ತುಮಕೂರು: ನನಗೆ ಮಣ್ಣಿನ ಮಗ ಅನ್ನಿ ಅಂತಾ ನಾನ್ಯಾರಿಗಾದ್ರು ಹೇಳಿದ್ನಾ? ನನಗೆ ಮಣ್ಣಿನ ಮಗ ಅಂತ ನಮ್ಮ ತಂದೆ ನಾಮಕರಣ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ನಿಮಿತ್ತ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅವರು ಬಳಗೆರೆಯ ಶಾಸಕ ಗೌರಿಶಂಕರ್ ನಿವಾಸದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ್ದಾರೆ. ಎಂಎಲ್ ಸಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅನಿಲ್ಕುಮಾರ್ ಅವರನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಮತದಾರರನ್ನು ಭೇಟಿಯಾಗುತ್ತಿದ್ದೇವೆ. ಎಲ್ಲರು ಚುನಾವಣೆಯಲ್ಲಿ ಗೆಲ್ಲಲೇಬೇಕು ಹೀಗಾಗಿ ಶಾಸಕರು, ಮಾಜಿ ಶಾಸಕರು, ಮುಖಂಡರು ಎಲ್ಲಾರು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಕ್ಷೇತ್ರಗಳಲ್ಲಿ ಗೆಲ್ಲಲ್ಲು ನಾವು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆಯ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲುವ ಪ್ರಯತ್ನ ಮಾಡುತ್ತೇವೆ.ಇನ್ನು ಮಣ್ಣಿನ ಮಗ ಅಂತಾ ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ, ಯಾರು ನಾಮಕರಣ ಮಾಡಿದ್ರೋ ನನಗೆ ಗೊತ್ತಿಲ್ಲಾ. ಯಾರು ಹೇಳಿದ್ರೋ,ಯಾವಾಗ ಹೇಳಿದ್ರೋ ಅದು ಗೊತ್ತಿಲ್ಲಾ. ಜನ ಪ್ರೀತಿಯಿಂದ ಹಾಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ನಾನು ಯಾರಿಗಾದ್ರು ಆ ರೀತಿ ಕರೆಯುವಂತೆ ಹೇಳಿದ್ನಾ ಎಂದು ಪ್ರಶ್ನಿಸಿದ್ದಾರೆ.