirstlive.com

Source link