ಕೋಲಾರ: ಸಿದ್ದರಾಮಯ್ಯನವರೇ ನೀವೇನು ಮಹಾನ್ ಹರಿಶ್ಚಂದ್ರರಾ, ಪಕ್ಷದ ಬಗ್ಗೆ, ನನ್ನ ಬಗ್ಗೆ ಲಘುವಾಗಿ ಮಾತನಾಡಿದರೆ ಹುಷಾರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಜಿಲ್ಲೆಯ ಮೂರು ತಾಲೂಕುಗಳಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾತನಾಡಿದ ಅವರು, ರಾಜಕೀಯ ಮಾಡುವುದನ್ನು ಸಿದ್ದರಾಮಯ್ಯ ಅವರಿಂದ ನಾನು ಕಲಿಯಬೇಕಿಲ್ಲ, 2008ರ ಚುನಾವಣೆಯಲ್ಲಿ ನೀವೇ ಯಡಿಯೂರಪ್ಪ ಅವರ ಬಳಿ ಹಣ ಪಡೆದಿದ್ದೀರಿ. ಇದೇ ನಿಮ್ಮ ಜಾಯಮಾನ, ಯಾವ ಸಂದರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿದ್ದೀರಿ ತಿಳಿದಿದೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಬೆಂಗಳೂರು ನಗರದಲ್ಲಿ 400 ಎಕರೆ ರೀಡೋ ಮಾಡಿದಿರಿ, ಕೆಂಪಣ್ಣ ಆಯೋಗ ವರದಿ ಮಾಡಿದಿರಲ್ಲ ಏನಾಯ್ತು ಎಂದು ಪ್ರಶ್ನೆ ಮಾಡಿದ ಅವರು, ನನ್ನ ಪಕ್ಷವನ್ನು ದುಡ್ಡಿಗಾಗಿ ಅಡಮಾನ ಇಟ್ಟಿಲ್ಲ, ಜೆಡಿಎಸ್ ಹಣಕ್ಕಾಗಿ ಎಲ್ಲೂ ಅಡ ಇಟ್ಟಿಲ್ಲ, ಜನರ ಒಳಿತಿಗಾಗಿ ಇರುವ ಪಕ್ಷದ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಕಿಡಿಕಾರಿದರು.

ಇದೇ ವೇಳೆ ಸರ್ಕಾರದ ವಿರುದ್ಧ ಮಾತಾನಡಿದ ಅವರು, ಕೂಡಲೇ ಕೊರೊನಾ ವಿಚಾರವಾಗಿ ಕಲಾಪ ಕರೆಯಬೇಕು. ಬಿಜೆಪಿ ಪಕ್ಷದ ಶಾಸಕರಲ್ಲೇ ಹೊಂದಾಣಿಕೆ ಇಲ್ಲ, ನಾಯಕತ್ವ ಗೊಂದಲ ದುರದೃಷ್ಟಕರ ವಿಚಾರ, ಸಿಎಂ ಆಗೋದಕ್ಕೆ ಕೆಲವರು ಸೂಟ್ ಹೊಲಿಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲೂ ಸೂಟ್ ಹೊಲಿಸಿಕೊಂಡು ರೆಡಿ ಇದ್ದಾರೆ. 2023ರಲ್ಲಿ ಏನಾಗುತ್ತೆ ಎಂದು ತಿಳಿಯಲಿದೆ ಎಂದು ಟಾಂಗ್ ನೀಡಿದರು. ನಮ್ಮದು ರಾಕ್ಷಸಿ ಸರ್ಕಾರ ಎಂದು ಹೇಳಿ ಹೋದ ಒಬ್ಬ ಶಾಸಕ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಾರಂತೆ, ಬಿಜೆಪಿಯವರು ದಂಗೆ ನಡೆಸುವ ಕಾಲವಲ್ಲ, ಜನರು ಕಷ್ಟದಲ್ಲಿ ಇದ್ದಾರೆ, ಸರ್ಕಾರ ತನ್ನ ಅಸ್ಥಿರತೆ ತೋರಿಸುತ್ತ ಕುಳಿತುಕೊಂಡರೆ ಜನರ ಬದುಕು ಏನಾಗಬೇಕು. ಅಲ್ಲದೆ ಸ್ವಾಮೀಜಿಗಳು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ವಹಿಸಬೇಕು, ನಾಡಿನ ಜನರ ಪರವಾಗಿ ಸ್ವಾಮೀಜಿಗಳು ಇರಬೇಕು ಎಂದರು.

ದೇವೇಗೌಡರು ನನ್ನ ಹೃದಯದಲ್ಲಿ ಇದ್ದಾರೆ ಎಂಬ ಎಚ್.ವಿಶ್ವನಾಥ್ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಯಾರ್ಯಾರು, ಯಾವ ಸಮಯದಲ್ಲಿ ಹೃದಯದಲ್ಲಿ ಇರುತ್ತಾರೆ ಎಂದು ನನಗೆ ಗೊತ್ತಿದೆ. ಬೇಕಾದಾಗ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಡ ಅಂದಾಗ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

The post ನನ್ನ ಪಕ್ಷದ ಬಗ್ಗೆ ಮಾತನಾಡಿದ್ರೆ ಹುಷಾರ್- ಸಿದ್ದುಗೆ ಎಚ್‍ಡಿಕೆ ವಾರ್ನ್ appeared first on Public TV.

Source: publictv.in

Source link