ಕೋಲಾರ: ಜಿಲ್ಲೆಯ ಮಾಲೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ರಾಜ್ಯ ಸರ್ಕಾರ ಕೂಡಲೇ ವಿಧಾನಸಭಾ ಕಲಾಪ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಪಕ್ಷದ ಶಾಸಕರಲ್ಲೇ ಹೊಂದಾಣಿಕೆ ಇಲ್ಲ. ನಾಯಕತ್ವ ಗೊಂದಲ ಒಂದು ದುರಾದೃಷ್ಟಕರ ವಿಚಾರ. ಸಿಎಂ ಆಗೋದಕ್ಕೆ ಕೆಲವರು ಸೂಟ್ ಹೊಲಿಸಿಕೊಂಡಿದ್ದಾರೆ. ಕಾಂಗ್ರೆಸ್​ನಲ್ಲೂ ಸೂಟ್ ಹೊಲಿಸಿಕೊಂಡು ರೆಡಿ ಇದ್ದಾರೆ. 2023 ರಲ್ಲಿ ಏನಾಗುತ್ತೆ ಅಂತ ಗೊತ್ತಾಗುತ್ತೆ. ನಮ್ಮದು ರಾಕ್ಷಸಿ ಸರ್ಕಾರ ಅಂತ ಹೇಳಿ ಹೋದ ಒಬ್ಬ ಶಾಸಕ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡ್ತಾರಂತೆ. ಕೇವಲ ನೀರಾವರಿ ಇಲಾಖೆ ಮಾತ್ರ ಭ್ರಷ್ಟಾಚಾರವಿಲ್ಲ, ಎಲ್ಲ ಇಲಾಖೆಯಲ್ಲೂ ಇದೆ. ಇದು ಬಿಜೆಪಿಯವ್ರು ದಂಗೆ ನಡೆಸುವ ಕಾಲವಲ್ಲ, ಜನರು ಕಷ್ಟದಲ್ಲಿ ಇದ್ದಾರೆ. ಸರ್ಕಾರ ತನ್ನ ಅಸ್ಥಿರತೆ ತೋರಿಸುತ್ತ ಕುಳಿತುಕೊಂಡ್ರೆ ಜನರ ಬದುಕು ಏನಾಗಬೇಕು ಎಂದು ಹೆಚ್​​ಡಿಕೆ ಪ್ರಶ್ನಿಸಿದ್ದಾರೆ.

ಸ್ವಾಮೀಜಿಗಳು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ವಹಿಸಬೇಕು
ಸ್ವಾಮೀಜಿಗಳು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ವಹಿಸಬೇಕು. ನಾಡಿನ ಜನರ ಪರವಾಗಿ ಸ್ವಾಮೀಜಿಗಳು ಇರಬೇಕು. ದೇವೇಗೌಡ್ರು ನನ್ನ ಹೃದಯದಲ್ಲಿ ಇದ್ದಾರೆ ಅನ್ನೋ ಹೆಚ್.ವಿಶ್ವನಾಥ್ ಹೇಳಿಕೆ ಸಂಬಂಧವಾಗಿ ಪ್ರತಿಕ್ರಿಯಿಸಿ ಯಾರ್ಯಾರು ಯಾವ ಟೈಂನಲ್ಲಿ ಹೃದಯದಲ್ಲಿ ಇರುತ್ತಾರೆ ಅಂತ ನನಗೆ ಗೊತ್ತಿದೆ. ಬೇಕಾದಾಗ ಹೃದಯದಲ್ಲಿ ಇಡ್ಕೋತಾರೆ ಬೇಡ ಅಂದಾಗ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಏನು ಮಹಾ ಹರಿಶ್ಚಂದ್ರರಾ?
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಚ್​ಡಿಕೆ.. ನಾವು ಎರಡೂ ಕ್ಷೇತ್ರದ ಬೈ ಎಲೆಕ್ಷನ್​ನಲ್ಲಿ ಅಭ್ಯರ್ಥಿ ಹಾಕಲಿದ್ದೇವೆ. ಬಿಜೆಪಿ ಸರ್ಕಾರ ಬರಬೇಕಾದ್ರೆ ಕಾಂಗ್ರೆಸ್​ನವರೇ ನೇರ ಕಾರಣ. ಬಿಜೆಪಿಯ ದುರಾಡಳಿತದಲ್ಲಿ ಕಾಂಗ್ರೆಸ್​ನವರದು ಸಮಾನ ಪಾಲಿದೆ. ಚುನಾವಣೆಯಲ್ಲಿ ನಾನು ಯಾವನ ಜೊತೆನೂ ರಾಜಿ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಏನು ಮಹಾ ಹರಿಶ್ಚಂದ್ರರಾ? ಬೆಂಗಳೂರಲ್ಲಿ 450 ಎಕರೆ ರೀಡು ಮಾಡಿ ಕೆಂಪಣ್ಣ ಆಯೋಗ ಜಾರಿ ಮಾಡಿ 400-500 ಕೋಟಿಯನ್ನ ಸಿದ್ದರಾಮಯ್ಯ ಕಾಲದಲ್ಲಿ ಲೂಟಿ ಮಾಡಿದ್ದಾರೆ. ಸಿದ್ದರಾಮಯ್ಯನವರಿಂದ ನಾನು ಏನೂ ಕಲಿಯಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

2008 ರಲ್ಲಿ ಆಪರೇಷನ್ ಕಮಲ ಚುನಾವಣೆಯಲ್ಲಿ ನೀವು ಯಡಿಯೂರಪ್ಪನವರ ಬಳಿ ಹಣ ಪಡೆದಿದ್ದೀರಿ ಎಂದು ನಿಮ್ಮ ಆಪ್ತರೇ ಹೇಳಿದ್ದಾರೆ. ಬೈ ಎಲೆಕ್ಷನ್​ನಲ್ಲಿ ಬಿಜೆಪಿ ಗೆಲ್ಲಿಸೋಕೆ ನೀವು ಹಣ ಪಡೆದಿದ್ದೀರಿ. ಯಾವ ಟೈಂ ನಲ್ಲಿ ಕತ್ತು ಕೊಯ್ಯಬೇಕು ಅನ್ನೋದು ಸಿದ್ದರಾಮಯ್ಯನವರ ಜಾಯಮಾನ. ನಿಮಗೆ ಎಷ್ಟು ಕೋಟಿ ಬಂತು, ನಿಮ್ಮ ಜೇಬಲ್ಲಿ ಎಷ್ಟು ಹಣ ಹೋಯ್ತು ಅಂತ ನಿಮ್ಮ ಆಪ್ತರೇ ಹೇಳಿದ್ದಾರೆ. ನನ್ನ ಬಗ್ಗೆ ಮಾತನಾಡುವಾಗ ಹುಷಾರ್. ಮಾತನಾಡುವ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಸಿದ್ದರಾಮಯ್ಯನವರಿಗೆ ಹೆಚ್​ಡಿಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಆಸ್ತಿ ಅಡವಿಟ್ಟು ರಾಜಕೀಯ ಮಾಡು ಅಂತ ನನ್ನಪ್ಪ ಹೇಳಿಕೊಟ್ಟಿಲ್ಲ
ಜಿಂದಾಲ್ ವಿಚಾರದಲ್ಲಿ ನಾನ್ಯಾಕೆ ಕಿಕ್ ಬ್ಯಾಕ್ ಪಡೆದುಕೊಳ್ಳಲಿ. ಹಾಗಿದ್ರೆ ಕ್ಯಾಬಿನೆಟ್ ಸಬ್ ಕಮಿಟಿ ಏನು ಮಾಡ್ತಿದೆ. ರಾಜ್ಯದ ಆಸ್ತಿ ಅಡವಿಟ್ಟು ರಾಜಕೀಯ ಮಾಡು ಅಂತ ನನ್ನಪ್ಪ ಹೇಳಿಕೊಟ್ಟಿಲ್ಲ ಎಂದು ಇದೇ ವೇಳೆ ಹೆಚ್.ವಿಶ್ವನಾಥ್ ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಫೋನ್ ಟ್ಯಾಪಿಂಗ್ ಎಲ್ಲಾ ಸರ್ಕಾರದಲ್ಲೂ ಇದೆ. ನನ್ನ ವಿಚಾರದಲ್ಲೂ ಸಹ ಹುರುಳು ಅಂತ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಐಟಿ ಇಲಾಖೆಯವ್ರು ಆರ್ಥಿಕವಾಗಿ ಉಳ್ಳವರ ಮೇಲೆ ಟ್ಯಾಪಿಂಗ್ ಮಾಡ್ತಿದ್ದಾರೆ ಎಂದು ಹೆಚ್​ಡಿಕೆ ಇದೇ ವೇಳೆ ಹೇಳಿಕೆ ನೀಡಿದ್ದಾರೆ.

The post ನನ್ನ ಬಗ್ಗೆ ಮಾತಾಡುವಾಗ ಹುಷಾರ್.. ಸಿದ್ದರಾಮಯ್ಯಗೆ ಹೆಚ್​ಡಿಕೆ ವಾರ್ನಿಂಗ್ appeared first on News First Kannada.

Source: newsfirstlive.com

Source link